ಪತಿಯ ಅನುಪಸ್ಥಿತಿಯಲ್ಲಿ ಈ ಬಾರಿ ಕೂಡ ವಿಜಯಲಕ್ಷ್ಮಿ ದರ್ಶನ್ ದಸರಾ ಹಬ್ಬ ಆಚರಿಸುವಂತಾಗಿದೆ. ಹಬ್ಬದ ಸಮಯದಲ್ಲಿ ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ವೈರಲ್ ಆಗ್ತಿದೆ. ಜವಾಬ್ದಾರಿಯ ಬಗ್ಗೆ ಮಾತನಾಡಿ ದರ್ಶನ್‌ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವವರಿಗೆ ವಿಜಯಲಕ್ಷ್ಮಿ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಚಾಮರಾಜನಗರದಲ್ಲಿ ನಡೆದ ದಸರಾ ಮಹೋತ್ಸವದ ವೇದಿಕೆಯಲ್ಲಿ ದರ್ಶನ್ ಬಗ್ಗೆ ಧನ್ವೀರ್ ಗೌಡ ಆಡಿದ್ದ ಮಾತುಗಳು ವೈರಲ್ ಆಗಿತ್ತು. ಧನ್ವೀರ್ ವೇದಿಕೆ ಏರುತ್ತಿದ್ದರಂತೆ ಕೆಲವರು "ಡಿ ಬಾಸ್.. ಡಿ ಬಾಸ್" ಎಂದು ಕೂಗಲು ಆರಂಭಿಸಿದರು. ಕೂಡಲೇ ಪ್ರತಿಕ್ರಿಯಿಸಿದ್ದ ಧನ್ವೀರ್ "ಯಾವ ನಾಯಿ-ನರಿಗಳು ಎಷ್ಟೇ ಕುತಂತ್ರ ಮಾಡಿದ್ರೂ ಅವರನ್ನು (ದರ್ಶನ್) ಏನೂ ಮಾಡೋಕೆ ಆಗಲ್ಲ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಅವರ ಮೇಲಿದೆ. ದರ್ಶನ್ ಅವ್ರು ಜೈಲಿನಿಂದ ಹೊರಗಡೆ ಬಂದೇ ಬರ್ತಾರೆ" ಎಂದು ಖಡಕ್ ಆಗಿ ಹೇಳಿದ್ದರು. ಅದರ ಬೆನ್ನಲ್ಲೇ ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಗಮನ ಸೆಳೆಯುತ್ತಿದೆ.

ಪತಿ ದರ್ಶನ್ ಜೊತೆಗಿನ ಫೋಟೊ ಹಂಚಿಕೊಂಡಿರು ವಿಜಯಲಕ್ಷ್ಮಿ "ನಿಮ್ಮ ಡಿ ಬಾಸ್ ಹೆಸರು ಮೆಚ್ಚುಗೆಗಿರಲಿ, ಟೀಕೆಗಿರಲಿ, ಸ್ವಹಿತ ಸಾಧನೆಯ ಸಾಧನವಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಅಭಿಪ್ರಾಯದಲ್ಲಿ ಪ್ರಾಮಾಣಿಕತೆ ಇರಲಿ, ಮಾತಿನಲ್ಲಿ ಗೌರವವಿರಲಿ. ಎಲ್ಲರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು" ಎಂದು ಬರೆದುಕೊಂಡಿದ್ದಾರೆ.

ಬಹಳ ಹಿಂದಿನಿಂದ ದರ್ಶನ್ ಆಪ್ತಬಳಗದಲ್ಲಿ ಧನ್ವೀರ್ ಗುರ್ತಿಸಿಕೊಂಡಿದ್ದಾರೆ. ತಮ್ಮನಂತೆ ವಿಜಯಲಕ್ಷ್ಮಿ ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಕೆಲ ದಿನಗಳ ಹಿಂದೆ ದರ್ಶನ್ ಹಾಗೂ ಧನ್ವೀರ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ವದಂತಿ ಹರಡಿತ್ತು. ಆದರೆ ಇದಕ್ಕೆಲ್ಲಾ ಧನ್ವೀರ್ ಸ್ಪಷ್ಟನೆ ನೀಡಿದ್ದರು. ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ದರ್ಶನ್ ಭೇಟಿ ಮಾಡಿ ಬಂದಿದ್ದರು. "ನಮ್ಮ ಮಧ್ಯೆ ಯಾವುದೇ ಮನಸ್ತಾಪ ಇಲ್ಲ. ಯಾರು ಹೇಳಿದ್ದು? ಮನಸ್ತಾಪ ಇದ್ದಿದ್ದರೆ ಅವ್ರನ್ನು ಭೇಟಿ ಮಾಡೋಕೆ ನಾನು ಜೈಲಿಗೆ ಬರುತ್ತಿದ್ನಾ?" ಎಂದು ಮರುಪ್ರಶ್ನೆ ಹಾಕಿದ್ದರು.

ಇನ್ನು ತಂದೆ ಅನುಪಸ್ಥಿತಿಯಲ್ಲಿ ಮಗ ವಿನೀಶ್ ದರ್ಶನ್ ಮನೆಯಲ್ಲಿ ಆಯುಧಪೂಜೆ ನೆರವೇರಿಸಿದ್ದಾನೆ. ಕಾರುಗಳು, ಬೈಕ್‌ಗಳು ಎಲ್ಲವನ್ನು ಮನೆಮುಂದೆ ನಿಲ್ಲಿಸಿ ಪೂಜೆ ಮಾಡಿರುವುದನ್ನು ನೋಡಬಹುದು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ವೈರಲ್ ಆಗ್ತಿದೆ.