ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರೆದ ಬಳಿಕ ಸಿನಿಮಾಗಳು ಓಟಿಟಿಗೆ ಬರುತ್ತವೆ. ಆದರೆ ಕೆಲ ಸಿನಿಮಾಗಳು ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಿದ ಬಳಿಕ ಕೂಡ ಚಿತ್ರಮಂದಿರಗಳಲ್ಲಿ ಸದ್ದು ಮಾಡುತ್ತವೆ. 'ಪ್ರೇಮದ ಊರಲಿ' ಸಿನಿಮಾ ಅಂಥದ್ದೇ ಜಾದೂ ಮಾಡ್ತಿದೆ.

ಸಿನಿಮಾ ಓಟಿಟಿಗೆ ಬಂದು ವಾರ ಕಳೆದಿದೆ. ದೊಡ್ಡ ಪರದೆಯಲ್ಲಿ ಸಿನಿಮಾ ನೋಡದೇ ಓಟಿಟಿಯಲ್ಲಿ ಮಾತ್ರ ನೋಡಿದವರ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಸೂಪರ್ ಎಂದು ಉದ್ಘಾರ ತೆಗೆದರೆ ಮತ್ತೆ ಕೆಲವರು ಧಾರಾವಾಹಿ ತರ ಇದೆ, ಅದು ಹೇಗೆ ಸಿನಿಮಾ 150 ಕೋಟಿ ರೂ. ಕಲೆಕ್ಷನ್ ಮಾಡ್ತು ಎಂದು ಚರ್ಚೆ ಹುಟ್ಟಾಕ್ಕಿದ್ದಾರೆ. ಅದೆಲ್ಲೇ ಏನೇ ಇದ್ರು ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ.

ಮನೋಜ್ ಕುಮಾರ್ ನಿರ್ದೇಶಕ ರಂಗಾಯಣ ರಘು, ರಮಿಕಾ ಶಿವು ನಟನೆ ಪ್ರೇಕ್ಷಕರಿಗೆ ಮೋಡಿ ಮಾಡಿದೆ. 'ಪ್ರೇಮದ ಊರಲಿ' ಸಿನಿಮಾ ಮೆರವಣಿಗೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ಸಿನಿಮಾ ಓಟಿಟಿಗೆ ಬಂದಿದ್ದರೂ ಕೆಲವೆಡೆ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಗ್ತಿದೆ. ಬೆಂಗಳೂರು ಮಾತ್ರವಲ್ಲ ಬೆಳಗಾವಿಯಲ್ಲಿ ಕೂಡ ಸಿನಿಮಾ ಇವತ್ತಿಗೂ ಪ್ರದರ್ಶನ ಮುಂದುವರೆಸಿದೆ.

ಯಾವುದೇ ನಿರೀಕ್ಷೆ ಇಲ್ಲದೇ ಬಂದಿದ್ದ 'ಪ್ರೇಮದ ಊರಲಿ' ಸಿನಿಮಾ ನೋಡನೋಡುತ್ತಲೇ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆದಿತ್ತು. ಮೌತ್ ಪಬ್ಲಿಸಿಟಿ ಪ್ಲಸ್ ಆಗಿತ್ತು. ಫ್ಯಾಮಿಲಿ ಸಮೇತ ಸಿನಿಮಾ ನೋಡಲು ಜನ ಮುಗಿಬಿದ್ದರು. ತೆಲುಗಿಗೂ ಡಬ್ ಆಗಿ ಸಿನಿಮಾ ಸದ್ದು ಮಾಡಿತ್ತು. ಹಳ್ಳಿ ಪರಿಸರ, ಅನುಮಾನ- ನಂಬಿಕೆಗಳ ನಡುವೆ ಮಾನವ ಸಂಬಂಧಗಳ ಮೌಲ್ಯ ಎತ್ತಿ ಹಿಡಿದ ಕಥೆ ಪ್ರೇಕ್ಷಕರಿಗೆ ಆಪ್ತವಾಗಿತ್ತು.

'ಮುಂಗಾರು ಮಳೆ' ಬಳಿಕ ಕನ್ನಡದಲ್ಲಿ ಹೊಸ ತಂಡಕ್ಕೆ ಸಿಕ್ಕ ದೊಡ್ಡ ಗೆಲುವು ಇದು. ಕಳೆದ ವರ್ಷ ಬಂದಿದ್ದ 'ಸು ಫ್ರಮ್ ಸೋ' ಚಿತ್ರಕ್ಕಿಂತಲೂ ದೊಡ್ಡದಾಗಿ 'ಪ್ರೇಮದ ಊರಲಿ' ಸಿನಿಮಾ ಗೆದ್ದಿದೆ. ಪ್ರೈಂ ವೀಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗ್ತಿದೆ. ಭಾರೀ ಮೊತ್ತಕ್ಕೆ ರೈಟ್ಸ್ ಮಾರಾಟವಾಗಿದೆ ಎನ್ನಲಾಗ್ತಿದೆ. ಪರಭಾಷಾ ಪ್ರೇಕ್ಷಕರು ಓಟಿಟಿಯಲ್ಲಿ ಸಿನಿಮಾ ನೋಡಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. 5 ಭಾಷೆಗಳಲ್ಲಿ ಸಿನಿಮಾ ಓಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ.