ರಾಕಿಂಗ್ ಸ್ಟಾರ್ ಯಶ್ ನಟನೆಯ 'ರಾಮಾಯಣ' ಸಿನಿಮಾ ದಾಖಲೆಗಳ ಸುರಿಮಳೆ ಸುರಿಸ್ತಿದೆ. ಜಗತ್ತಿನ 27 ದೇಶಗಳಲ್ಲಿ ಅತಿಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗಾಗಲೇ 1700 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ರಾವಣನ ಅವತಾರದಲ್ಲಿ ಯಶ್ ಆರ್ಭಟ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ.
ಒಂದು ಹಂತಕ್ಕೆ ಯಶ್ ದರ್ಬಾರ್ ನಡುವೆ ಶ್ರೀರಾಮನಾಗಿ ರಣ್ಬೀರ್ ಕಪೂರ್ ಸಪ್ಪೆ ಎನಿಸಿಬಿಟ್ಟಿದ್ದಾರೆ. ಐದು ಭಾಷೆಗಳಲ್ಲಿ ಸಿನಿಮಾ 50 ಕೋಟಿ ರೂ. ಕಲೆಕ್ಷನ್ ಮಾಡಿದ ದಾಖಲೆ ಬರೆದಿದೆ. ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ 'ರಾಮಾಯಣ' ಯಶಸ್ಸಿನಲ್ಲಿ ಯಶ್ ಪಾಲು ದೊಡ್ಡದಿದೆ. 'ಟಾಕ್ಸಿಕ್' ಚಿತ್ರದಲ್ಲಿ ಸೋತಿದ್ದ ರಾಕಿಂಗ್ ಸ್ಟಾರ್ ಎರಡೇ ತಿಂಗಳ ಅಂತರದಲ್ಲಿ ರಾವಣನಾಗಿ ಗೆದ್ದಿದ್ದಾರೆ. ಆ ಸೋಲನ್ನು ಈ ಗೆಲುವು ಮರೆಸಿಬಿಟ್ಟಿದೆ ಆದರೂ ಇದು ಸಂಪೂರ್ಣವಾಗಿ ಯಶ್ ಗೆಲುವಲ್ಲ ಎನ್ನುವ ಚರ್ಚೆ ಶುರುವಾಗಿದೆ.
ಹೌದು ಯಶ್ ಸಿನಿಮಾ ನಿರ್ಮಿಸಿ ರಾವಣನಾಗಿ ನಟಿಸಿದ್ದಾರೆ. ಆದರೆ ಅವರು ಮಾಡಿರುವುದು ವಿಲನ್ ಪಾತ್ರ. ಅದು ಪೋಷಕ ನಟನ ವಿಭಾಗಕ್ಕೆ ಸೇರುವಂಥದ್ದು. ಚಿತ್ರದ ಹೀರೊ ರಣ್ಬೀರ್ ಕಪೂರ್. ಇನ್ನು ಇದು 'ರಾಮಾಯಣ' ಕಾವ್ಯಾ ಆಧರಿಸಿದ ಸಿನಿಮಾ. ವಿಷ್ಯುವಲ್ ಆಗಿ ಅದ್ಭುತ ಎನ್ನುವಂತೆ ಸಿನಿಮಾ ಮೂಡಿ ಬಂದಿದೆ. ಚಿತ್ರದ ಗೆಲುವಿಗೆ ಅದೇ ಮುಖ್ಯ ಕಾರಣ ಎನ್ನುವವರು ಇದ್ದಾರೆ. ನಿತೇಶ್ ತಿವಾರಿ ನಿರ್ದೇಶನ, ಕಲಾವಿದರ ಅಭಿನಯ, ತಾಂತ್ರಿಕವರ್ಗದ ಶ್ರಮ ಎಲ್ಲಾ ಸೇರಿ ಸಿನಿಮಾ ಗೆದ್ದಿದೆ. ಹಾಗಾಗಿ ಇದು ಕೇವಲ ಯಶ್ ಗೆಲುವಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ.
