ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ಮುಂದುವರೆದಿದೆ. 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಇಂದು(ನವೆಂಬರ್ 23) ಸಾಕ್ಷಿಗಳ ವಿಚಾರಣೆ ನಡೆಯಿತು. ಪ್ರಕರಣದ ಮತ್ತೊಬ್ಬ ಪ್ರತ್ಯಕ್ಷ ಸಾಕ್ಷಿ ಕಿರಣ್ ಈಗ ಉಲ್ಟಾ ಹೊಡೆದಿದ್ದಾನೆ. ಈ ಹಿಂದೆ ಪುನೀತ್ ಎಂಬಾತ ಕೂಡ ವ್ಯತಿರಿಕ್ತವಾಗಿ ಸಾಕ್ಷಿ ನುಡಿದಿದ್ದು ಗೊತ್ತೇಯಿದೆ.
ಎರಡು ವರ್ಷಗಳ ಹಿಂದೆ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿಗೆ ಕರೆತರಲಾಗಿತ್ತು. ಬಳಿಕ ಪಟ್ಟಣಗೆರೆ ಶೆಡ್ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ಕೊಡಲಾಗಿತ್ತು. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಕ್ಕೆ ಥಳಿಸಿ ಬುದ್ಧಿ ಹೇಳಲು ಯತ್ನಿಸಲಾಗಿತ್ತು. ಈ ವೇಳೆ ಆತನ ಪ್ರಾಣವೇ ಹೋಗಿತ್ತು. ಪ್ರಕರಣದಲ್ಲಿ ನಟ ದರ್ಶನ್ ಸೇರಿ 15ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿತ್ತು. ಆರೋಪಿಗಳೆಲ್ಲಾ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಪ್ರಕರಣದ ವಿಚಾರಣೆ ನಡೀತಿದ್ದು ಸಾಕ್ಷಿಗಳನ್ನು ಕರೆಸಿ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಲಾಗ್ತಿದೆ. ಅಂದ ಹಾಗೆ ಪ್ರಕರಣದ ಎರಡನೇ ಪ್ರತ್ಯಕ್ಷ ಸಾಕ್ಷಿ ಪಟ್ಟಣಗೆರೆ ಶೆಡ್ ಕಾರ್ಮಿಕ ಕಿರಣ್. ಘಟನೆ ನಡೆದ ಆ ದಿನ ಅಂದ್ರೆ 2024ರ ಜೂನ್ 8ರಂದು ಬೆಳಿಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ಕಿರಣ್ ಶೆಡ್ ಬಳಿ ಕೆಲಸ ಮಾಡಿದ್ದಾಗಿ ನ್ಯಾಯಾಧೀಶರ ಮುಂದೆ ಹೇಳಿದ್ದಾನೆ.
ಮಧ್ಯಾಹ್ನ ಊಟಕ್ಕೆ ಹೋಗಿ ಬಂದ ಬಳಿಕ ಕೂಡ ಕೆಲಸ ಮುಂದುವರೆಸಿದೆ. ಆ ದಿನ ಶೆಡ್ ಬಳಿ ಸಾಕಷ್ಟು ವಾಹನಗಳು ಬಂದಿದ್ದವು. ಶೆಡ್ನಲ್ಲಿ ಯಾವುದೇ ಘಟನೆ ನಡೆದಿಲ್ಲ ಎಂದು ಸಾಕ್ಷಿ ಹೇಳಿದ್ದು ದರ್ಶನ್ ಸೇರಿ ಯಾವುದೇ ಆರೋಪಿಗಳು ನನಗೆ ಗೊತ್ತಿಲ್ಲ ಎಂದಿದ್ದಾನೆ. ಕಿರಣ್ ಉಲ್ಟಾ ಹೊಡೆಯುತ್ತಿದ್ದಂತೆ ಆತನನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸಲು ಎಸ್ಪಿಪಿ ನ್ಯಾಯಾಲಯಕ್ಕೆ ವಿನಂತಿಸಿ ಕ್ರಾಸ್ ಎಗ್ಸಾಮಿನೇಷನ್ ಮಾಡಲು ಅನುಮತಿಗಾಗಿ ಕೋರಿದ್ದರು. ದರ್ಶನ್ ಪರ ವಕೀಲರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ರು, ವಿಚಾರಣೆಯನ್ನು ನವೆಂಬರ್ 30ಕ್ಕೆ ಮುಂದೂಡಲಾಯಿತು.
ಆ ದಿನ ಶೆಡ್ ಬಳಿ ಯಾವುದೇ ಘಟನೆ ನಡೆದಿಲ್ಲ ಎಂದು ಕಿರಣ್ ಹೇಳುತ್ತಿದ್ದಂತೆ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಹಾಜರಾಗಿದ್ದ ಆರೋಪಿಗಳನ್ನು ಗುರ್ತಿಸಬಹುದೇ ಎಂದು ಎಸ್ಪಿಪಿ ಕೇಳಿದ್ದರು. ದರ್ಶನ್ ಸೇರಿದಂತೆ ಯಾವುದೇ ಆರೋಪಿ ನನಗೆ ಗೊತ್ತಿಲ್ಲ ಎಂದು ಕಿರಣ್ ಹೇಳಿದ್ದಾನೆ. ಪೊಲೀಸ್ ತನಿಖೆ ವೇಳೆ ಏನು ಹೇಳಿಕೆ ನೀಡಿದ್ದೆ ಎನ್ನುವುದು ಗೊತ್ತಿಲ್ಲ, ನ್ಯಾಯಾಧೀಶರ ಮುಂದೆ 164 ರ ಅಡಿಯಲ್ಲಿ ನೀಡಿದ ಹೇಳಿಕೆ ಕೂಡ ಮರೆತು ಹೋಗಿದೆ ಎಂದಿದ್ದಾನೆ. ಒಟ್ಟಾರೆ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿದೆ.