ಬೆನ್ನು ನೋವಿನ ಸಮಸ್ಯೆಯಿಂದ ನಟ ದರ್ಶನ್ ಬಳಲುತ್ತಿದ್ದಾರೆ. ಜೈಲಿನಲ್ಲಿ ಸಿಗುತ್ತಿರುವ ಚಿಕಿತ್ಸೆಯಿಂದ ಯಾವುದೇ ಪ್ರಯೋಜನ ಆಗ್ತಿಲ್ಲ. ಹಾಗಾಗಿ ಜೈಲಿನಿಂದ ಹೊರಗೆ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದರ್ಶನ್ ಮನವಿ ಮಾಡಿ ಅರ್ಜಿ ಸಲ್ಲಿಸಿದ್ದರು. ಅಗತ್ಯಬಿದ್ದರೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದರ್ಶನ್ ಚಿಕಿತ್ಸೆ ಪಡೆಯಬಹುದು ಎಂದು ನ್ಯಾಯಾಲಯ ಸೂಚಿಸಿದೆ.

ಚಿಕಿತ್ಸೆಗಾಗಿ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಗಡೆ ಬರುವ ಅವಕಾಶ ಸಿಕ್ಕಿದೆ. ಬಹಳ ದಿನಗಳ ನಂತರ ಹೊರಗೆ ಕಾಣಿಸಿಕೊಳ್ಳಲಿದ್ದಾರೆ. ಇಂತಹ ಸಮಯದಲ್ಲಿ ಅಭಿಮಾನಿಗಳು ಸಂಯಮದಿಂದ ವರ್ತಿಸಬೇಕು ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡುತ್ತಿದ್ದಾರೆ. ಅಭಿಮಾನಿಗಳ ಆರ್ಭಟದ ಕಾರಣಕ್ಕೆ ದರ್ಶನ್ ಸಂಕಷ್ಟ ಎದುರಿಸುವಂತಾಗಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಾರೆ.

ಈ ಹಿಂದೆ ದರ್ಶನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಮಾಡಿದ್ದ ಕೆಲ ಪೋಸ್ಟ್, ಕಾಮೆಂಟ್ಸ್ ಚರ್ಚೆಗೆ ಗ್ರಾಸವಾಗಿತ್ತು. ದರ್ಶನ್ ಆಪ್ತರಾಗಲಿ, ಅಭಿಮಾನಿಗಳಾಗಿ ನೀಡುವ ಹೇಳಿಕೆ, ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಕಾಮೆಂಟ್‌ಗಳು ಸಮಸ್ಯೆ ತಂದೊಡ್ಡುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ದರ್ಶನ್ ಚಿಕಿತ್ಸೆಗಾಗಿ ಜೈಲಿನಿಂದ ಹೊರಗಡೆ ಬರ್ತಿದ್ದಾರೆ. ಇಂತಹ ಸಮಯದಲ್ಲಿ ಯಾರನ್ನೋ ಟಾರ್ಗೆಟ್ ಮಾಡಿ ಕೌಂಟರ್ ಕೊಟ್ಟು ಪೋಸ್ಟ್, ಕಾಮೆಂಟ್ಸ್ ಮಾಡುವುದು ಬೇಡ ಎಂದು ಅಭಿಮಾನಿಗಳು ನಿರ್ಧರಿಸಿದ್ದಾರೆ. ಈ ಬಗ್ಗೆ ತಮಗೆ ತಾವೇ ಶಪಥ ಮಾಡುತ್ತಿದ್ದಾರೆ. ಇತರರಿಗೂ ಸಲಹೆ ನೀಡುತ್ತಿದ್ದಾರೆ.

"ಯಜಮಾನ್ರು ಬರ್ತಿರೋದು ಚಿಕೆತ್ಸೆಗಾಗಿ, ಅದರಿಂದ ದಯವಿಟ್ಟು ಎಲ್ಲರಲ್ಲೂ ಒಂದು ಮನವಿ. ಯಾರೊಬ್ಬರಿಗೂ ಕೌಂಟರ್ ಕೊಡುವ ಪೋಸ್ಟ್‌ಗಳಾಗಲಿ, ಅಥವಾ ಇನ್ನೊಬರ ಬಗ್ಗೆ ತೇಜೋವದೆ ಪೋಸ್ಟ್‌ಗಳನ್ನು ಮಾಡುವುದು ಈ ಸಮಯದಲ್ಲಿ ಸೂಕ್ತವಲ್ಲ, ಸಂಭ್ರಮಿಸೋ ಸಮಯ ಬಂದೆ ಬರುತ್ತೆ ಅಲ್ಲಿವರೆಗೂ ತಾಳ್ಮೆಯಿಂದ ಕಾಯೋಣ" ಎಂದು ದರ್ಶನ್ ಅಭಿಮಾನಿಗಳ ಪೇಜ್‌ಗಳಲ್ಲಿ ಪೋಸ್ಟ್ ವೈರಲ್ ಆಗ್ತಿದೆ.

ಮತ್ತೊಂದು ಕಡೆ ರೇಣುಕಾಸ್ವಾಮಿ ಪ್ರಕರಣದ ಸಾಕ್ಷಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೀತಿದೆ. ಪ್ರತ್ಯಕ್ಷ ಸಾಕ್ಷಿಗಳಾದ ಪುನೀತ್ ಹಾಗೂ ಕಿರಣ್ ಉಲ್ಟಾ ಹೊಡೆದಿದ್ದಾರೆ. ಈ ಹಿಂದೆ ತನಿಖೆ ವೇಳೆ ನೀಡಿದ್ದ ಹೇಳಿಕೆಗೆ ತದ್ವಿರುದ್ಧವಾದ ಹೇಳಿಕೆಯನ್ನು ನ್ಯಾಯಾಲಯದಲ್ಲಿ ಕೊಟ್ಟಿದ್ದಾರೆ. ಇದರಿಂದ ದರ್ಶನ್‌ಗೆ ಕೊಂಚ ರಿಲೀಫ್ ಸಿಕ್ಕಿದೆ ಎನ್ನುವ ಚರ್ಚೆ ನಡೀತಿದೆ. ಒಟ್ಟಾರೆ ಪ್ರಕರಣ ಬೇರೆ ಬೇರೆ ಟ್ವಿಸ್ಟ್ ಪಡೀತಿದೆ.