'ರಾಮಾಯಣ' ಸಿನಿಮಾ ನೋಡಿ ರಾಕಿಂಗ್ ಸ್ಟಾರ್ ಈಸ್ ಬ್ಯಾಕ್ ಎಂದು ಅಭಿಮಾನಿಗಳು ಜೈಕಾರ ಹಾಕುತ್ತಿದ್ದಾರೆ. ಇದು ರಾಮಾಯಣ ಅಲ್ಲ ರಾವಣಾಯಣ ಎಂದು ಕಾಮೆಂಟ್ ಮಾಡುವವರು ಇದ್ದಾರೆ. ಅಷ್ಟರಮಟ್ಟಲ್ಲಿ ಮೊದಲ ಭಾಗದ ಚಿತ್ರದಲ್ಲಿ ರಾವಣನಾಗಿ ಯಶ್ ಆವರಿಸಿಕೊಂಡಿದ್ದಾರೆ. ಮೊದಲ ಭಾಗದಲ್ಲಿ ಕೇವಲ 10 ನಿಮಿಷ ಮಾತ್ರ ರಾವಣನಾಗಿ ಯಶ್ ಕಾಣಿಸಿಕೊಂಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿತ್ತು. ಸಿನಿಮಾ ನೋಡಿದ್ಮೇಲೆ ಅಸಲಿ ಸಂಗತಿ ಗೊತ್ತಾಗುತ್ತದೆ.

ಚಿತ್ರದಲ್ಲಿ ಆರಂಭದಲ್ಲೇ ರಾವಣನ ಆರ್ಭಟ ಶುರುವಾಗುತ್ತದೆ. ಶ್ರೀರಾಮನ ಎಂಟ್ರಿ ಆಗುವುದಕ್ಕೆ ಹೆಚ್ಚು ಕಮ್ಮಿ ಅರ್ಧ ಗಂಟೆ ಕಾಯಬೇಕು. ಬಳಿಕ ಸಾಕಷ್ಟು ಸನ್ನಿವೇಶಗಳಲ್ಲಿ ಯಶ್ ದರ್ಶನವಾಗುತ್ತಾ ಹೋಗುತ್ತದೆ. ಸಾಮಾನ್ಯವಾಗಿ ಕ್ಲೈಮ್ಯಾಕ್ಸ್‌ನಲ್ಲಿ ಹೀರೊ ಫೈಟ್ ಮಾಡ್ತಾನೆ. ಇದು ರಾಮಾಯಣ ಚಿತ್ರದ ಮೊದಲ ಭಾಗ. ಕ್ಲೈಮ್ಯಾಕ್ಸ್‌ನಲ್ಲಿ ರಾಮ ಇರುವುದೇ ಇಲ್ಲ. ಜಟಾಯು ಜೊತೆ ರಾವಣ ಯುದ್ಧವೇ ಹೈಲೆಟ್ ಆಗಿದೆ. ಅಷ್ಟರಮಟ್ಟಿಗೆ ಯಶ್ ಚಿತ್ರದಲ್ಲಿ ಜಾಗ ಮಾಡಿಕೊಂಡಿದ್ದಾರೆ.

ರಾವಣನಾಗಿ ಯಶ್ ಲುಕ್, ಗೆಟಪ್, ನಟನೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್ ಮರೆಸಿ ಯಶ್ ಹೆಚ್ಚು ಅಂಕ ಗಿಟ್ಟಿಸಿಬಿಟ್ಟಿದ್ದಾರೆ. ಉತ್ತರ ಭಾರತದಲ್ಲಿ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಈಗಾಗಲೇ ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಕ್ಯಾಮರಾ ಮುಂದೆ ಮಾತನಾಗಿ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಉತ್ತರ ಭಾರತದ ಹೆಣ್ಣು ಮಕ್ಕಳು ಸಿನಿಮಾ ನೋಡಿ ಖುಷಿಯಾಗಿದ್ದಾರೆ. ಯಶ್ ನಟನೆಗೆ ಫಿದಾ ಆಗಿದ್ದಾರೆ.

