ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾದ ಬಳಿಕ ಎರಡನೇ ಬಾರಿ ದರ್ಶನ್ ಜೈಲು ಸೇರಿ ವರ್ಷ ಕಳೆದಿದೆ. ಕುಟುಂಬಸ್ಥರ ಜೊತೆಗೆ ಕೆಲ ಆಪ್ತರು ಹೋಗಿ ಜೈಲಿನಲ್ಲಿ ದರ್ಶನ್ ಭೇಟಿ ಮಾಡಿ ಬಂದಿದ್ದಾರೆ. ಕೆಲವರಿಗೆ ಅವಕಾಶ ಸಿಕ್ಕಿಲ್ಲ. ಇಂತಹ ಹೊತ್ತಲ್ಲಿ ದರ್ಶನ್ ಭೇಟಿ ಮಾಡೋಕೆ ಆಗ್ತಿಲ್ಲ ಎಂದು ಬೇಸರಗೊಂಡಿರುವವರು ಇದ್ದಾರೆ.
ದರ್ಶನ್ ಜೊತೆಗಿನ ಆತ್ಮೀಯ ಒಡನಾಟವನ್ನು ಪೋಷಕ ನಟಿ ಚಿತ್ರಾ ಶೆಣೈ ಹಂಚಿಕೊಂಡಿದ್ದಾರೆ. 'ನ್ಯೂಸೋ ನ್ಯೂಸು' ಯೂಟ್ಯೂಬ್ ಸಂದರ್ಶನದಲ್ಲಿ ಅವರು ಮಾತನಾಡಿರುವುದು ವೈರಲ್ ಆಗ್ತಿದೆ. ಕಿರುತೆರೆ ಮೂಲಕ ಬಣ್ಣದಲೋಕಕ್ಕೆ ಬಂದ ಚಿತ್ರಾ ಶೆಣೈ ಕೆಲ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಬಳಿಕ ಸಿನಿಮಾ ಬಿಟ್ಟು ಕಿರುತೆರೆಗೆ ಮರಳಿದ್ದರು. ಕೊನೆಗೆ ಪೋಷಕ ನಟಿಯಾಗಿ ಚಿತ್ರರಂಗಕ್ಕೆ ವಾಪಸ್ ಆಗಿದ್ದರು. ಈವರೆಗೆ 600ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ಕನ್ನಡದಲ್ಲಿ ಸಾಕಷ್ಟು ನಟ, ನಟಿಯರಿಗೆ ಮೊದಲ ಚಿತ್ರದಲ್ಲಿ ತಾಯಿಯಾಗಿ ಚಿತ್ರಾ ಶೆಣೈ ನಟಿಸಿರುವುದು ವಿಶೇಷ. ದರ್ಶನ್ ಹಾಗೂ ಸುದೀಪ್ ಸಿನಿಮಾಗಳಲ್ಲಿ ಕೂಡ ಪೋಷಕ ನಟಿಯಾಗಿ ಆಕೆ ಕಾಣಿಸಿಕೊಂಡಿದ್ದಾರೆ. ದರ್ಶನ್ ಜೊತೆಗೆ ಬಹಳ ಆತ್ಮೀಯ ಒಡನಾಟವಿದೆ. 'ದಾಸ' ಚಿತ್ರದ ಮೊದಲ ಬಾರಿಗೆ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಬಳಿಕ ಲಾಲಿ ಹಾಡು, ಲಂಕೇಶ್ ಪತ್ರಿಕೆ, ಕಲಾಸಿಪಾಳ್ಯ, ದರ್ಶನ್, ಶಾಸ್ತ್ರಿ, ಅಯ್ಯ, ದತ್ತ, ಮಂಡ್ಯ, ತಂಗಿಗಾಗಿ, ಗಜ, ಪೊರ್ಕಿ, ಶೌರ್ಯ, ಬುಲ್ ಬುಲ್, ವಿರಾಟ್, ಒಡೆಯ ಹೀಗೆ ದರ್ಶನ್ ನಟಿಸಿದ ಸಾಕಷ್ಟು ಸಿನಿಮಾಗಳಲ್ಲಿ ಚಿತ್ರಾ ಶೆಣೈ ನಟಿಸಿದ್ದಾರೆ. ಕೆಲ ಸಿನಿಮಾಗಳಲ್ಲಿ ದರ್ಶನ್‌ಗೆ ತಾಯಿ ಪಾತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದರು.
ಚಿತ್ರರಂಗದಲ್ಲಿ ದರ್ಶನ್ ಹೀರೊ ಆಗಿ ಬೆಳೆದಂತೆ ಚಿತ್ರಾ ಶೆಣೈ ಪೋಷಕ ನಟಿಯಾಗಿ ಬೆಳಯುತ್ತಾ ಬಂದವರು. ಇದೇ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ. "ನಾನು, ದರ್ಶನ್ ತೆರೆಹಿಂದೆ ಕೂಡ ತಾಯಿ, ಮಗನಂತೆ ಇದ್ದೀವಿ.. ದರ್ಶನ್, ಸುದೀಪ್ ಸೂಪರ್ ಸ್ಟಾರ್ಸ್ ಆಗುವುದಕ್ಕೆ ಮೊದಲಿನಿಂದ ಅವರೊಟ್ಟಿಗೆ ನಾನು ಸಿನಿಮಾ ಮಾಡ್ತಾ ಬಂದಿದ್ದೀನಿ.. ಫ್ರೆಂಡ್ಸ್ ತರ ಇದ್ವಿ.. ಒಟ್ಟಿಗೆ ಇರೋದು, ಊಟ ಹಂಚಿಕೊಂಡು ತಿನ್ನೋದು. 'ದರ್ಶನ್' ಅಂತ್ಲೇ ಒಂದು ಚಿತ್ರ ಮಾಡಿದ್ವಿ.. ಮೂಡಿಗೆರೆಯಲ್ಲಿ ಶೂಟಿಂಗ್.. ದರ್ಶನ್ ಬಳಿ ಆಗ ಸಫಾರಿ ಕಾರ್ ಇತ್ತು. ಬಾ ಅಮ್ಮ ಹೋಗಣ ಅಂತ ಸೃಜನ್, ದರ್ಶನ್ ಆಗ ನನ್ನ ಮಂಗಳೂರಿಗೆ ಕರ್ಕೊಂಡ್ ಹೋಗಿದ್ರು.. ಗರ್ಲ್ ಫ್ರೆಂಡ್ಸ್ ಜೊತೆ ಓಡಾಡ್ಬೇಕು, ನಿನ್ನ ಜೊತೆ ಓಡಾಡೋ ತರ ಆಯ್ತು ಅಂತ ತಮಾಷೆ ಮಾಡಿದ್ರು" ಎಂದು ನೆನಪಿಸಿಕೊಂಡಿದ್ದಾರೆ.
