ಪ್ರೇಮ್ ನಿರ್ದೇಶನದಲ್ಲಿ ಸುದೀಪ್ ನಟನೆಯ 'ದಾದಾ ಆನ್ ಹಾಲಿಡೇ' ಸಿನಿಮಾ ಸೆಟ್ಟೇರಿದೆ. ಟೈಟಲ್ ಟೀಸರ್ ಬಿಡುಗಡೆ ಆಗಿ ಸದ್ದು ಮಾಡ್ತಿದೆ. ನಗರದ ಒರಾಯನ್ ಮಾಲ್ನಲ್ಲಿ ಟೀಸರ್ ರಿಲೀಸ್ ಕಾರ್ಯಕ್ರಮ ನಡೀತು. ಈ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಸುದೀಪ್ ಮಾತನಾಡಿದರು. ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಹೊಸ ಟ್ರೆಂಡ್ ಬಗ್ಗೆ ಕೂಡ ಗಮನ ಸೆಳೆದರು.
ಸುದೀಪ್ ಸಿನಿಮಾಗಳಲ್ಲಿ ಹೆಚ್ಚು ನಟಿಸ್ತಿಲ್ಲ. ಅವರ ಸಿನಿಮಾಗಳು ತೆರೆಗೆ ಬರೋದು ತಡ ಆಗ್ತಿದೆ. ಬಿಗ್ಬಾಸ್ ನಿರೂಪಣೆ ಮಾಡ್ತಾರೆ, ಕ್ರಿಕೆಟ್ ಆಡೋಕೆ ಹೋಗ್ತಾರೆ, ಇತ್ತೀಚೆಗೆ ಕಾರ್ ರೇಸ್ ಆರಂಭಿಸಿದ್ದಾರೆ. ಸಿನಿಮಾ ಯಾವಾಗ ಮಾಡ್ತಾರೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಸುದೀಪ್ ಪ್ರತಿಕ್ರಿಯಿಸಿ ಸಿನಿಮಾ ನನ್ನ ದೇವಸ್ಥಾನ, ಅದಕ್ಕೆ ದ್ರೋಹ ಮಾಡಲ್ಲ ಎಂದಿದ್ದಾರೆ.
ಸುದೀಪ್ ಮಾತನಾಡಿ "ಒಂದು ಸ್ಪಷ್ಟನೆ ಕೊಡಲು ಬಯಸುತ್ತೇನೆ. ಮೊನ್ನೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಟ್ರೆಂಡ್ ನೋಡ್ದೆ.. ಸಿನ್ಮಾ ಮಾಡ್ತಿದ್ರಿ ತಕ್ಷಣ ಕ್ರಿಕೆಟ್ಗೆ ಹೋದ್ರಿ.. ಅಡುಗೆಗೆ ಹೋದ್ರಿ, ಬಿಗ್ಬಾಸ್ಗೆ ಹೋದ್ರಿ, ಮತ್ತೆ ಕ್ರಿಕೆಟ್ಗೆ ಹೋದ್ರಿ.. ಅದೆಲ್ಲಾ ಆಯ್ತು. ವರ್ಷಕ್ಕೆ ಒಂದು ಸಿನಿಮಾ ಬರ್ತಿಲ್ಲ. ಹೊಸ ಸಿನಿಮಾ ಅನೌನ್ಸ್ ಆಗ್ತಿದ್ದಂತೆ ಕಾರ್ ರೇಸ್ಗೆ ಹೋಗಿದ್ದೀರಾ. ಕಂಡಿತ ಬೇಡ ಅಂತಿದ್ದಾರೆ. ಅಯ್ಯೋ ನಾನು ರೇಸ್ಗೆ ಹೋಗಿಲ್ಲ. ಸುಮ್ನೆ ಟ್ರಯಲ್ ಮಾಡ್ದೆ ಅಷ್ಟೆ" ಎಂದಿದ್ದಾರೆ.
ಸಿನಿಮಾ ಪರದೆಯಿಂದ ನಾನು ದೂರ ಇರಲು ಸಾಧ್ಯವಿಲ್ಲ. ಕಾರಣ ಅದೇ ನನ್ನ ಐಡೆಂಟಿಟಿ.. ಇದೆಲ್ಲಾ ಸಿಕ್ಕಿರುವುದು ಆ ಪರದೆ ಮೇಲೆ. ಅದು ದೊಡ್ಡ ಪರದೆ ಇರಲಿ, ಚಿಕ್ಕ ಪರದೆ ಇರಲಿ.. ನನ್ನ ಐಡೆಂಟಿಟಿ ಅಲ್ಲಿಂದ ಸಿಕ್ಕಿದೆ ಅಂದ್ಮೇಲೆ ಸಿನಿಮಾ ನನ್ನ ದೇವಸ್ಥಾನ.. ಅದಕ್ಕೆ ನಾನು ದ್ರೋಹ ಮಾಡಲ್ಲ ಎಂದು ಸುದೀಪ್ ಹೇಳಿರುವುದು ವೈರಲ್ ಆಗ್ತಿದೆ. ಇನ್ನು 'ದಾದಾ ಆನ್ ಹಾಲಿಡೇ' ಚಿತ್ರತಂಡ 'ಕಿಂಗ್ ಕಿಚ್ಚ' ಎಂದು ಕರೆದಿದೆ. ಈ ಬಗ್ಗೆ ಕೂಡ ಸುದೀಪ್ ಮಾತನಾಡಿದ್ದಾರೆ.
ನನಗೆ ಯಾವುದೇ ಬಿರುದಿನ ಬಗ್ಗೆ ಆಸಕ್ತಿ ಇಲ್ಲ. ಇದು ನಾಳೆ ದೊಡ್ಡ ಟಾಪಿಕ್ ಆಗಬಹುದು. ನನಗೆ ಅದು ಇಷ್ಟವಿಲ್ಲ. ನನಗೆ ಯಾವುದೇ ಬಿರುದು ಲೆಕ್ಕಕ್ಕೆ ಬರಲ್ಲ. ಸಿನಿಮಾ ಬಿಡುಗಡೆಯಾದಾಗ ಇಷ್ಟೇ ಜನ ಸೇರಿದರೆ ಸಾಕು ಎಂದಿದ್ದಾರೆ. ಇನ್ನು 'ದಾದಾ ಆನ್ ಹಾಲಿಡೇ' ಸಿನಿಮಾ ಬಗ್ಗೆ ಮಾತನಾಡಿ ಎಲ್ಲಾ ಮಾಸ್ ಅಂಶಗಳು ಚಿತ್ರದಲ್ಲಿದೆ. ಜೊತೆಗೆ ಫನ್ ಇರುತ್ತೆ. ಬಹಳ ದಿನಗಳಿಂದ ನನ್ನ ಸಿನಿಮಾಗಳಲ್ಲಿ ಅದು ಮಿಸ್ ಆಗಿತ್ತು. ಜೊತೆಗೆ ರೊಮ್ಯಾನ್ಸ್ ಕೂಡ ಇರಬೇಕು ಎಂದು ಹೇಳಿದ್ದೀನಿ ಎಂದು ಸುದೀಪ್ ನಗೆ ಚಟಾಕಿ ಹಾರಿಸಿದ್ದಾರೆ.