ಕನ್ನಡ ಸಿನಿಮಾಗಳ ಬಗ್ಗೆ ಓಟಿಟಿ ಸಂಸ್ಥೆಗಳ ತಾತ್ಸಾರ ಹೊಸದೇನು ಅಲ್ಲ. ಒಳ್ಳೆ ಸಿನಿಮಾಗಳು ಬರ್ತಿಲ್ಲ, ಅದಕ್ಕೆ ಓಟಿಟಿಯವರು ಕೊಂಡುಕೊಳ್ಳಲ್ಲ ಎನ್ನುವ ಆರೋಪವೂ ಇದೆ. ಇದೆಲ್ಲದರ ನಡುವೆ ಕನ್ನಡ ಸಿನಿಮಾಗಳು ಓಟಿಟಿಗೆ ಬರುವುದು ಅಪರೂಪ ಎನ್ನುವಂತಾಗಿದೆ. ಆದರೆ ಈ ವಾರ ಮೂರು ಕನ್ನಡ ಸಿನಿಮಾಗಳು ಓಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿವೆ.

ಚಿತ್ರಮಂದಿರಗಳಲ್ಲಿ ಗೆದ್ದ ಸಿನಿಮಾಗಳನ್ನು ಓಟಿಟಿಯಲ್ಲಿ ನೋಡಿ ಅಯ್ಯೋ, ಸುಮ್ನೆ ಹೈಪ್ ಮಾಡಿದ್ರು, ಸಿನಿಮಾದಲ್ಲಿ ಅಂಥಾದ್ದೇನಿಲ್ಲ ಅನ್ನೋದು, ಚಿತ್ರಮಂದಿರಗಳಲ್ಲಿ ನೋಡದೇ ಓಟಿಟಿಗೆ ಬಂದಮೇಲೆ ಅಯ್ಯೋ ಇಷ್ಟು ಒಳ್ಳೆ ಸಿನಿಮಾ ದೊಡ್ಡಪರದೆಯಲ್ಲಿ ಮಿಸ್ ಮಾಡಿಕೊಂಡುಬಿಟ್ಟೆ ಎಂದು ಹುಲುಬುವುದನ್ನು ನೋಡುತ್ತಲೇ ಇರ್ತೀವಿ. ಸದ್ಯ ಓಟಿಟಿಗೆ ಬಂದಿರುವ ಈ ಮೂರು ಕನ್ನಡ ಸಿನಿಮಾಗಳ ಬಗ್ಗೆ ಚರ್ಚೆ ಶುರುವಾಗದೆ.

ಪ್ರೇಮದ ಊರಲಿ

ಮನೋಜ್ ಕುಮಾರ್ ನಿರ್ದೇಶನದಲ್ಲಿ 'ಪ್ರೇಮದ ಊರಲಿ' ಸಿನಿಮಾ ಹೊಸ ಇತಿಹಾಸ ನಿರ್ಮಿಸಿದ್ದು ಗೊತ್ತೇಯಿದೆ. ಸದ್ಯ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ. ಶ್ರೀರಾಮ್, ರಮಿಕಾ, ರಂಗಾಯಣ ರಘು ಹಾಗೂ ತಪಸ್ವಿನಿ ಪೂಣಚ್ಚ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಬಾಕ್ಸಾಫೀಸ್‌ನಲ್ಲಿ 150 ಕೋಟಿ ರೂ. ಕೊಳ್ಳೆ ಹೊಡೆದ ಸಿನಿಮಾ ಈಗ ಓಟಿಟಿಯಲ್ಲಿ ಸದ್ದು ಮಾಡ್ತಿದೆ.

ಹೆಗ್ಗಣ ಮುದ್ದು

ಡಾಲಿ ಧನಂಜಯ್ ನಿರ್ಮಾಣದ 'ಹೆಗ್ಗಣ ಮುದ್ದು' ಸಿನಿಮಾ ಚಿತ್ರಮಂದಿರಗಳಲ್ಲಿ ಸೋತಿತ್ತು. ಕಳೆದ ನಾಲ್ಕೈದು ದಿನಗಳಿಂದ ಪ್ರೈಂ ವೀಡಿಯೋದಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಅವಿನಾಶ್ ಬಳ್ಳೆಕಲ ನಿರ್ದೇಶನದ ಚೊಚ್ಚಲ ಸಿನಿಮಾ ಇದು. ನವ ವಿವಾಹಿತ ದಂಪತಿ ನಡುವಿನ ಪ್ರೀತಿ, ಜಗಳ ಸಾಮರಸ್ಯದ ಕಥೆ ಚಿತ್ರದಲ್ಲಿದೆ. ಪೂರ್ಣಚಂದ್ರ ಮೈಸೂರು ಹಾಗೂ ಅದಿತಿ ಅರುಣ್ ಸಾಗರ್ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಅದಿತಿ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ.

ಮಾರ್ನಮಿ

ಎಂಟು ತಿಂಗಳ ಹಿಂದೆ ಬಿಡುಗಡೆ ಆಗಿದ್ದ 'ಮಾರ್ನಮಿ' ಸಿನಿಮಾ ಕೂಡ ಸದ್ದಿಲ್ಲದೇ ಓಟಿಟಿಗೆ ಬಂದಿದೆ. ಈ ಚಿತ್ರವನ್ನು ಕೂಡ ಪ್ರೈಂ ವೀಡಿಯೋದಲ್ಲೇ ವೀಕ್ಷಿಸಬಹುದು. ಕರಾವಳಿಯ ಹುಲಿವೇಷ ಸಂಸ್ಕೃತಿ, ಆಕ್ಷನ್ ಹಾಗೂ ಲವ್ ಸೇರಿ ಸಾಕಷ್ಟು ವಿಷಯಗಳಲ್ಲಿ ಚಿತ್ರದಲ್ಲಿದೆ. ರಿಶಿತ್ ಶೆಟ್ಟಿ ನಿರ್ದೇಶನದ ಚಿತ್ರದಲ್ಲಿ ಚೈತ್ರಾ ಜೆ. ಆಚಾರ್, ರಿತ್ವಿಕ್ ಮಠದ್, ಪ್ರಕಾಶ್ ತುಮಿನಾಡು, ಸೋನು ಗೌಡ ನಟಿಸಿದ್ದಾರೆ. ಈ ಚಿತ್ರ ಕೂಡ ಚಿತ್ರಮಂದಿರಗಳಲ್ಲಿ ಗೆದ್ದಿರಲಿಲ್ಲ. ಈಗ ಓಟಿಟಿಯಲ್ಲೇ ನೋಡಬಹುದು.