ಶಿವಮೊಗ್ಗ ಮೂಲದ ದರ್ಶನ್ ಅಭಿಮಾನಿ ಸುದೀಪ್ ಎಂಬುವವರು ಕೊನೆಯುಸಿರೆಳೆದಿದ್ದಾರೆ. ಮೂರು ದಿನಗಳ ಹಿಂದೆ (ಸೆಪ್ಟೆಂಬರ್ 21) ಮೂರ್ಛೆ ರೋಗದಿಂದ ಆತ ಮೃತಪಟ್ಟಿರುವುದಾಗಿ ವರದಿಯಾಗಿದೆ. ಚಿಕ್ಕಂದಿನಿಂದ ದರ್ಶನ್ ಅಭಿಮಾನಿಯಾಗಿದ್ದ ಸುದೀಪ್ ತಮ್ಮ ನೆಚ್ಚಿನ ನಟನನ್ನು ಭೇಟಿ ಮಾಡಲು ಹಂಬಲಿಸಿದ್ದರು. ಮೂರು ವರ್ಷಗಳ ಹಿಂದೆ ಆಸೆ ಈಡೇರಿತ್ತು.

2023ರ ಜೂನ್‌ನಲ್ಲಿ ಮೈಸೂರಿನಲ್ಲಿ ದರ್ಶನ್ ಅವರನ್ನು ಅಭಿಮಾನಿ ಸುದೀಪ್ ಭೇಟಿ ಮಾಡಿದ್ದರು. ಆ ವೀಡಿಯೋ ವೈರಲ್ ಆಗಿತ್ತು. ಇದೀಗ ಸುದೀಪ್ ಅಗಲಿಕೆ ಆಪ್ತರಿಗೆ ನೋವು ತಂದಿದೆ. ಪದೇ ಪದೆ ಆತನ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಮಂಗಳೂರಿನ ವೆನ್‌ಲಾಕ್, ಮಣಿಪಾಲ ಹಾಗೂ ಶಿವಮೊಗ್ಗದ ಆಸ್ಪತ್ರೆಗಳಿಗೆ ಕುಟುಂಬಸ್ಥರು ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಿದ್ದರು. ಹೊಸನಗರ ತಾಲ್ಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಿಕೊಪ್ಪ ಗ್ರಾಮದ ಹಿರಿಯಣ್ಣ ಹಾಗೂ ತಾರಾ ದಂಪತಿಯ ಮಗ ಸುದೀಪ್.

ಚಿಕ್ಕಂದಿನಿಂದ ದರ್ಶನ್ ಅಭಿಮಾನಿಯಾಗಿದ್ದ ಸುದೀಪ್ ಮನೆಯವರಿಗೆ ಗೊತ್ತಿಲ್ಲದೇ ಬೆಂಗಳೂರಿಗೆ ಬಂದು ನೆಚ್ಚಿನ ನಟನನ್ನು ನೋಡಲು ಯತ್ನಿಸಿದ್ದರು. ಆದರೆ ದರ್ಶನ್ ಮನೆಯ ಭದ್ರತಾ ಸಿಬ್ಬಂದಿ ಅದಕ್ಕೆ ಅವಕಾಶ ಕೊಡುತ್ತಿರಲಿಲ್ಲ. ಆದರೆ ಮೂರು ವರ್ಷಗಳ ಹಿಂದೆ ಮೈಸೂರಿನಲ್ಲಿ ದರ್ಶನ್ ಭೇಟಿ ಮಾಡಿ ಸುದೀಪ್ ಖುಷಿಯಾಗಿದ್ದರು. 14 ವರ್ಷ ಅದಕ್ಕಾಗಿ ಪರಿತಪಿಸಿದ್ದರು. ಖಿನ್ನತೆಗೂ ಜಾರಿದ್ದರು. ಮೂರು ವರ್ಷಗಳ ಹಿಂದೆ ಮಡಿಕೇರಿ, ನಾಗರಹೊಳೆ, ಮೈಸೂರು ಪ್ರವಾಸ ಕೈಗೊಂಡಿದ್ದ ವೇಳೆ ದರ್ಶನ್ ಅಭಿಮಾನಿ ಆಸೆ ಈಡೇರಿಸಿದ್ದರು.