/news/ramayana-twitter-review-yashs-powerful-ravana-performance-wins-hearts-viewers-praise-visuals-and-making/

ಆಕ್ಷನ್ ಸನ್ನಿವೇಶಗಳಲ್ಲಿ ಯಶ್ ಅಬ್ಬರಿಸಿದ್ದಾರೆ. ಸೆಕೆಂಡ್ ಹಾಫ್‌ನಲ್ಲಿ ದಶಕಂಠನಾಗಿ 10 ವ್ಯಕ್ತಿತ್ವ, ಗುಣಗಳ ದರ್ಶನ ಮಾಡಿಸುವ ಸನ್ನಿವೇಶವೊಂದಿದೆ. ಅದರಲ್ಲಿ ಯಶ್ ನಟನೆಗೆ ಸಿನಿರಸಿಕರು ಫಿದಾ ಆಗಿಬಿಟ್ಟಿದ್ದಾರೆ. ಚಿತ್ರಮಂದಿರಗಳಲ್ಲಿ ಶಿಳ್ಳೆ ಚಪ್ಪಾಳೆ ಹೊಡೆದು ಸಂಭ್ರಮಿಸುತ್ತಿದ್ದಾರೆ. 10 ಬೇರೆ ಬೇರೆ ಗೆಟಪ್‌ಗಳಲ್ಲಿ ಬೇರೆ ಬೇರೆ ವಾಯ್ಸ್‌ನಲ್ಲಿ ಡಬ್ ಮಾಡಿ ಯಶ್ ಮಿಂಚಿದ್ದಾರೆ. ಈ ಸನ್ನಿವೇಶದ ಬಗ್ಗೆ ಬಹಳ ಚರ್ಚೆ ನಡೀತಿದೆ.

ನಮಗೆ ರಣ್‌ಬೀರ್ ನಟನೆ ಇಷ್ಟ. ಆದರೆ ಈ ಚಿತ್ರದಲ್ಲಿ ರಾವಣನೇ ಅಚ್ಚುಮೆಚ್ಚು ಎಂದು ಉತ್ತರ ಭಾರತದ ಮಹಿಳಾ ಪ್ರೇಕ್ಷಕರು ಹೇಳುತ್ತಿದ್ದಾರೆ. ಯಶ್ ಇಡೀ ಸಿನಿಮಾ ತಿಂದು ಹಾಕಿಬಿಟ್ಟಿದ್ದಾರೆ ಎಂದು ಹುಬ್ಬೇರಿಸುತ್ತಿದ್ದಾರೆ. 'ಟಾಕ್ಸಿಕ್' ಸಿನಿಮಾ ನೋಡಿ ಬೇಸರಗೊಂಡಿದ್ದವರು 'ರಾಮಾಯಣ' ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ರಾವಣನಾಗಿ ನಟಿಸುವುದು ಮಾತ್ರವಲ್ಲ ನಿರ್ಮಾಪಕನಾಗಿ ಚಿತ್ರವನ್ನು ಯಶ್ ತೆರೆಗೆ ತಂದಿದ್ದಾರೆ. ಪ್ರತಿವಿಚಾರದ ಬಗ್ಗೆ ಮುತುವರ್ಜಿ ವಹಿಸಿ ಸಿನಿಮಾ ಮಾಡಿದ್ದಾರೆ.

ಆರಂಭದಲ್ಲಿ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ ಚಿತ್ರನಿರ್ಮಾಣ ಸಂಸ್ಥೆಯ ಲೋಗೊವನ್ನು ಸಖತ್ತಾಗಿ ತೋರಿಸಿದ್ದಾರೆ. ದಶಕಂಠ ರಾವಣನನ್ನು ನೆನಪಿಸುವಂತೆ ಆ ಲೋಗೊ ಗ್ರಾಫಿಕ್ಸ್ ನೋಡಬಹುದು. ನಿಧಾನವಾಗಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಅಡ್ವಾನ್ಸ್ ಬುಕ್ಕಿಂಗ್ ನಿರೀಕ್ಷಿತಮಟ್ಟದಲ್ಲಿ ಇಲ್ಲದೇ ಇದ್ದರೂ ಫ್ಯಾನ್ಸ್ ಶೋ ಬಳಿಕ ಬುಕ್ಕಿಂಗ್ ಹೆಚ್ಚಾಗಿದೆ. ಇದರಿಂದ ಸಿನಿಮಾ ಗೆಲ್ಲುವ ಲಕ್ಷಣಗಳು ಗೊತ್ತಾಗುತ್ತಿದೆ.