ನಟ ಯಶ್ 'ಟಾಕ್ಸಿಕ್' ಸಿನಿಮಾ ಗುಂಗಿನಿಂದ ಹೊರ ಬಂದಿಲ್ಲ. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು. ಶೀಘ್ರದಲ್ಲೇ 'ರಾಮಾಯಣ' ಸಿನಿಮಾ ಮೂಲಕ ರಾಕಿಂಗ್ ಸ್ಟಾರ್ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ದೀಪಾವಳಿ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರಬೇಕಿತ್ತು ಪ್ರಮೋಷನ್ ಕೆಲಸಗಳು ಇನ್ನು ಶುರುವಾಗಿಲ್ಲ.
ಟೀಸರ್, ಟ್ರೈಲರ್ ಬಿಟ್ಟರೆ 'ರಾಮಾಯಣ' ಚಿತ್ರದ ಯಾವುದೇ ಅಪ್‌ಡೇಟ್ ಸಿಕ್ಕಿಲ್ಲ. ಮತ್ತೊಂದು ಟ್ರೈಲರ್ ಬಿಡುಗಡೆಗೆ ಸಿದ್ಧತೆ ನಡೀತಿದೆ. ಅದಕ್ಕೂ ಮುನ್ನ ಚಿತ್ರದ ಹಾಡುಗಳು ಅನಾವರಣ ಆಗಬೇಕಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಿ ದೊಡ್ಡದಾಗಿ ಸಿನಿಮಾ ತೆರೆಗೆ ತರಲು ಚಿತ್ರತಂಡ ಮುಂದಾಗಿದೆ. ಸೋನಿ ಪಿಕ್ಚರ್ಸ್ ಸಂಸ್ಥೆ ಚಿತ್ರದ ಓವರ್‌ಸೀಸ್ ರೈಟ್ಸ್ ಕೊಂಡುಕೊಂಡಿದೆ. ಸಿನಿಮಾ ಬಿಡುಗಡೆಗೂ ಮುನ್ನ ಲಂಡನ್‌ನಲ್ಲಿ ಎ. ಆರ್ ರಹಮಾನ್ ಹಾಗೂ ಹ್ಯಾನ್ಸ್ ಝಮ್ಮರ್ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿ ಪ್ರಚಾರ ಮಾಡ್ತಾರೆ ಎನ್ನಲಾಗ್ತಿದೆ.
ಇದೇ ವಾರದಲ್ಲಿ 'ರಾಮಾಯಣ' ಚಿತ್ರದ ಮೊದಲ ಹಾಡು ಬಿಡುಗಡೆ ಆಗುತ್ತದೆ ಎನ್ನುವ ಚರ್ಚೆ ನಡೀತಿದೆ. ಶ್ರೀರಾಮ ಹಾಗೂ ಸೀತೆ ಮದುವೆ ಸನ್ನಿವೇಶದಲ್ಲಿ ಬರುವ ಹಾಡು ಇದು ಎನ್ನುವ ಮಾತುಗಳು ಕೇಳಿಬರ್ತಿದೆ. ಟ್ರೈಲರ್‌ನಲ್ಲಿ ಈಗಾಗಲೇ ಅದರ ಝಲಕ್ ನೋಡಿದ್ದೇವೆ. ಹಾಡಿಗೆ ಅಂತಿಮ ಸ್ಪರ್ಶ ನೀಡಲಾಗ್ತಿದ್ದು ಶೀಘ್ರದಲ್ಲೇ ಬಿಡುಗಡೆ ಆಗಬಹುದು ಎಂದು ಮಿಡ್‌ಡೇ ಪತ್ರಿಕೆ ವರದಿ ಮಾಡಿದೆ.
ಅಕ್ಟೋಬರ್ 20ರಂದು ಲಂಡನ್ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ತಯಾರಿ ನಡೆಸುತ್ತಿದ್ದಾರೆ. ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಾರೆ ಎನ್ನಲಾಗ್ತಿದೆ. ವಿದೇಶಗಳಲ್ಲಿ ಪ್ರೇಕ್ಷಕರನ್ನು ಸೆಳೆಯಲು ಈ ಕಾರ್ಯಕ್ರಮವನ್ನು ಬಳಸಿಕೊಳ್ಳುತ್ತಾರೆ ಎಂದು ವರದಿಯಾಗಿದೆ. ಎ. ಆರ್ ರಹಮಾನ್ ಹಾಗೂ ಹ್ಯಾನ್ಸ್ ಝಮ್ಮರ್ ಒಟ್ಟಾಗಿ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಚಿತ್ರದ ಆಲ್ಬಮ್ ಹಾಗೂ ಬಿಜಿಎಂ ಮೇಲೆ ಭಾರೀ ನಿರೀಕ್ಷೆಯಿದೆ.
ರಾವಣನಾಗಿ ನಟಿಸುವುದರ ಜೊತೆಗೆ 'ರಾಮಾಯಣ' ಚಿತ್ರ ನಿರ್ಮಾಣಕ್ಕೂ ಯಶ್ ಕೈಜೋಡಿಸಿದ್ದಾರೆ. ದಕ್ಷಿಣ ಭಾರತದ ವಿತರಣೆ ಹಕ್ಕುಗಳನ್ನು ಸಂಭಾವನೆ ರೂಪದಲ್ಲಿ ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ. ಟ್ರೈಲರ್‌ನಲ್ಲಿ ದಶಕಂಠನಾಗಿ ಯಶ್ ಆರ್ಭಟ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಇಡೀ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಮೂಡಿದೆ. 'ಟಾಕ್ಸಿಕ್' ಸಿನಿಮಾ ಸೋಲಿನ ಸುಳಿಯಿಂದ ಹೇಗೆ ಎದ್ದು ಬರ್ತಾರೆ ಕಾದು ನೋಡಬೇಕಿದೆ.