ಪ್ಯಾನ್ ಇಂಡಿಯಾ ಸಿನಿಮಾ ಮಾಡೋದಲ್ಲ, ಆಗೋದು.. ಎಲ್ಲರೂ ರಾಜಮೌಳಿ, ಪ್ರಶಾಂತ್ ನೀಲ್ ಅಥವಾ ಯಶ್, ಪ್ರಭಾಸ್ ಆಗಿಬಿಡಬೇಕು ಎಂದುಕೊಳ್ಳುವುದು ತಪ್ಪಾಗುತ್ತೆ. ದೊಡ್ಡ ಕನಸು ಕಾಣಬೇಕು ಸರಿ. ಆದರೆ ನವಿಲು ನೋಡಿ ನವಿಲನ್ನು ನೋಡಿ ಕೆಂಬುತ ಪುಕ್ಕ ತರ್ಕಂತು ಎನ್ನುವಂತೆ ಆಗಬಾರದು. ಅದೊಂದು ಗೆಲುವು, ಅದೊಂದು ಸೋಲು ಕನ್ನಡ ಚಿತ್ರರಂಗಕ್ಕೆ ಒಳ್ಳೆ ಪಾಠ ಕಲಿಸಿದಂತಿದೆ.
ಗಾಂಧಿನಗರದಲ್ಲಿ ಬಾಯಿಬಿಟ್ರೆ ಪ್ಯಾನ್ ಇಂಡಿಯಾ ಎನ್ನುತ್ತಿದ್ದವರು ಈಗ ತಣ್ಣಗಾಗಿದ್ದಾರೆ. ಮೊದಲು ಕನ್ನಡ ಪ್ರೇಕ್ಷಕರಿಗೆ ಸಿನಿಮಾ ಮಾಡೋಣ. ಆಮೇಲೆ ಪ್ಯಾನ್ ಇಂಡಿಯಾ ಲೆಕ್ಕಾಚಾರ ಎನ್ನುತ್ತಿದ್ದಾರೆ. ಯಶ್ ನಿರ್ಮಿಸಿ ನಟಿಸಿದ 'ಟಾಕ್ಸಿಕ್' ಸಿನಿಮಾ ದೊಡ್ಡ ಪೆಟ್ಟು ಕೊಟ್ಟಿತ್ತು. ಕೆಲವರಿಗೆ ಅದ್ಭುತ ಎನಿಸಿದ ಸಿನಿಮಾ ಕೆಲವರಿಗೆ ಕೆಟ್ಟದಾಗಿ ಕಂಡಿತ್ತು. ಇವತ್ತಿಗೂ ಚಿತ್ರದ ಓಟಿಟಿ ರೈಟ್ಸ್ ಮಾರಾಟವಾಗಿಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಎಷ್ಟೇ ದೊಡ್ಡ ಬಜೆಟ್ ಹಾಕಿದ್ರು ವಾಪಸ್ ಪಡೆಯಬಹುದು ಎಂದುಕೊಂಡಿದ್ದ ಲೆಕ್ಕಾಚಾರ ಸುಳ್ಳಾಗಿತ್ತು.
ಮತ್ತೊಂದು ಕಡೆ 'ಪ್ರೇಮದ ಊರಲಿ' ರೀತಿಯ ಸಣ್ಣ ಸಿನಿಮಾ 150 ಕೋಟಿ ರೂ. ಕೊಳ್ಳೆ ಹೊಡೆದುಬಿಟ್ಟಿದೆ. ಸ್ಟಾರ್ ನಟ, ನಟಿ, ನಿರ್ದೇಶಕ ಇಲ್ಲದೇ ಹೆಚ್ಚು ಬಜೆಟ್ ಕೂಡ ಇಲ್ಲದೇ ಈ ಹೊಸಬರ ಸಿನಿಮಾ ಮಾಡಿದ ಜಾದೂ ಅಷ್ಟಿಷ್ಟಲ್ಲ. ಕನ್ನಡ ಸಿನಿಮಾ ನೋಡಲು ಇಷ್ಟು ಪ್ರೇಕ್ಷಕರು ಇದ್ದಾರಾ ಎಂದು ಅಚ್ಚರಿಪಡುವಂತೆ ಜನ ಚಿತ್ರಮಂದಿರಗಳಿಗೆ ನುಗ್ಗಿದ್ದರು. ಮುಚ್ಚಿದ್ದ ಕೆಲ ಚಿತ್ರಮಂದಿರಗಳ ಬಾಗಿಲು ತೆರೆಯುವಂತಾಯಿತು. ತಮಿಳುನಾಡು ಹಾಗೂ ಆಂಧ್ರದಲ್ಲಿ ಕೂಡ ಕನ್ನಡ ಭಾಷೆಯಲ್ಲೇ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಂಡಿತ್ತು. ಸದ್ಯ 5 ಭಾಷೆಯಲ್ಲಿ ಡಬ್ ಆಗಿ ಓಟಿಟಿಗೆ ಬಂದಿದೆ. ಪರಭಾಷಿಕರು ಸಿನಿಮಾ ನೋಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಜೋಗಿ ಪ್ರೇಮ್ ಕೂಡ 'ಕೆಡಿ' ಸಿನಿಮಾ ಬಳಿಕ ಸುದೀಪ್ ಜೊತೆ 'ದಾದಾ ಆನ್ ಹಾಲಿಡೇ' ಎಂಬ ಸಿನಿಮಾ ಆರಂಭಿಸಿದ್ದಾರೆ. 