ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದೀಗ ಜೈಲು ಹಕ್ಕಿ ದರ್ಶನ್‌ಗೆ ಕೊಂಚ ರಿಲ್ಯಾಕ್ಸ್ ಸಿಕ್ಕಿದೆ. ಒಂದ್ಕಡೆ ಜೈಲುವಾಸದ ಸಂಕಷ್ಟ. ಮತ್ತೊಂದು ಕಡೆ ಬೆನ್ನುನೋವಿನಿಂದ ಹೈರಾಣಾಗಿದ್ದಾರೆ. ಜೈಲಿನಲ್ಲೇ ಫಿಸಿಯೊಥೆರಪಿ ನಡೆಸಿದರೂ ಪ್ರಯೋಜನವಾಗ್ತಿಲ್ಲ. ಹಾಗಾಗಿ ಜೈಲಿನಿಂದ ಹೊರಗೆ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದರ್ಶನ್ ಅರ್ಜಿ ಸಲ್ಲಿಸಿದ್ದರು.

ದರ್ಶನ್ ಅರ್ಜಿ ಬೆನ್ನಲ್ಲೇ ಅವರ ಆರೋಗ್ಯಸ್ಥಿತಿ ವರದಿ ಜೈಲಿನ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಇದೀಗ ಆ ವರದಿ ಹಾಗೂ ದರ್ಶನ್ ಆರೋಗ್ಯಸ್ಥಿತಿ ಪರಿಶೀಲಿಸಿ ಬೆನ್ನುನೋವು ಉಪಶಮನಕ್ಕೆ ಚಿಕಿತ್ಸೆ ನೀಡಬೇಕು, ಅಗತ್ಯಬಿದ್ದರೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಬಹುದು ಎಂದು ನ್ಯಾಯಾಲಯ ಸೂಚಿಸಿದೆ. ನ್ಯಾಯಾಧೀಶೆ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ವರದಿ ಪರಿಶೀಲಿಸಿ ವಿಚಾರಣೆಯನ್ನು ನವೆಂಬರ್ 30ಕ್ಕೆ ಮುಂದೂಡಿದ್ದಾರೆ. ದರ್ಶನ್ ಎರಡ್ಮೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಮನವಿ ಮಾಡಿದ್ದರು. ಆದರೆ ನ್ಯಾಯಾಲಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸೂಚಿಸಿದೆ. ಇಂದು (ನ. 26) ವಿಚಾರಣೆ ವೇಳೆ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿದರು. ದರ್ಶನ್ ಆರೋಗ್ಯಸ್ಥಿತಿಯ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದರು.

ಜೈಲಿನಲ್ಲಿ ಕಳೆದ 20 ದಿನದಲ್ಲಿ ಮೂರ್ನಾಲ್ಕು ಬಾರಿ ಫಿಸಿಯೊಥೆರಫಿ ಮಾಡಲಾಗಿದೆ. ಎಪಿಡ್ಯೂರಲ್ ಇಂಜೆಕ್ಷನ್ ನೀಡಲು ನಿರ್ದೇಶನ ಕೊಡಬೇಕು, ದರ್ಶನ್ ತಮ್ಮ ಸಮಸ್ಯೆಯನ್ನು ಯಾರ ಬಳಿಯೂ ಹೇಳಿಕೊಳ್ಳಲು ಆಗ್ತಿಲ್ಲ. ಹೀಗಾಗಿ ಜೈಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದರು. ಬಿಜಿಎಸ್ ಅಥವಾ ಹಾಸ್ಮಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಕೋರಿ ದರ್ಶನ್ ಅರ್ಜಿ ಸಲ್ಲಿಸಿದ್ದರು.

ದರ್ಶನ್ ಹಲವು ವರ್ಷಗಳಿಂದ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗ್ತಿದೆ. ಜೈಲಿಗೆ ಹೋದ ಬಳಿಕ ನೋವು ಹೆಚ್ಚಾಗಿತ್ತು. ಈ ಹಿಂದೆ ಮಧ್ಯಂತರ ಜಾಮೀನು ಕೊಡಲು ಕೂಡ ಬೆನ್ನು ನೋವಿನ ಸಮಸ್ಯೆ ಕಾರಣವನ್ನೇ ನ್ಯಾಯಾಲಯದ ಮುಂದೆ ಇಡಲಾಗಿತ್ತು. ದರ್ಶನ್‌ಗೆ ಕೂಡಲೇ ಸೂಕ್ತ ಚಿಕಿತ್ಸೆ ನೀಡದಿದ್ದರೆ ಭಾರೀ ಸಮಸ್ಯೆ ಆಗುತ್ತದೆ ಎಂದು ವಾದ ಮಂಡಿಸಿ ವಕೀಲರು 6 ವಾರಗಳ ಮಧ್ಯಂತರ ಜಾಮೀನು ಕೊಡಿಸಿದ್ದರು. ಬಳಿಕ ಸಂಪೂರ್ಣವಾಗಿ ಜಾಮೀನು ಲಭಿಸಿತ್ತು. ಆದ್ರೆ ದರ್ಶನ್ ನಿಮಯ ಮೀರಿ ವಿದೇಶಕ್ಕೆ ತೆರಳಿ ಮೋಜು ಮಸ್ತಿ ಮಾಡಿದ್ದು ಸಮಸ್ಯೆ ಆಗಿತ್ತು.

ದರ್ಶನ್‌ಗೆ ಹೈಕೋರ್ಟ್ ನೀಡಿದ ಜಾಮೀನಿನ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಪೊಲೀಸರು ಮೇಲ್ಮನವಿ ಸಲ್ಲಿಸಿದ್ದರು. ಈ ವೇಳೆ ದರ್ಶನ್ ವಿದೇಶ ಪ್ರವಾಸದ ಫೋಟೊ, ವೀಡಿಯೋ ಸುಪ್ರೀಂ ಗಮನಕ್ಕೆ ತರಲಾಗಿತ್ತು. ಹಾಗಾಗಿ ಜಾಮೀನು ರದ್ದಾಗಿ ಎಲ್ಲಾ ಆರೋಪಿಗಳು ಮತ್ತೆ ಜೈಲು ಸೇರುವಂತಾಗಿತ್ತು.