ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರ ಬಾಕ್ಸಾಫೀಸ್ ಕೊಳ್ಳೆ ಹೊಡೆದರೂ ಸಾಕಷ್ಟು ಟೀಕೆಗೆ ಗುರಿಯಾಗಿದೆ. ವಾಲ್ಮೀಕಿ ರಾಮಾಯಣವನ್ನು ತಿರುಚಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದವರು ಇದ್ದಾರೆ. ಅದರಲ್ಲೂ ರಾವಣ ಪಾತ್ರವನ್ನು ಅತಿಯಾಗಿ ವೈಭವೀಕರಿಸಲಾಗಿದೆ ಎನ್ನುವ ಆರೋಪ ಕೇಳಿಬರ್ತಿದೆ. ಈ ಬಗ್ಗೆ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಪ್ರತಿಕ್ರಿಯಿಸಿದ್ದಾರೆ.

'ರಾಮಾಯಣ' ಚಿತ್ರದ ಬಾಕ್ಸಾಫೀಸ್ ಕಲೆಕ್ಷನ್, ಬಜೆಟ್, ಪ್ರೇಕ್ಷಕರ ರೆಸ್ಪಾನ್ಸ್, ಟೀಕೆಗಳ ಬಗ್ಗೆ ಡಿಡಿ ನ್ಯೂಸ್ ಸಂದರ್ಶನದಲ್ಲಿ ನಮಿತ್ ಮಲ್ಹೋತ್ರಾ ಮಾತನಾಡಿದ್ದಾರೆ. ರಾವಣ ಪಾತ್ರವನ್ನು ಅತಿಯಾಗಿ ವೈಭವೀಕರಿಸಲಾಗಿದೆ ಎನ್ನುವ ಆರೋಪಕ್ಕೆ ಅವರು ಉತ್ತರ ಕೊಟ್ಟಿದ್ದಾರೆ. "ನಾವು ರಾವಣನನ್ನು ಒಳ್ಳೆಯವನಂತೆ ತೋರಿಸಿಲ್ಲ. ಯಶ್ ದೊಡ್ಡ ಸೂಪರ್ ಸ್ಟಾರ್. ಹಾಗಾಗಿ ಅವರ ನಟನೆ ಅಭಿಮಾನಿಗಳಿಗೆ ಇಷ್ಟವಾಗಿದೆ. ಈ ಚಿತ್ರದಲ್ಲಿ ರಾವಣ ಯಾವುದೇ ಒಳ್ಳೆಯ ಕೆಲಸ ಮಾಡಿಲ್ಲ. ಆತನ ಅನಾಹುತಗಳು ಮತ್ತು ಸೃಷ್ಟಿಸಿದ ಭಯಾನಕ ವಾತಾವರಣ ಎಷ್ಟಿತ್ತೆಂದರೆ, ಅವನನ್ನು ತಡೆಯಲು ಸ್ವತಃ ಶ್ರೀರಾಮನೇ ಬರಬೇಕಾಯಿತು" ಎಂದಿದ್ದಾರೆ.

ಮಾತು ಮುಂದುವರೆಸಿರುವ ನಮಿತ್ "ನಾವು ಯೂನಿವರ್ಸಲ್ ಸಿನಿಮಾ ಮಾಡಿದ್ದೇವೆ ಅಂತ ಜನ ಅರ್ಥಮಾಡಿಕೊಳ್ಳಬೇಕು. ನಾವು ಚಿತ್ರದಲ್ಲಿ ರಾವಣನನ್ನು ಹೊಗಳಿಲ್ಲ. ದಶಾನನನಾಗಿದ್ದ ಅವನ ಬಾಲ್ಯದಿಂದ ಹಿಡಿದು, ಅವನು ರಾವಣನಾಗಿ ಹೇಗೆ ಅಷ್ಟು ಶಕ್ತಿಶಾಲಿಯಾದನು ಎನ್ನುವ ಜರ್ನಿ ಮಾತ್ರ ನಾವು ತೋರಿಸಿದ್ದೇವೆ, ರಾವಣ ಅಷ್ಟು ಕೆಟ್ಟ ವ್ಯಕ್ತಿಯಾಗಿದ್ದರೆ, ಬ್ರಹ್ಮ ಮತ್ತು ಶಿವ ಅವನಿಗೆ ಏಕೆ ವರಗಳನ್ನು ಕೊಡುತ್ತಿದ್ರು? ಎಂದು ನಮಿತ್ ಪ್ರಶ್ನಿಸಿದ್ದಾರೆ.

ಶೂರ್ಪನಖಿಯ ಮೂಗು ಕತ್ತರಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ರಾವಣ ಸೀತೆಯನ್ನು ಅಪಹರಣ ಮಾಡಲಿಲ್ಲ. ಅವನು ಒಬ್ಬ ಕಾಮು*ಕ, ಸೀತೆಯ ಮೇಲೆ ಮೋಹಗೊಂಡು ಆ ದುಸ್ಸಾಹಸ ಮಾಡಿದ್ದ. ಸೀತೆ ಕೂದಲು ಹಿಡಿದೆಳೆದು ಆಕೆಯನ್ನು ಬಲವಂತವಾಗಿ ರಥದ ಮೇಲೆ ಎಳೆದುಕೊಂಡು ಹೋದ. ವಾಲ್ಮೀಕಿ ರಾಮಾಯಣದಲ್ಲಿ ಈ ವಿಚಾರ ಹೇಳಲಾಗಿದೆ. ಅದನ್ನೆಲ್ಲಾ ಯಾಕೆ ಚಿತ್ರದಲ್ಲಿ ತೋರಿಸಿಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಪರೋಕ್ಷವಾಗಿ ನಮಿತ್ ಉತ್ತರಿಸಿದ್ದಾರೆ.

ನಾವು ಈ ಚಿತ್ರವನ್ನು ಅಬಾಲವೃದ್ಧರಾಗಿ ಎಲ್ಲರಿಗೂ ತೋರಿಸಲು ಬಯಸುತ್ತೇವೆ. ಸೆನ್ಸಾರ್ ಮಂಡಳಿಯು ಈ ಚಿತ್ರಕ್ಕೆ 'ಎ' (A) ರೇಟಿಂಗ್ ನೀಡುವುದನ್ನು ನಾವು ಬಯಸುವುದಿಲ್ಲ. ಏಕೆಂದರೆ ಇದು ಅಂತಹ ಚಿತ್ರವಲ್ಲ. ರಾಮಾಯಣವನ್ನು ಮಕ್ಕಳು, ವೃದ್ಧರು ಸೇರಿದಂತೆ ಎಲ್ಲರೂ ಒಟ್ಟಿಗೆ ನೋಡುವಂತಿರಬೇಕು. ನಾವು ರಾವಣನನ್ನು ಎಲ್ಲಿಯೂ ವೈಭವೀಕರಿಸಿಲ್ಲ, ರಾವಣ ಬಾಲ್ಯದಲ್ಲಿ ಹೇಗಿದ್ದನು? ಅವನು ಅಷ್ಟು ಶಕ್ತಿಶಾಲಿಯಾಗಲು ಕಾರಣವೇನು? ಎನ್ನುವುದನ್ನು ಮಾತ್ರ ತೋರಿಸಿದ್ದೇವೆ ಎಂದು ನಮಿತ್ ಮಲ್ಹೋತ್ರಾ ವಿವರಿಸಿದ್ದಾರೆ.