ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಆರೋಪಿಯಾಗಿ ಜೈಲು ಸೇರಿದ್ದಾರೆ. ಸದ್ಯಕ್ಕೆ ಸಂಕಷ್ಟದಿಂದ ಪಾರಾಗುವ ಸಾಧ್ಯತೆ ಕಷ್ಟ ಎನ್ನುವಂತಾಗಿದೆ. ಆದರೆ ಇವತ್ತಿಗೂ ಅಭಿಮಾನಿಗಳು ಅವರ ಬೆಂಬಲಕ್ಕೆ ನಿಂತಿದ್ದಾರೆ. ಅವರ ಅಭಿಮಾನಿಗಳ ಕ್ರೇಜ್ ಬಗ್ಗೆ ಬಿಡಿಸಿ ಹೇಳುವುದು ಬೇಕಿಲ್ಲ. ಇದೇ ವಿಚಾರದ ಬಗ್ಗೆ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಮಾತನಾಡಿದ್ದಾರೆ.
ದರ್ಶನ್ ಜೈಲು ಸೇರಿದ ಬಗ್ಗೆ ಕೆಲ ಸಂದರ್ಶನಗಳಲ್ಲಿ ಮುಖ್ಯಮಂತ್ರಿ ಚಂದ್ರು ಪ್ರತಿಕ್ರಿಯಿಸಿದ್ದರು. ಸಹವಾಸ ದೋಷದಿಂದ ಈ ರೀತಿ ಆಗಿದೆ. ದರ್ಶನ್ ಕಾಮನ್ ಸೆನ್ಸ್ ಇಲ್ಲದೇ ಇರೋ ದುರಹಂಕಾರಿ, ತಪ್ಪು ಮಾಡಿದ್ದರೆ ದರ್ಶನ್ ಶಿಕ್ಷೆಗೆ ಅರ್ಹರು ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದರು. ಆದರೆ ದರ್ಶನ್ ಫ್ಯಾನ್ಸ್ ಕ್ರೇಜ್ ಬಗ್ಗೆ ಇದೀಗ ಅವರು ಮಾತನಾಡಿದ್ದಾರೆ. 'ಬೆಳಕು' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ. ಹಿರಿಯ ನಟ ಅಶೋಕ್ ಜೊತೆಗೆ ಪ್ರಸ್ತುತ ರಾಜಕೀಯರಂಗದ ವಿದ್ಯಮಾನಗಳ ಬಗ್ಗೆ ಸಾಕಷ್ಟು ವಿಚಾರಗಳನ್ನು ಚರ್ಚಿಸಿದ್ದಾರೆ.
ಇವತ್ತಿನ ಕಾಲದಲ್ಲಿ ಹಣ ಇಲ್ಲದೇ ರಾಜಕೀಯ ಮಾಡೋಕೆ ಸಾಧ್ಯವಿಲ್ಲ. ಒಂದಷ್ಟು ಜನರನ್ನು ಸೇರಿ ಕಾರ್ಯಕ್ರಮ ಮಾಡುವುದಕ್ಕಾದರೂ ಹಣ ಬೇಕು. ಹಣವಿಲ್ಲದೇ ಜನರನ್ನು ಸೇರಿಸುವುದು ಕಷ್ಟ. ಜನರಲ್ಲೇ ಬದಲಾವಣೆ ಆದಾಗ ಮಾತ್ರ ಅದು ಸಾಧ್ಯ. ವಿಶಿಷ್ಟವಾಗಿ ಕ್ರೇಜ್ ಬಂದು ಜನ ಸೇರ್ತಾರಲ್ಲ ಆ ರೀತಿ ಕಲಾವಿದರು ನಾವಲ್ಲ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ "ಈಗ ದರ್ಶನ್ ಎಲ್ಲಾದ್ರು ಇರ್ಲಿ.. ಇವತ್ತು ಹೊರಗೆ ಬಂದ್ರೆ ಜನ ಸೇರ್ತಾರೆ.. ಅಂತಹ ಫ್ಯಾನ್ ಫಾಲೋಯಿಂಗ್ ಇದೆ.. ಅಂತಹ ಫ್ಯಾನ್ಸ್ ಸಿಕ್ಕಿಬಿಟ್ರೆ ಸಂಘಟನೆ ಮಾಡಬಹುದು. ಮುಂದೆ ಅದು ಕೂಡ ದಾರಿ ತಪ್ಪಬಹುದು.. ಅದು ಬೇರೆ ಮಾತು.. ತಮಿಳು ನಟ ವಿಜಯ್ ಅವರನ್ನು ಫ್ಯಾನ್ಸ್ ಗೆಲ್ಲಿಸಿದ್ರಲ್ಲ" ಎಂದಿದ್ದಾರೆ.
'ಕ್ರಾಂತಿ' ಚಿತ್ರದಲ್ಲಿ ದರ್ಶನ್ ಜೊತೆ ಮುಖ್ಯಮಂತ್ರಿ ಚಂದ್ರು ನಟಿಸಿದ್ದರು. ಈ ಹಿಂದೆ ಗ್ಯಾರಂಟಿ ನ್ಯೂಸ್ ಸಂದರ್ಶನದಲ್ಲಿ ಮಾತನಾಡಿ "ದರ್ಶನ್ ಜೀವನದಲ್ಲಿ ನಾನು ಹೆಚ್ಚು ಭಾಗಿ ಆಗಿಲ್ಲ. ಪದೇ ಪದೆ ಭೇಟಿ ಆಗುವುದು, ಫೋನ್ ಮಾಡಿ ಮಾತನಾಡೋದು ಇಲ್ಲ. ಆಗೊಮ್ಮೆ ಈಗೊಮ್ಮೆ ವೇದಿಕೆಯಲ್ಲಿ ಸಿಗ್ತೀವಿ. 'ಕ್ರಾಂತಿ' ಚಿತ್ರದಲ್ಲಿ ನಟಿಸಿದ್ದೆ. ಅವರ ತಂದೆ ತೂಗುದೀಪ ಶ್ರೀನಿವಾಸ್ ಜೊತೆ ಒಳ್ಳೆ ಒಡನಾಟ ಇತ್ತು. ಇಬ್ಬರೂ ಖಳನಾಯಕರಾಗಿ ನಟಿಸಿದವರು. ನಮ್ಮಲ್ಲಿದ್ದ ಮಾನವೀಯ ಗುಣಗಳನ್ನು ನೆನೆಪಿಸಿಕೊಂಡರೆ ಯಾಕೀಗ ಕಳೆದು ಹೋಗುತ್ತೆ ಎನಿಸುತ್ತೆ" ಎಂದು ಹೇಳಿದ್ದರು.