ದರ್ಶನ್ ಹಾಗೂ ಪವಿತ್ರಾ ಗೌಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಎ1, ಎ2 ಆರೋಪಿಗಳಾಗಿ ಇಬ್ಬರೂ ಜೈಲು ಸೇರಿದ್ದಾರೆ. ನಡುವೆ ಜಾಮೀನು ಸಿಕ್ಕಿ ಹೊರ ಬಂದರೂ ಬಳಿಕ ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ರದ್ದಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಬ್ಬರೂ ಬಂಧಿಯಾಗಿದ್ದಾರೆ. ಪ್ರಕರಣದ ವಿಚಾರಣೆ ವೇಳೆ ದರ್ಶನ್-ಪವಿತ್ರಾ ಮಾತನಾಡಿರುವುದಾಗಿ ವರದಿಯಾಗಿದೆ.
ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆ 59ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಡೀತಿದೆ. ಈ ವೇಳೆ ಆರೋಪಿಗಳು ಕೂಡ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಇಂದು(ನವೆಂಬರ್ 12) ವಿಚಾರಣೆ ವೇಳೆ ಕೆಲ ಹೊತ್ತು ವೀಡಿಯೋ ಕಾನ್ಫರೆನ್ಸ್ ಕನೆಕ್ಷನ್ ತಪ್ಪಿತ್ತು. ಆ ಸಮಯದಲ್ಲಿ ಇಬ್ಬರ ನಡುವೆ ಸಂಭಾಷಣೆ ನಡೆದಿದೆ ಎನ್ನಲಾಗ್ತಿದೆ. ಉಭಯಕುಶಲೋಪರಿ ವಿಚಾರಿಸಿದ್ದು ಇನ್ನು ಎಷ್ಟು ದಿನ ಹೀಗೆ ಕಾಲ ಕಳೆಯುವುದು ಎಂದು ದರ್ಶನ್ ಬಳಿ ಪವಿತ್ರಾ ಕೇಳಿದ್ದಾರೆ.
ಇನ್ನು 4 ತಿಂಗಳು ಹೀಗೆ ಇರಬೇಕು ಎಂದು ಪವಿತ್ರಾ ಪ್ರಶ್ನೆಗೆ ದರ್ಶನ್ ಉತ್ತರಿಸಿದ್ದಾರೆ. ನನಗೆ ಜೈಲಿನ ಬ್ಯಾರಕ್ನಲ್ಲಿ ಸಮಸ್ಯೆ ಆಗ್ತಿದೆ ಎಂದು ಪವಿತ್ರಾ ಹೇಳಿದ್ದು ನಮಗೂ ಸಮಸ್ಯೆ ಆಗ್ತಿದೆ. ಏನು ಮಾಡೋಕೆ ಆಗಲ್ಲ, ಸ್ವಲ್ಪ ದಿನ ತಾಳ್ಮೆಯಿಂದ ಕಾಯಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಬೆನ್ನು ನೋವು ಹೇಗಿದೆ ಎಂದು ಪವಿತ್ರಾ ಗೌಡ ಕೇಳಿದ್ದು ಬೆನ್ನೇ ಮುರಿದು ಹೋದಂತೆ ಆಗಿದೆ ಎಂದು ದರ್ಶನ್ ಸಂಜ್ಞೆ ಮಾಡಿ ತೋರಿಸಿದ್ದಾರೆ. ವೀಡಿಯೋ ಕಾನ್ಫರೆನ್ಸ್ ಕನೆಕ್ಷನ್ ಸರಿ ಆಗುತ್ತಿದ್ದಂತೆ ಇಬ್ಬರೂ ಸುಮ್ಮನಾಗಿರುವುದಾಗಿ ಗೊತ್ತಾಗಿದೆ.
ಸದ್ಯ ಪ್ರಕರಣದ ಪ್ರತ್ಯಕ್ಷ ಸಾಕ್ಷಿ ಪುನೀತ್ ಪಾಠಿ ಸವಾಲು ನಡೀತಿದೆ. ಇತ್ತೀಚೆಗೆ ಪುನೀತ್ ತಮ್ಮ ಹೇಳಿಕೆಯಲ್ಲಿ ಉಲ್ಟಾ ಹೊಡೆದಿದ್ದರು. ತನಿಖೆ ವೇಳೆ ಪೊಲೀಸರ ಮುಂದೆ ನೀಡಿದ್ದ ಹೇಳಿಕೆಯನ್ನು ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಬದಲಿಸಿದ್ದರು. ಇನ್ನು ದರ್ಶನ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು ಜೈಲಿನಲ್ಲೇ ಫಿಸಿಯೋ ಥೆರಪಿ ಆರಂಭವಾಗಿದೆ.