14 ದಿನಕ್ಕೆ 'ರಾಮಾಯಣ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮತ್ತೊಂದು ದಾಖಲೆ ಬರೆದಿದೆ. ಇದೀಗ ಸಿನಿಮಾ 1500 ಕೋಟಿ ರೂ. ಕಲೆಕ್ಷನ್ ಮೈಲಿಗಲ್ಲು ಸ್ಥಾಪಿಸಿ ಮುನ್ನುಗ್ಗುತ್ತಿದೆ. ರಣ್‌ಬೀರ್ ಕಪೂರ್ ಹಾಗೂ ಯಶ್ ಆರ್ಭಟಕ್ಕೆ ಹಳೇ ದಾಖಲೆಗಳೆಲ್ಲಾ ಪುಡಿಪುಡಿ ಆಗುತ್ತಿದೆ. ಅತಿಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪೈಕಿ 'ರಾಮಾಯಣ' ಈಗ ಐದನೇ ಸ್ಥಾನಕ್ಕೇರಿದೆ.

ನಿನ್ನೆ(ನವೆಂಬರ್ 17) 'ರಾಮಾಯಣ' ಸಿನಿಮಾ 20 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇಂದು ಅಡ್ವಾನ್ಸ್ ಬುಕ್ಕಿಂಗ್ ಸೇರಿ ಮಧ್ಯಾಹ್ನದ ಹೊತ್ತಿದೆ. 1500 ಕೋಟಿ ರೂ. ಗಡಿದಾಟಿ ಈ ಪೌರಾಣಿಕ ಸಿನಿಮಾ ಸದ್ದು ಮಾಡ್ತಿದೆ. ಸಿನಿಮಾ ಸಕ್ಸಸ್ ಸಂಭ್ರಮದಲ್ಲಿ ನಟ ಯಶ್ ಪತ್ನಿ ರಾಧಿಕಾ ಪಂಡಿತ್ ಜೊತೆ ವಿದೇಶ ಪ್ರವಾಸದಲ್ಲಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ರಾಧಿಕಾ ಪೋಸ್ಟ್ ಮಾಡಿದ್ದಾರೆ.

'ಪುಷ್ಪ'-2 ದಾಖಲೆ

ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಪೈಕಿ 'ಪುಷ್ಪ'-2 ಸದ್ಯ ನಾಲ್ಕನೇ ಸ್ಥಾನದಲ್ಲಿದೆ. ಎರಡು ವರ್ಷಗಳ ಹಿಂದೆ ತೆರೆಗೆ ಬಂದಿದ್ದ ಸಿನಿಮಾ 1,800 ಕೋಟಿ ರೂ. ಗಳಿಕೆ ಕಂಡಿದ್ದಾಗಿ ವರದಿಯಾಗಿತ್ತು. ಆ ಲೆಕ್ಕದಲ್ಲಿ 'ರಾಮಾಯಣ' ಸಿನಿಮಾ ಇನ್ನು 300 ಕೋಟಿ ರೂ. ಗಳಿಸಬೇಕಿದೆ. ನಿಧಾನವಾಗಿ ಕ್ರೇಜ್ ಕಮ್ಮಿ ಆಗ್ತಿದ್ದು 'ಪುಷ್ಪ'-2 ಸಿನಿಮಾ ಹಿಂದಿಕ್ಕುವುದು ಕಷ್ಟ ಎನ್ನುವ ಚರ್ಚೆ ಶುರುವಾಗಿದೆ.

ಮೊದಲ ನಾಲ್ಕು ಸ್ಥಾನ

'ಪುಷ್ಪ'-2 ನಾಲ್ಕನೇ ಸ್ಥಾನದಲ್ಲಿದ್ದರೆ 1,810 ಕೋಟಿ ರೂ. ಕಲೆಕ್ಷ್ ಮಾಡಿದ್ದ 'ಬಾಹುಬಲಿ- 2 ಸಿನಿಮಾ ಮೂರನೇ ಸ್ಥಾನದಲ್ಲಿದೆ. ಇನ್ನು 'ಧುರಂಧರ್'- 2 (1,852 ಕೋಟಿ ರೂ.) ಸಿನಿಮಾ ಎರಡನೇ ಸ್ಥಾನ ಭದ್ರಪಡಿಸಿಕೊಂಡಿದೆ. ಚೀನಾ ಕಲೆಕ್ಷನ್ ಸೇರಿ 'ದಂಗಲ್' ಸಿನಿಮಾ 1,968 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಅದು ಕೂಡ 10 ವರ್ಷಗಳ ಹಿಂದೆ ಎನ್ನುವುದು ವಿಶೇಷ. 2028ರಲ್ಲಿ 'ರಾಮಾಯಣ'-2 ಸಿನಿಮಾ ಈ ಎಲ್ಲಾ ದಾಖಲೆಗಳನ್ನು ಮುರಿಯುತ್ತದೆ ಎಂದು ಅಂದಾಜಿಸಲಾಗ್ತಿದೆ.

ಓಟಿಟಿ ರಿಲೀಸ್

'ರಾಮಾಯಣ' ಸಿನಿಮಾ ಓಟಿಟಿ ರಿಲೀಸ್ ಸದ್ಯಕ್ಕಿಲ್ಲ. ಬಾಲಿವುಡ್ ಸಿನಿಮಾ ತೆರೆಕಂಡ ಎರಡು ತಿಂಗಳ ಬಳಿಕ ಡಿಜಿಟಲ್ ಸ್ಟ್ರೀಮಿಂಗ್ ಮಾಡಬೇಕು ಎನ್ನುವ ನಿಯಮ ಇದೆ. ಹಾಗಾಗಿ ಸಂಕ್ರಾಂತಿ ಹಬ್ಬದವರೆಗೆ ಸಿನಿಮಾ ಓಟಿಟಿಗೆ ಬರುವುದು ಅನುಮಾನ. ಹಾಟ್‌ಸ್ಟರ್ ಸಂಸ್ಥೆ ರೈಟ್ಸ್ ಕೊಂಡುಕೊಂಡಿರುವುದಾಗಿ ಹೇಳಲಾಗ್ತಿದೆ.