'ಕೆಜಿಎಫ್- 2' ಸರಣಿ ಬಳಿಕ 'ಟಾಕ್ಸಿಕ್' ಸಿನಿಮಾ ಬಂದು ಸೋತಿತ್ತು. ಆ ಚಿತ್ರದಲ್ಲಿ ಹೀರೊ ಆಗಿ ಯಶ್ ಅಭಿನಯಿಸಿದ್ದರು. ತಂದೆ- ಮಗನಾಗಿ ಎರಡೆರಡು ಅವತಾರಗಳಲ್ಲಿ ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನ ಮಾಡಿದ್ದರು. ಆದರೆ ಅವರ ನಿರೀಕ್ಷೆ ಸುಳ್ಳಾಗಿತ್ತು. ಒಂದು ವರ್ಗದ ಪ್ರೇಕ್ಷಕರಿಗೆ ಅದ್ಭುತ ಎನಿಸಿದ್ದ ಸಿನಿಮಾ ಬಹುತೇಕರಿಗೆ ನಿರಾಸೆ ಮೂಡಿಸಿತ್ತು. 'ಟಾಕ್ಸಿಕ್' ಸಿನಿಮಾ ಸೋಲನ್ನು 'ರಾಮಾಯಣ' ಚಿತ್ರದಿಂದ ಸರಿದೂಗಿಸಲು ಸಾಧ್ಯವಿಲ್ಲ. ಯಶ್ ಸೋಲೊ ಹೀರೊ ಆಗಿ ಸಿನಿಮಾ ಮಾಡಿ ಗೆಲ್ಲಬೇಕು. ಆಗ ಮಾತ್ರ ಅವರು ಕಂಬ್ಯಾಕ್ ಮಾಡಿದಂತೆ ಲೆಕ್ಕ ಎನ್ನುವ ವಾದವನ್ನು ಕೆಲವರು ಮುಂದಿಡುತ್ತಿದ್ದಾರೆ.
ಯಶ್ ದೊಡ್ಡ ದೊಡ್ಡ ಕನಸು ಕಾಣುತ್ತಿದ್ದಾರೆ. ಮುಂದೆ ಅಂಥದ್ದೇ ದೊಡ್ಡ ಸಿನಿಮಾ ಮಾಡಲು ಅವರು ಮನಸ್ಸು ಮಾಡಿದಂತಿದೆ. ಹಾಗಾಗಿ 'ರಾಮಾಯಣ' ಸರಣಿ ಬಿಟ್ಟು ಬೇರೆ ಸಿನಿಮಾ ಮಾಡಿ ಅವರು ತಮ್ಮನ್ನು ಸಾಬೀತು ಮಾಡಿಕೊಳ್ಳಬೇಕು. 'ರಾಮಾಯಣ' ಸಿನಿಮಾ ಗೆಲುವಿನ ಕ್ರೆಡಿಟ್ ಅನ್ನು ಸಂಪೂರ್ಣವಾಗಿ ಅವರೊಬ್ಬರಿಗೆ ಕೊಡಲು ಸಾಧ್ಯವಿಲ್ಲ ಎಂದು ಚರ್ಚೆ ನಡೀತಿದೆ. ರಾವಣನಾಗಿ ಯಶ್ ಅಭಿನಯ ಸೊಗಸಾಗಿದೆ. ಅದರ ಬಗ್ಗೆ ಎರಡು ಮಾತಿಲ್ಲ. ಆದರೆ ಸೋಲೊ ಹೀರೊ ಆಗಿ ಒಂದು ಸಿನಿಮಾ ಮಾಡಿ ಗೆಲ್ಲಬೇಕು ಎಂದು ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ. ಅದು ಯಾವಾಗ ಸಾಧ್ಯವಾಗುತ್ತೆ ಕಾದು ನೋಡಬೇಕಿದೆ.
'ಮೈನೇಮ್ ಈಸ್ ಕಿರಾತಕ' ಸಿನಿಮಾ ಮಾಡುವ ಆಸೆಯಿದೆ ಎಂದು ಇತ್ತೀಚೆಗೆ ಯಶ್ ಹೇಳಿದ್ದಾರೆ. ಆದರೆ ಸದ್ಯಕ್ಕೆ ಪ್ಯಾನ್ ಇಂಡಿಯಾ ಸ್ಟಾರ್ ಇಮೇಜ್ ಸಂಪಾದಿಸಿದ್ದಾರೆ. ಹಾಗಾಗಿ ಸಣ್ಣ ಸಿನಿಮಾ ಮಾಡ್ತಾರಾ ? ಒಂದು ವೇಳೆ ಅವರು ಮಾಡಿದ್ರು ಪ್ರೇಕ್ಷಕರು ಒಪ್ಪುತ್ತಾರಾ ಎನ್ನುವ ಗೊಂದಲ ಮೂಡಿದೆ. ಯಶ್ ಯಾವಾಗಲೂ ಸರ್ಪ್ರೈಸ್ ಕೊಡ್ತಾರೆ. ಮತ್ತೊಂದು ಸರ್ಪ್ರೈಸ್ ಪ್ರಾಜೆಕ್ಟ್ ಮೂಲಕ ಅವರು ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದ್ದಾರೆ.