ಎಲ್ಲೆಲ್ಲೂ 'ರಾಮಾಯಣ' ಸಿನಿಮಾ ಬಗ್ಗೆ ಚರ್ಚೆ ಜೋರಾಗಿದೆ. ನಿತೇಶ್ ತಿವಾರಿ ದೃಶ್ಯ ವೈಭವದ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ನಟನೆ ವಿಚಾರದಲ್ಲಿ ಯಶ್ ಎಲ್ಲರನ್ನು ತಿಂದು ಹಾಕಿದ್ದಾರೆ ಎಂದು ಉತ್ತರ ಭಾರತದ ಪ್ರೇಕ್ಷಕರೇ ಹೇಳ್ತಿದ್ದಾರೆ. ರಾವಣ ಪಾತ್ರ ಮಾಡುವುದು ಸರೀನಾ ತಪ್ಪಾ ಎಂದು ಗೊಂದಲಗೊಂಡಿದ್ದ ಯಶ್ ಈಗ ಪ್ರೇಕ್ಷಕರ ಮೆಚ್ಚುಗೆ ಕಂಡು ಫಿದಾ ಆಗಿದ್ದಾರೆ.

ಮೊದಲ ದಿನವೇ 'ರಾಮಾಯಣ' ಸಿನಿಮಾ 155 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ದೇಶ ವಿದೇಶಗಳಲ್ಲಿ ಸಿನಿಮಾ ಬಿಡುಗಡೆಯಾಗಿ ದರ್ಬಾರ್ ನಡೆಸ್ತಿದೆ. ಶ್ರೀರಾಮನಾಗಿ ರಣ್‌ಬೀರ್ ಗಮನ ಸೆಳೆದಿದ್ದಾರೆ. ಆದರೂ ದಶಕಂಠ ರಾವಣನಾಗಿ ಯಶ್ ನಟನೆಗೆ ಹೆಚ್ಚು ಅಂಕ ಸಿಕ್ಕಿದೆ. ಈ ಪಾತ್ರಕ್ಕಾಗಿ ರಾಕಿಂಗ್ ಸ್ಟಾರ್ ನಡೆಸಿದ ಕಸರತ್ತು ಅಷ್ಟಿಷ್ಟಲ್ಲ.

ಸೆಟ್‌ನಲ್ಲೂ ವರ್ಕೌಟ್

ರಾವಣ ಪಾತ್ರಕ್ಕಾಗಿ ದೇಹ ಹುರಿಗೊಳಿಸಿ ಸಿಕ್ಕಾಪಟ್ಟೆ ಖಡಕ್ ಅವತಾರದಲ್ಲಿ ಯಶ್ ನಟಿಸಿದ್ದಾರೆ. ಜಿಮ್‌ನಲ್ಲಿ ಬೆವರಿಳಿಸುವುದು ಮಾತ್ರವಲ್ಲ, ಚಿತ್ರೀಕರಣದ ವೇಳೆ ಶಾಟ್ ಮುನ್ನ ಕೂಡ ಡಂಬಲ್ಸ್ ಹಿಡಿದ್ದು ಕರಸತ್ತು ಮಾಡಿರುವುದನ್ನು ನೋಡಬಹುದು. ಹುರಿಗಟ್ಟಿದ ದೇಹವನ್ನು ತೋರಿಸುವುದಕ್ಕೆ ಹೀಗೆ ಕೊನೆ ಕ್ಷಣದಲ್ಲೂ ವರ್ಕೌಟ್ ಮಾಡಲಾಗುತ್ತದೆ. ಈ ಮೂಲಕ ಸ್ನಾಯುಗಳನ್ನು ಪಂಪ್ ಮಾಡುವ ಪ್ರಯತ್ನ ನಡೆಯುತ್ತದೆ.

ಯಶ್ ಪಾತ್ರದ ಮೇಕಿಂಗ್

ಆರಂಭದಲ್ಲಿ ಜಟಾಧಾರಿಯಾಗಿ ಆಕ್ಷನ್ ಸೀಕ್ವೆನ್ಸ್‌ನಲ್ಲಿ ಯಶ್ ಅಬ್ಬರಿಸಿದ್ದಾರೆ. ಅದಕ್ಕಾಗಿ ವಿಗ್ ಧರಿಸಿ ಮೇಕಪ್ ಮಾಡಿಕೊಂಡಿದ್ದಾರೆ. ಅಸುರರನ್ನು ಸೋಲಿಸಿದ ಬಳಿಕ ಲಂಕಾಧಿಪತಿಯಾಗಿ ವಜ್ರಾಭರಣ ಧರಿಸಿ ಕಿರೀಟಧಾರಿಯಾಗಿ ಯಶ್ ದರ್ಶನ ಕೊಡುತ್ತಾರೆ. ಅದೆಲ್ಲವನ್ನು ಮೇಕಿಂಗ್‌ನಲ್ಲಿ ನೋಡಬಹುದು. "ನನ್ನ ಸ್ನೇಹಿತರು, ಕುಟುಂಬ ಸದಸ್ಯರು ಎಲ್ಲರೂ ನೀನು ಯಾಕೆ ರಾವಣ ಪಾತ್ರ ಮಾಡಬೇಕು ಅಂದ್ರು.. ನಿರ್ಮಾಪಕನಾಗಿ ರಾಮಾಯಣ ಸಿನಿಮಾ ಮಾಡ್ಬೇಕಿತ್ತು. ನಟನಾಗಿ ರಾವಣ ಪಾತ್ರ ಮಾಡಬೇಕು. ನಿನ್ನನ್ನು ಜನ ಪ್ರೀತಿಸ್ತಾರೆ, ಆದ್ರೆ ಜನ ದ್ವೇಷಿಸುವ ಪಾತ್ರವನ್ನು ಯಾಕೆ ಮಾಡಬೇಕು ಅಂದ್ರು.. ಹೌದು ಸಿನಿಮಾ ಹಂಗೆ ಇರಬೇಕಲ್ಲ. ನನ್ನ ಸ್ಟಾರ್‌ಡಮ್ ಕೂಡ ನನಗೆ ಗೊತ್ತು. ಆದ್ರೆ ಅಂತಿಮವಾಗಿ ರಾಮಾಯಣಕ್ಕಿಂತ ದೊಡ್ಡವರು ಯಾರು ಇಲ್ಲ" ಎಂದು ಯಶ್ ಹೇಳಿದ್ದಾರೆ.

ನಾನು ರಾವಣನೇ ಆಗಿಬಿಟ್ಟೆ

ಅದೇನೋ ಗೊತ್ತಿಲ್ಲ. ಆ ಕಿರೀಟ ಧರಿಸುತ್ತಿದ್ದಂತೆ ನಾನು ರಾವಣನೇ ಎಂದು ಭಾವಿಸಿಬಿಟ್ಟೆ.. ಎಂದು ಯಶ್ ವಿವರಿಸಿದ್ದಾರೆ. "ಯಶ್ ತೆರೆಮೇಲೆ ಬಂದಾಗ ನೀವು ನಿಮ್ಮ ದೃಷ್ಟಿ ಬೇರೆ ಕಡೆ ಕದಲಿಸುವುದಿಲ್ಲ. ನಿಮ್ಮ ಗಮನ ಸೆಳೆಯುವುದು ಮಾತ್ರವಲ್ಲ, ರಾವಣನೇ ಆಗಿಬಿಟ್ಟಿದ್ದಾರೆ" ಎಂದು ನಿರ್ದೇಶಕ ನಿತೇಶ್ ತಿವಾರಿ ಹೇಳಿರುವುದನ್ನು ನೋಡಬಹುದು.