6 ತಿಂಗಳಲ್ಲಿ ಸಿನಿಮಾ ಮುಗಿಸಿ ಬಿಡುಗಡೆ ಮಾಡುವ ಸಾಹಸಕ್ಕೆ ಕೈಹಾಕಿದ್ದಾರೆ. ಪ್ಯಾನ್ ಇಂಡಿಯಾ ಸೊಲ್ಲು ಎತ್ತುತ್ತಿಲ್ಲ. ಕಾರಣ 'ಕೆಡಿ' ಚಿತ್ರದ ಫಲಿತಾಂಶ. ಎಲ್ಲರೂ 5 ಭಾಷೆಗಳಲ್ಲಿ ಸಿನಿಮಾ ಮಾಡ್ತಿದ್ದಾರೆ. ನಾನು ಮಾಡಿಬಿಡ್ತೀನಿ ಎಂದು ಹೋಗಿ ಪ್ರೇಮ್ ಕೈಸುಟ್ಟುಕೊಂಡರು. ಸಂಜಯ್ ದತ್ನ ಕರ್ಕೊಂಡು ಬಂದು ಏನು ಸಾಧಿಸಲಿಲ್ಲ. ಪರಭಾಷೆಯಲ್ಲಿ ಚಿತ್ರವನ್ನು ಯಾರೂ ಕ್ಯಾರೆ ಅನ್ನಲಿಲ್ಲ.
'ಕೆಡಿ' ಟೀಸರ್ ರೆಡಿ ಮಾಡಿ ಪ್ರೈವೇಟ್ ಜೆಟ್ ಏರಿ ಇಡೀ ಟೀಂ ಜೊತೆ ಪ್ರೇಮ್ ಪ್ಯಾನ್ ಇಂಡಿಯಾ ಟೂರ್ ಮಾಡಿಬಿಟ್ಟರು. ಹೈದರಾಬಾದ್, ಚೆನ್ನೈ, ಕೊಚ್ಚಿನ್, ಮುಂಬೈಗೆ ಹೋಗಿ ಸುದ್ದಿಗೋಷ್ಠಿ ನಡೆಸಿ ಟೀಸರ್ ಬಿಡುಗಡೆ ಮಾಡಿದ್ದರು. ಆದರೆ ನಯಾಪೈಸೆ ಪ್ರಯೋಜನ ಆಗಿರಲಿಲ್ಲ. ಆದರೆ ಈಗ ಬಂದಿರೋ 'ದಾದಾ ಆನ್ ಹಾಲಿಡೇ' ಟೀಸರ್ಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಯಶ್ಗಿಂತಲೂ ಮೊದ್ಲು ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡವರು ಸುದೀಪ್. ಹಾಗಾಗಿ ಅವರು ಹೀರೊ ಅಂದ್ಮೇಲೆ ಸಿನಿಮಾ ಚೆನ್ನಾಗಿದ್ದರೆ ಸಹಜವಾಗಿಯೇ ಪ್ಯಾನ್ ಇಂಡಿಯಾ ಮಟ್ಟಕ್ಕೆ ಹೋಗುತ್ತದೆ. ಅದಕ್ಕೆ ಸುಖಾಸುಮ್ಮನೆ ನಮ್ಮದು ಪ್ಯಾನ್ ಇಂಡಿಯಾ ಎಂದು ಬಡಾಯಿ ಕೊಚ್ಚಿಕೊಳ್ಳುವ ಅವಶ್ಯಕತೆ ಇಲ್ಲ.
ಕಡಿಮೆ ಬಜೆಟ್ ಹಾಕಿ ಸಿನಿಮಾ ಮಾಡಿದಷ್ಟು ನಿರ್ಮಾಪಕರು ಸೇಫ್ ಆಗಿ ಇರುತ್ತಾರೆ. ಹಾಗಾಗಿ ಕಮ್ಮಿ ಬಜೆಟ್ನಲ್ಲಿ ಒಳ್ಳೆ ಕಥೆ, ಚಿತ್ರಕಥೆ ಮಾಡಿ ಸಿನಿಮಾ ಮಾಡಬೇಕು. ಪ್ಯಾನ್ ಇಂಡಿಯಾ ಪ್ರಚಾರಕ್ಕೆ ಸುರಿಯುವ ಹಣವನ್ನು ಬರಹಗಾರರಿಗೆ ಕೊಡಬೇಕು. ಆಗ ಕಂಡಿತ ಸಿನಿಮಾಗಳು ಗೆಲ್ಲುತ್ತವೆ. ಅದು ಬಿಟ್ಟು ಪ್ಯಾನ್ ಇಂಡಿಯಾ ಎನ್ನುವ ಹಳ್ಳಕ್ಕೆ ಹೋಗಿ ಬೀಳುವುದು ಸರಿಯಲ್ಲ. ಇನ್ನಾದರೂ ಚಿತ್ರರಂಗ ಇದರಿಂದ ಪಾಠ ಕಲಿತರೆ ಉತ್ತಮ.