ಜೋಗಿ ಪ್ರೇಮ್ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ನಟನೆಯ ಹೊಸ ಸಿನಿಮಾ ಶುರುವಾಗಿದೆ. ಟೈಟಲ್ ಟೀಸರ್ ಸಮೇತ ಚಿತ್ರವನ್ನು ಪ್ರೇಮ್ ಘೋಷಣೆ ಮಾಡಿದ್ದಾರೆ. 'ದಾದಾ ಆನ್ ಹಾಲಿಡೇ' ಎಂಬ ಟೈಟಲ್ ಫಿಕ್ಸ್ ಆಗಿದೆ. ಟೀಸರ್ ಕೂಡ ಅಭಿಮಾನಿಗಳ ಗಮನ ಸೆಳೆದಿದೆ. ವಿಂಟೇಜ್ ಕಿಚ್ಚ ಈಸ್ ಬ್ಯಾಕ್ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

'ದಾದಾ ಆನ್ ಹಾಲಿಡೇ' ಸಿನಿಮಾ ಬಗ್ಗೆ ಬಹಳ ಹಿಂದೆಯೇ ಪ್ರೇಮ್ ಸುಳಿವು ಕೊಟ್ಟಿದ್ದರು. ಟೈಟಲ್ ರಿವೀಲ್ ಮಾಡೋದಾಗಿ ಬಹಳ ಹಿಂದೆಯೇ ಹೇಳಿದ್ದರು. ಕಾರಣಾಂತರಗಳಿಂದ ತಡವಾಗಿತ್ತು. ಕಳೆದೊಂದು ವಾರದಿಂದ ಕೌಂಟ್‌ಡೌನ್ ಶುರು ಮಾಡಿದ್ದರು. ಎರಡು ದಿನಗಳ ಹಿಂದೆಯೇ ಸೋಶಿಯಲ್ ಮೀಡಿಯಾದಲ್ಲಿ ಟೈಟಲ್ ಏನು ಎನ್ನುವುದು ಲೀಕ್ ಆಗಿತ್ತು. ಇದೀಗ ಅದು ಖಚಿತವಾಗಿದೆ. ಇನ್ನು ಸಣ್ಣದೊಂದು ಪ್ರೋಮೊ ಮಾಡಿ ಕುತೂಹಲ ಮೂಡಿಸಿದ್ದಾರೆ.

ಟೀಸರ್‌ನಲ್ಲಿ ನಿರ್ದೇಶಕ ಪ್ರೇಮ್ ಅವರನ್ನೇ ಪೊಲೀಸರು ಠಾಣೆಗೆ ಎತ್ತಾಕೊಂಡು ಹೋಗಿದ್ದಾರೆ. ಅಲ್ಲಿ ಅವರು ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡ್ತಾ ಹೋಗ್ತಾರೆ. ಕೊನೆಗೆ ದಾದಾ ಸುದೀಪ್ ಎಂಟ್ರಿ ಆಗುತ್ತದೆ. ಇಲ್ಲಿವರೆಗೂ ಪ್ರೇಮ್ ಸಿನಿಮಾ ಅಂದ್ರೆ ಮಚ್ಚು ಲಾಂಗ್, ಮದರ್ ಸೆಂಟಿಮೆಂಟ್, ಲವ್ ಸ್ಟೋರಿ ಎನ್ನುವ ಮಾತಿತ್ತು. ತಮ್ಮ ಸಿನಿಮಾಗಳಲ್ಲಿ ಅದೇ ವಿಚಾರಗಳನ್ನು ಅವರು ಹೇಳ್ತಾ ಬಂದಿದ್ದರು. ಆದರೆ ಈ ಬಾರಿ ಅದನ್ನೆಲ್ಲಾ ಬಿಟ್ಟು ಹೊಸದಾಗಿ ದಾದಾ ಕಥೆ ಹೇಳೋಕೆ ಹೊರಟಿದ್ದಾರೆ. ಅದಕ್ಕೆ ಕಿಚ್ಚನ ಸಾಥ್ ಸಿಕ್ಕಿದೆ.

ಒಂದರ್ಥದಲ್ಲಿ ಪ್ರೇಮ್ ತಮ್ಮನ್ನೇ ತಾವು ಟ್ರೋಲ್ ಮಾಡಿಕೊಂಡು 'ದಾದಾ ಆನ್ ಹಾಲಿಡೇ' ಸಿನಿಮಾ ಬಗ್ಗೆ ಮಾತನಾಡಿದ್ದಾರೆ. 'ಕೆಡಿ' ಸಿನಿಮಾ ಸೋತ ಬಳಿಕ ಮತ್ತೆ ಮೈಕೊಡವಿಕೊಂಡು ಎದ್ದು ಬರುವ ಪ್ರಯತ್ನದಲ್ಲಿದ್ದಾರೆ. ಅದಕ್ಕೆ ತಕ್ಕಂತೆ ತಮ್ಮ ತಂಡವನ್ನು ಬದಲಿಸಿದ್ದಾರೆ. ಹೊಸ ಮುಖಗಳು ಅವರ ತಂಡದಲ್ಲಿದೆ. ರಕ್ಷಿತ್ ಶೆಟ್ಟಿ ಗರಡಿಯ ಅಭಿಜಿತ್ ಮಹೇಶ್ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ.

ಆರುದ್ರ ಸಿನಿಮಾಸ್ ಹಾಗೂ ಪ್ರೇಮ್ ಫೀನಿಕ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರೂಪೇಶ್ ಕುಮಾರ್ ಜಿ, ಶಶಿ ಕಿರಣ್ ಆರ್, ರಕ್ಷಿತಾ ಪ್ರೇಮ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸ್ವತಃ ಪ್ರೇಮ್ ಹೇಳುವಂತೆ "ರೌಡಿಗಳು ಇರ್ತಾರೆ ಆದ್ರೆ ರೌಡಿಸಂ ಇರಲ್ಲ.. ಲವ್ ಇರತ್ತೆ ಆದ್ರೆ ಲವ್ ಸ್ಟೋರಿ ಅಲ್ಲ.. ಸೆಂಟಿಮೆಂಟ್ ಇರತ್ತೆ ಆದ್ರೆ ತಾಯಿ ಇರಲ್ಲ.. ಎಲ್ಲರೂ ಅವರವರ ಕಥೆಯಲ್ಲಿ ಅವ್ರೇ ಹೀರೊ.. ಆದ್ರೆ ಬೇರೆಯವರ ಕಥೆಯಲ್ಲಿ ಹೀರೊ ಆಗುವವನು ನಮ್ಮ ಹೀರೊ" ಎಂದು ಪ್ರೇಮ್ ಹೇಳಿದ್ದಾರೆ.

ಟೈಟಲ್ ಟೀಸರ್ ನೋಡಿದ್ರೆ, ಹಳೇ ರೌಡಿ ಒಬ್ಬ ರೌಡಿಸಂ ಬಿಟ್ಟು ಬದುಕಲು ಪ್ರಯತ್ನಿಸುವ ಕಥೆ ಇದ್ದಂತೆ ಕಾಣ್ತಿದೆ. ಲುಂಗಿ ಉಟ್ಟು, ಬಣ್ಣದ ಬಣ್ಣದ ಶರ್ಟ್ ಧರಿಸಿ, ಸಿಗರೇಟ್ ಬಿಟ್ಟು ಚೂಯಿಂಗ್ ಗಮ್ ಅಗಿಯುತ್ತಾ ಬಾಯಲ್ಲಿ ಕಡ್ಡಿ ಸಿಕ್ಕಿಸಿಕೊಂಡು ಸನ್ ಗ್ಲಾಸ್ ಹಿಡಿದು ಖಡಕ್ ಆಗಿ ಸುದೀಪ್ ದರ್ಶನ ಕೊಟ್ಟಿದ್ದಾರೆ. ಇನ್ನು ಪೋಸ್ಟರ್‌ ಕೂಡ ಗಮನ ಸೆಳೆಯುತ್ತಿದೆ. ಸನ್ ಗ್ಲಾಸ್ ತೊಟ್ಟಿರುವ ನಾಯಿ ಪಕ್ಕದಲ್ಲೇ ಒಂದು ಬೋರ್ಡ್ ಇದೆ. ದಾದಾಗೆ ಫ್ಯಾಮಿಲಿಯಲ್ಲಿ ಒಂದಷ್ಟು ನಿಯಮಗಳಿವೆ. ಅಜ್ಜಿಗೆ ಗೌರವ ಕೊಡಬೇಕು, ಕ್ರೈಂ ಮಾಡುವಂತಿಲ್ಲ, ಸಂಜೆ 7 ಗಂಟೆಗೆ ಮನೆ ಸೇರಿಕೊಳ್ಳಬೇಕು, ಫ್ಯಾಮಿಲಿನೇ ಫಸ್ಟ್..

ಒಟ್ಟಾರೆ ಟೈಟಲ್ ಟೀಸರ್ ಟೆಸ್ಟ್‌ನಲ್ಲಿ ಪ್ರೇಮ್ ಪಾಸ್ ಆಗಿದ್ದಾರೆ. ಸುದೀಪ್ ಕೂಡ ಕಮಾಲ್ ಮಾಡಿದ್ದಾರೆ. 'ದಾದಾ ಆನ್ ಹಾಲಿಡೇ' ಟೈಟಲ್ ಕೂಡ ಅಭಿಮಾನಿಗಳಿಗೆ ಇಷ್ಟವಾಗಿದೆ. ಪ್ರೇಮ್ ಸಿನಿಮಾ ಮಾಡೋದು ಲೇಟ್ ಎನ್ನುವ ಅಪವಾದ ಇದೆ. ಆದರೆ ಮುಂದಿನ ವರ್ಷವೇ ಈ ಸಿನಿಮಾ ತೆರೆಗೆ ತರುವುದಾಗಿ ಘೋಷಿಸಿದ್ದಾರೆ. 'ಬಿಲ್ಲ ರಂಗ ಬಾಷ'ಗೂ ಮುನ್ನ ದಾದಾ ಎಂಟ್ರಿ ಕೊಡುವ ಸುಳಿವು ಸಿಕ್ತಿದೆ.