ಕನ್ನಡ ಸಿನಿಮಾಗಳು ಓಟಿಟಿಗೆ ಬರೋದೆ ಕಮ್ಮಿ. ಇತ್ತ ಚಿತ್ರಮಂದಿರಗಳಲ್ಲಿ ಈ ವಾರ ಬರೋಬ್ಬರಿ 44 ಸಿನಿಮಾಗಳು ಬಿಡುಗಡೆ ಆಗಿವೆ. 'ಲಕ್ಷ್ಮಿಪುತ್ರ' ಬಿಟ್ರೆ ಯಾವುದೇ ಕನ್ನಡ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ನಿರೀಕ್ಷೆ ಇಲ್ಲ. ಇತ್ತ ಓಟಿಟಿಯಲ್ಲಿ ಸಾಲು ಸಾಲು ಕನ್ನಡ ಸಿನಿಮಾಗಳು ಸ್ಟ್ರೀಮಿಂಗ್ ಆರಂಭಿಸಿವೆ.
ಕಳೆದ 15 ದಿನಗಳಲ್ಲಿ ಏಳೆಂಟು ಕನ್ನಡ ಸಿನಿಮಾಗಳು ಓಟಿಟಿಗೆ ಬಂದಿವೆ. ಧನಂಜಯ್ ನಟನೆಯ 'ಹೆಗ್ಗಣ ಮುದ್ದು', ಬ್ಲಾಕ್ಬಸ್ಟರ್ 'ಪ್ರೇಮದ ಊರಲಿ', 'ಮಾರ್ನಮಿ' ಬಳಿಕ 'ಸಿಟಿಲೈಟ್ಸ್' ಸಿನಿಮಾ ಕೂಡ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಿತ್ತು. ಇದೀಗ ಒಂದು ವಾರದಿಂದ ಮತ್ತೆ ಮೂರು ಸಿನಿಮಾಗಳು ಈ ಪಟ್ಟಿಗೆ ಸೇರಿದೆ. ಯಶ್ ನಟನೆಯ 'ಟಾಕ್ಸಿಕ್', ಶಿವಣ್ಣ ನಟನೆಯ 'ಬೇಲ್' ಸಿನಿಮಾ ಓಟಿಟಿ ಸ್ಟ್ರೀಮಿಂಗ್ಗಾಗಿ ಸಾಕಷ್ಟು ಜನ ಕಾಯ್ತಿದ್ದಾರೆ.
ಅಮೆರಿಕಾ ಅಮೆರಿಕಾ- 2
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೆರಿಕಾ ಅಮೆರಿಕಾ- 2' ಸಿನಿಮಾ ಓಟಿಟಿಗೆ ಬಂದು ಗಮನ ಸೆಳೆದಿದೆ. ಪ್ರೈಂ ವೀಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗ್ತಿದೆ. ನಿರೂಪ್ ಭಂಡಾರಿ, ಶ್ವೇತಾ ಶ್ರೀವಾಸ್ತವ್ ಹಾಗೂ ಪೃಥ್ವಿ ಅಂಬಾರ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಒಳ್ಳೆ ರೆಸ್ಪಾನ್ಸ್ ಸಿಕ್ಕರೂ ಸಿನಿಮಾ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗಿತ್ತು. ನಾಗತಿಹಳ್ಳಿ ಚಂದ್ರಶೇಖರ್ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಓಟಿಟಿಯಲ್ಲೇ ಜನ ಸಿನಿಮಾ ನೋಡಬಹುದು.
ಸ್ಪಾರ್ಕ್
ಮಹಂತೇಶ್ ಹಂದ್ರಲ್ ನಿರ್ದೇಶನದ ಇನ್ವೆಸ್ಟಿಗೇಷನ್ ಥ್ರಿಲ್ಲರ್ ಸಿನಿಮಾ 'ಸ್ಪಾರ್ಕ್' ಕೂಡ ಓಟಿಟಿಯಲ್ಲಿ ರಿಲೀಸ್ ಆಗಿದೆ. ಪ್ರೈಂ ವೀಡಿಯೋದಲ್ಲೇ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ನಿರಂಜನ್ ಸುಧೀಂದ್ರ ಹಾಗೂ ಜಾಕಿ ಭಾವನಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಕೂಡ ಸಿನಿಮಾ ಸ್ಟ್ರೀಮಿಂಗ್ ಆಗ್ತಿದೆ.
ಸಿಟಿಲೈಟ್ಸ್
ದುನಿಯಾ ವಿಜಯ್ ನಿರ್ದೇಶನದ 'ಸಿಟಿಲೈಟ್ಸ್' ಚಿತ್ರ ಕೂಡ ಕನ್ನಡ ಸಿನಿರಸಿಕರನ್ನು ಓಟಿಟಿಯಲ್ಲಿ ರಂಜಿಸ್ತಿದೆ. ಪ್ರೈಂ ವೀಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗ್ತಿದೆ. ವಿನಯ್ ರಾಜ್ಕುಮಾರ್ ಹಾಗೂ ಮೊನಿಷಾ ಚಿತ್ರದ ತಾರಾಗಣದಲ್ಲಿದ್ದಾರೆ. ವಿಜಯ್ ನಿರ್ದೇಶನಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಮೆಜೆಸ್ಟಿಕ್ ರಾತ್ರಿ ಜೀವನವನ್ನು ಚಿತ್ರದಲ್ಲಿ ತೆರೆಗೆ ತರಲಾಗಿತ್ತು.
ಕಾರ್ಪೋರೇಟ್ ಲವ್ಸ್ಟೋರಿ
ವೆಬ್ ಸೀರಿಸ್ ಗೊತ್ತು. ಮಿನಿ ವೆಬ್ ಸೀರಿಸ್ ಕೂಡ ಭಾರತದಲ್ಲಿ ನಿಧಾನವಾಗಿ ಸದ್ದು ಮಾಡ್ತಿದೆ. 'ಕಾರ್ಪೋರೇಟ್ ಲವ್ಸ್ಟೋರಿ' ಹೆಸರಿನ 30 ಸಂಚಿಕೆಗಳ ಮಿನಿ ವೆಬ್ ಸೀರಿಸ್ ಜೀ-5ನಲ್ಲಿ(ನವೆಂಬ್ 27) ಸ್ಟ್ರೀಮಿಂಗ್ ಆರಂಭಿಸುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ಕಾರ್ಪೊರೇಟ್ ಪ್ರಪಂಚ ಹಾಗೂ ಡೇಟಿಂಗ್ ಆ್ಯಪ್, ಸ್ಟಾರ್ಟ್ಅಪ್ ವಿಚಾರಗಳ ಸುತ್ತಾ ಈ ಸರಣಿ ನಿರ್ಮಾಣವಾಗಿದೆ.