ಮಾತು ಮುಂದುವರೆಸಿದ ಚಿತ್ರಾ ಶೆಣೈ ಸಾಕಷ್ಟು ಸಂಗತಿ ಬಿಚ್ಚಿಟ್ಟಿದ್ದಾರೆ. ದರ್ಶನ್ ಬಗ್ಗೆ ಮಾತನಾಡ್ತಾ ಕಣ್ಣೀರಾಗಿದ್ದಾರೆ. "ಯಾವ ಫೋನ್ ಬೇಕಮ್ಮ ನಿಂಗೆ, ಹೊಸ ಐಫೋನ್ ಬಂದಿದೆ ತಗೋ ಅಂದ್ರು. ಐಫೋಣ್ ಯೂಸ್ ಮಾಡೋಕೆ ಬರಲ್ಲ, ಅಂದಿದ್ದಕ್ಕೆ ಸ್ಯಾಮ್‌ಸಂಗ್ ಯಾವ್ದು ಚೆನ್ನಾಗಿದೆ ಅಂತ ಕೇಳಿ ಮರುದಿನ ಆ ಫೋನ್ ತಂದು ಕೊಟ್ಟಿದ್ದ.. ಅಷ್ಟು ಪ್ರೀತಿಯಿಂದ ಬೆಳೆದಿದ್ದೀವಿ.. ಇವತ್ತು ನಮ್ಮ ಕೈಲಿ ಏನು ಮಾಡೋಕೆ ಆಗ್ತಿಲ್ಲ ಎಂದು ದುಃಖ ಆಗ್ತಿದೆ.. ಒಂದೇ ತಟ್ಟೆಯಲ್ಲಿ ಕೂತು ಊಟ ಮಾಡಿದ್ದೀವಿ.. 'ಒಡೆಯ' ಚಿತ್ರದ ಚಿತ್ರೀಕರಣದಲ್ಲಿ ಉಪ್ಪಿಟ್ಟು ಮಾಡ್ಕೊಂಡು ಹೋಗಿ ಕೊಟ್ಟಿದ್ದೆ.. ಈಗ ಹೋಗಿ ನೋಡೋಕು ಆಗ್ತಿಲ್ಲ" ಎಂದು ಚಿತ್ರಾ ಶೆಣೈ ಕಣ್ಣಾಲಿಗಳಲ್ಲಿ ನೀರು ತುಂಬಿಕೊಡಿದ್ದಾರೆ.
ಅವ್ನು ಇಷ್ಟು ದುಃಖದಲ್ಲಿದ್ದಾನೆ, ಕಷ್ಟದಲ್ಲಿದ್ದಾನೆ.. ಹೋಗಿ ಸಾಂತ್ವನ ಹೇಳೋಕು ಆಗ್ತಿಲ್ಲ.. ನನ್ನ ತುಂಬಾ ಜನ ಕೇಳ್ತಾರೆ.. ಅವರೊಟ್ಟಿಗೆ ಇಷ್ಟು ಸಿನಿಮಾದಲ್ಲಿ ನಟಿಸಿದ್ದೀರಾ ಹೋಗಿ ನೋಡಲ್ವಾ ಅಂತಾರೆ.. ನಮಗೆ ಅವಕಾಶ ಇದ್ಯೋ ಇಲ್ವೋ ಗೊತ್ತಿಲ್ಲ.. ಜೈಲಿನವರೆಗೆ ಹೋಗಿ ಬೇಡ ಅಂದುಬಿಟ್ರೆ ಏನು ಮಾಡೋದು.. ಯಾರನ್ನು ಕೇಳಬೇಕು ಗೊತ್ತಿಲ್ಲ.. ನಿಜಕ್ಕೂ ಬಹಳ ದುಃಖ ಆಗುತ್ತೆ ಎಂದು ಚಿತ್ರಾ ಶೆಣೈ ಭಾವುಕರಾಗಿದ್ದಾರೆ.. ಪುನೀತ್ ಅಗಲಿಕೆ, ದರ್ಶನ್ ಸಂಕಷ್ಟದ ಬಳಿಕ ನನಗೆ ಕೊಂಚ ಅವಕಾಶಗಳು ಕಮ್ಮಿ ಆಗಿದೆ ಎಂದು ವಿವರಿಸಿದ್ದಾರೆ.
Negativity may spread faster, but good deeds have the power to silence an entire generation🥹@dasadarshan 👑 #DBoss #Darshan #BossOfSandalwood #DevilTheHero pic.twitter.com/zGpufxxxrU
— ಸೆಲೆಬ್ರಿಟಿ Of ಸಾರಥಿ (@hoysala799) November 16, 2026