'ಎಕ್ಕ' ಬಳಿಕ ಯುವರಾಜ್‌ಕುಮಾರ್ ನಟನೆಯ ಮುಂದಿನ ಸಿನಿಮಾ ಯಾವ್ದು ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ದುನಿಯಾ ಸೂರಿ ಕಾಂಬಿನೇಷನ್‌ನಲ್ಲಿ ಒಂದು ಸಿನಿಮಾ ಘೋಷಣೆಯಾಗಿತ್ತು. ಆದರೆ ಕಾರಣಾಂತರಗಳಿಂದ ಆ ಪ್ರಾಜೆಕ್ಟ್ ನಿಂತಿತ್ತು. ಇದೀಗ ತರುಣ್ ಸುಧೀರ್ ನಿರ್ಮಾಣದ ಚಿತ್ರದಲ್ಲಿ ರಾಘಣ್ಣನ ಕಿರಿಮಗ ನಟಿಸಲು ಮುಂದಾಗಿದ್ದಾರೆ.

'ಜಂಟಲ್‌ಮನ್' ಹಾಗೂ 'ಲ್ಯಾಂಡ್‌ಲಾರ್ಡ್' ಚಿತ್ರಗಳ ನಿರ್ದೇಶಕ ಜಡೇಶ್ ಹಂಪಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಎರಡು ದಿನಗಳ ಹಿಂದೆಯೇ ಸಿನಿ ಸಮಾಚಾರ ವೆಬ್‌ಸೈಟ್ ಈ ಬಗ್ಗೆ ಸುದ್ದಿ ಮಾಡಿತ್ತು. ಅದು ಈಗ ನಿಜವಾಗಿದೆ. 'ಏಳುಮಲೆ' ಬಳಿಕ ತರುಣ್ ತಮ್ಮ ಬ್ಯಾನರ್‌ನಲ್ಲಿ ಈ ಸಿನಿಮಾ ಆರಂಭಿಸುತ್ತಿದ್ದಾರೆ. ಜಗದೀಶ್ ಗೌಡ ಕೂಡ ಚಿತ್ರ ನಿರ್ಮಾಣಕ್ಕೆ ಸಾಥ್ ಕೊಟ್ಟಿದ್ದಾರೆ. ಗಣೇಶ ಹಬ್ಬದ ಸಂಭ್ರಮದಲ್ಲಿ ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.

"ಅಪೂರ್ವ ಸಂಗಮ.. ನೀವು ನಿರೀಕ್ಷಿಸದ ಆ ನಾಲ್ವರು.. ನೀವು ಮರೆಯಲಾಗದ ಆ ಸಹಯೋಗ.. ಆ ಶಕ್ತಿಗಳು ಈಗ ಒಂದಾಗಿವೆ" ಎಂದು ಬರೆದು ತರುಣ್ ಸುಧೀರ್ ಸಿನಿಮಾ ಘೋಷಣೆ ಮಾಡಿದ್ದಾರೆ. 'ಯುವ' ಹಾಗೂ 'ಎಕ್ಕ' ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲಿಲ್ಲ. ಆದರೆ ಯುವ ರಾಜ್‌ಕುಮಾರ್ ಪರ್ಫಾರ್ಮನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಅದೇ ಕಾರಣಕ್ಕೆ ಬಹಳ ದಿನಗಳಿಂದ ಸಾಕಷ್ಟು ಕಥೆಗಳನ್ನು ಕೇಳಿ ಅಂತಿಮವಾಗಿ ಜಡೇಶ್ ಹೇಳಿದ ಕಥೆಯನ್ನು ಅವರು ಒಪ್ಪಿ ನಟಿಸಲು ಮುಂದಾಗಿದ್ದಾರೆ.

ದರ್ಶನ್ ನಟನೆಯ 'ಕಾಟೇರ' ಚಿತ್ರಕ್ಕೆ ಜಡೇಶ್ ಕಥೆ ಒದಗಿಸಿದ್ದರು. ತರುಣ್ ಸುಧೀರ್ ಆ ಸಿನಿಮಾ ನಿರ್ದೇಶನ ಮಾಡಿದ್ದರು. ಆಗ ಶುರುವಾದ ಸ್ನೇಹ ಈಗ ಮತ್ತೊಂದು ಚಿತ್ರಕ್ಕೆ ಇಬ್ಬರನ್ನು ಜೊತೆಯಾಗಿಸಿದೆ. ನಮ್ಮ ಮಣ್ಣಿನ ಕಥೆಗಳನ್ನು ಹೇಳುವುದರಲ್ಲಿ ಜಡೇಶ್ ಸಿದ್ಧಹಸ್ತರು. ಹಾಗಾಗಿ ರಾಘಣ್ಣನ ಕಿರಿಮಗನಿಗೆ ಯಾವ ರೀತಿಯ ಕಥೆ ಮಾಡಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಚಿತ್ರದ ಪಾತ್ರವರ್ಗ ಹಾಗೂ ತಾಂತ್ರಿಕ ವರ್ಗ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ಸಿಗಲಿದೆ.

ಯುವ-03 ಸಿನಿಮಾ ಘೋಷಣೆ ಆಗಿರುವುದು ದೊಡ್ಮನೆ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಹೊಸ ಅವತಾರದಲ್ಲಿ ಅಣ್ಣಾವ್ರ ಮೊಮ್ಮಗನನ್ನು ನೋಡಲು ಕಾತರರಾಗಿದ್ದಾರೆ.