ರೇಣುಕಾಸ್ವಾಮಿ ಪ್ರಕರಣದಲ್ಲಿ ಎಲ್ಲಾ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಪದೇ ಪದೆ ಜಾಮೀನು ಕೋರಿ ಅರ್ಜಿ ಸಲ್ಲಿಸಿ ಪ್ರಯೋಜನವಾಗದೇ ಸುಮ್ಮನಾಗಿದ್ದಾರೆ. ಇದೆಲ್ಲದರ ನಡುವೆ ಮತ್ತೆ ಪವಿತ್ರಾ ಗೌಡ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಸಹೋದರನ ಮದುವೆಗೆ ಹಾಜರಾಗಬೇಕು ಎಂದು ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಡಿಸೆಂಬರ್ 12 ಹಾಗೂ 13ರಂದು ಪವಿತ್ರಾ ಗೌಡ ಸಹೋದರನ ಮದುವೆಯಿದೆ. ಮದುವೆಗೆ ಹಾಜರಾಗಲು ಮಧ್ಯಂತರ ಜಾಮೀನು ಬೇಕು ಎಂದು ಆಕೆಯ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಡಿಸೆಂಬರ್ 4ಕ್ಕೆ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ನಿಗದಿಪಡಿಸಿದೆ. ಅಂದು ಪವಿತ್ರಾ ಗೌಡಗೆ ಜಾಮೀನು ಕೊಡಬೇಕೋ ಬೇಡವೋ ಎಂದು ನ್ಯಾಯಾಲಯ ತೀರ್ಮಾನಿಸಲಿದೆ.

ಕೆಳ ನ್ಯಾಯಾಲಯಗಳಲ್ಲಿ ದರ್ಶನ್ ಸೇರಿ ಎಲ್ಲಾ ಆರೋಪಿಗಳ ಜಾಮೀನು ಅರ್ಜಿ ವಜಾ ಆಗ್ತಿತ್ತು. ಬಳಿಕ ದರ್ಶನ್ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಜಾಮೀನು ಕೊಡಲ್ಲ, ಒಂದು ವರ್ಷ ಅರ್ಜಿ ಸಲ್ಲಿಸದಂತೆ ದರ್ಶನ್‌ಗೆ ಕೋರ್ಟ್ ಸೂಚಿಸಿತ್ತು. ಹಾಗಾಗಿ ಬೇರೆ ಆರೋಪಿಗಳು ಕೂಡ ಜಾಮೀನು ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠದಲ್ಲಿ ನಡೆಯಿತು. ಈ ವೇಳೆ ಎಸ್‌ಪಿಪಿಗೆ ಅರ್ಜಿ ಪ್ರತಿ ಸಲ್ಲಿಸಲು ಕಾಲಾವಕಾಶ ಪವಿತ್ರಾ ಗೌಡ ಪರ ವಕೀಲರು ಮನವಿ ಮಾಡಿದರು. ಅರ್ಜಿಯ ಪ್ರತಿ ಹಾಗೂ ನೋಟಿಸ್ ಪಡೆದುಕೊಳ್ಳುವಂತೆ ಎಸ್‌ಪಿಪಿಗೆ ಕೋರ್ಟ್ ಸೂಚಿಸಿದೆ. ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ವಿಚಾರಣೆ ಮುಂದೂಡಲಾಗಿದೆ.

59ನೇ ಸೆಷನ್ಸ್ ನ್ಯಾಯಾಲಯದಲ್ಲಿ ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ ಆಗಿತ್ತು. ಹಾಗಾಗಿ ಈಗ ಹೈಕೋರ್ಟ್‌ನಲ್ಲಿ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.