ರೇಣುಕಾಸ್ವಾಮಿ ಪ್ರಕರಣದಲ್ಲಿ ಸಾಕಷ್ಟು ಬೆಳವಣಿಗೆ ಆಗ್ತಿದೆ. ಇಂತಹ ಹೊತ್ತಲ್ಲಿ ದರ್ಶನ್ ಹಾಗೂ ಆತನ ಆಪ್ತರು ಬಾಯಿಗೆ ಬೀಗ ಹಾಕಿಕೊಳ್ಳಬೇಕಿದೆ. ಗೊತ್ತೋ ಗೊತ್ತಿಲ್ಲದೆಯೋ ನೀಡುತ್ತಿರುವ ಕೆಲ ಹೇಳಿಕೆಗಳು ಅವರಿಗೆ ಮುಳುವಾಗುತ್ತಿದೆ. ನಿನ್ನೆ(ನವೆಂಬರ್ 12) ಕೋರ್ಟ್ ವಿಚಾರಣೆ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಸಂಭಾಷಣೆ ಕೂಡ ಇಂಥದ್ದೇ ಎಡವಟ್ಟು ಮಾಡಿದೆ.
ಒಂದು ವರ್ಷ ಜಾಮೀನು ಅರ್ಜಿ ಸಲ್ಲಿಸದಂತೆ ಸುಪ್ರೀಂ ಕೋರ್ಟ್ ಹೇಳಿದೆ. ಇದರ ನಡುವೆ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಲು ದರ್ಶನ್ ಅಂಡ್ ಗ್ಯಾಂಗ್ ಪ್ರಯತ್ನ ಮಾಡ್ತಿದೆ. ನಿನ್ನೆ ಪವಿತ್ರಾ ಗೌಡ ಜೊತೆಗಿನ ಸಂಭಾಷಣೆಯಲ್ಲಿ "ಇನ್ನೊಂದು ನಾಲ್ಕು ತಿಂಗಳು ತಡ್ಕೊ, ಹೈಕೋರ್ಟ್ನಲ್ಲಿ ಜಡ್ಜ್ ಚೇಂಜ್ ಆಗ್ತಾರೆ. ಆಗ ಜಾಮೀನು ಅರ್ಜಿ ಹಾಕೋಣ, ಇಷ್ಟು ದಿನಾನೇ ತಡೆದಿದ್ದೀಯ, ಇನ್ನೊಂದು ಸ್ವಲ್ಪ ದಿನ ಅಷ್ಟೆ" ಎಂದು ಪವಿತ್ರಾ ಗೌಡಗೆ ದರ್ಶನ್ ಸಮಾಧಾನ ಮಾಡಿದ್ದಾರೆ. ಇದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ತಾವು ಆರೋಪಿ ಎನ್ನುವುದನ್ನೇ ದರ್ಶನ್ ಮರೆತಂತೆ ಕಾಣುತ್ತಿದೆ. ಎಲ್ಲಿ ಹೇಗಿರಬೇಕು, ಏನು ಮಾತನಾಡಬೇಕು ಎಂದು ಗೊತ್ತಿಲ್ಲದಂತೆ ಕಾಣ್ತಿದೆ. ಇಂತಹ ಹೇಳಿಕೆಗಳು ಮುಂದೆ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ಮಹತ್ವ ಪಡೆದುಕೊಳ್ಳಲಿದೆ. ಇತ್ತೀಚೆಗೆ ಧನ್ವೀರ್ ಪ್ರಕರಣದಲ್ಲಿ ಕೂಡ ದರ್ಶನ್ ಭೇಟಿ ಮಾಡಿ ಬಂದು ಆಪ್ತ ಝೈದ್ ಖಾನ್ ಇಂಥದ್ದೇ ಹೇಳಿಕೆ ಕೊಟ್ಟಿದ್ದರು. ಜೈಲಿನಿಂದಲೇ ಧನ್ವೀರ್ಗೆ ದರ್ಶನ್ ಅಣ್ಣ ಎಚ್ಚರಿಕೆ ಕೊಟ್ಟಿದ್ದಾರೆ ಎಂದಿದ್ದರು.
ಇದೀಗ "ಹೈಕೋರ್ಟ್ ಜಡ್ಜ್ ಚೇಂಜ್ ಆಗ್ತಾರೆ ಇರು, ಬಳಿಕ ಜಾಮೀನು ಅರ್ಜಿ ಹಾಕೋಣ" ಎನ್ನುವ ಅರ್ಥದಲ್ಲಿ ಪವಿತ್ರಾ ಗೌಡ ಬಳಿ ದರ್ಶನ್ ಮಾತನಾಡಿದ್ದಾರೆ. ಮುಂದೆ ಹೊಸ ಜಡ್ಜ್ ಬಂದಾಗ ಜಾಮೀನು ಅರ್ಜಿ ವಿಚಾರಣೆ ವೇಳೆ ತೆಗೆದುಕೊಳ್ಳುವ ನಿರ್ಧಾರವನ್ನು ಅನುಮಾನದಿಂದ ನೋಡುವಂತಾಗಿದೆ. ಹಾಗಾಗಿ ಜಾಮೀನು ಅಥವಾ ಇತರೆ ಸೌಲಭ್ಯ ಕೇಳಿ ಹಾಕುವ ಅರ್ಜಿಗಳ ವಿಚಾರಣೆಗೆ ಹಿನ್ನಡೆ ಆಗಲಿದೆ. ದರ್ಶನ್ ಸ್ವತಃ ತಮ್ಮ ಕೈಯಾರೆ ಜೈಲಿನಿಂದ ಹೊರಬರುವ ದಾರಿಗಳನ್ನು ಮುಚ್ಚಿಕೊಳ್ಳುತ್ತಿರುವಂತೆ ಕಾಣ್ತಿದೆ.
ಪ್ರಕರಣ ಸಂಬಂಧ 33 ಸಾಕ್ಷಿಗಳ ವಿಚಾರಣೆ ನಡೆದಿದೆ. ಇನ್ನು 150 ಸಾಕ್ಷಿಗಳ ವಿಚಾರಣೆ ನಡೆಯುವ ನಿರೀಕ್ಷೆಯಿದೆ. ಸದ್ಯ 34 ಸಾಕ್ಷಿ ಪುನೀತ್ಗೆ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಪ್ರಸನ್ನ ಕುಮಾರ್ ಪ್ರಶ್ನೆಗಳನ್ನು ಕೇಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ವೇಳೆ ಆರೋಪಿಗಳೆಲ್ಲಾ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಆಲಿಸುತ್ತಿದ್ದಾರೆ. ಅರ್ಧ ಗಂಟೆ ಕೋರ್ಟ್ ಹಾಲ್ ವೀಡಿಯೋ ಕಾನ್ಫೆರೆನ್ಸ್ ಕಟ್ ಆಗಿದ್ದಾಗ ದರ್ಶನ್ ಹಾಗೂ ಪವಿತ್ರಾ ಗೌಡ ನಡುವೆ ಸಂಭಾಷಣೆ ನಡೆದಿದೆ.