ರಾಜ್ಯದ ಕೆಲ ಭಾಗಗಳಲ್ಲಿ ಸಭೆ, ಸಮಾರಂಭದ ನಡುವೆ ಡಿಬಾಸ್ ಡಿಬಾಸ್ ಎನ್ನುವ ಕೂಗು ಕೇಳಿಬರುತ್ತೆ. ದರ್ಶನ್ ಅಭಿಮಾನಿಗಳು ಹೀಗೆ ಕೂಗ್ತಾರೆ, ದುಡ್ಡು ಕೊಟ್ಟು ಹೀಗೆ ಜೈಕಾರ ಹಾಕಿಸಿಕೊಳ್ತಾರೆ ಎನ್ನುವ ಆರೋಪವನ್ನು ಕೆಲವರು ಮಾಡಿದ್ದಾರೆ. ಬಸರಾಳು ಕನ್ನಡ ಉತ್ಸವದಲ್ಲಿ ಇದೇ ರೀತಿಯ ಸನ್ನಿವೇಶ ನಿರ್ಮಾಣವಾಗಿತ್ತು. ಕೂಡಲೇ ಮಂಡ್ಯ ಶಾಸಕ ರವಿ ಗಾಣಿಗ ಸಿಡಿಮಿಡಿಗೊಂಡ ಘಟನೆ ನಡೆದಿದೆ.

ನಿನ್ನೆ(ನವೆಂಬರ್ 1, 2026 )ಮಂಡ್ಯ ಜಿಲ್ಲೆಯ ಬಸರಾಳು ಗ್ರಾಮದಲ್ಲಿ ಬಸರಾಳು ಕನ್ನಡ ಉತ್ಸವ 2026 ಅದ್ದೂರಿಯಾಗಿ ಜರುಗಿತು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಗಿಸಿದ್ದರು. ಶಾಸಕ ರವಿ ಗಾಣಿಗ ಸೇರಿ ಹಲವು ಕನ್ನಡ ಉತ್ಸವಕ್ಕೆ ಸಾಕ್ಷಿಯಾಗಿದ್ದರು. ಅನುಶ್ರೀ ನಿರೂಪಣೆಯಲ್ಲಿ ಬೃಹತ್ ಸಾಂಸ್ಕೃತಿಕ ಉತ್ಸವ ಕೂಡ ಇತ್ತು. ವೇದಿಕೆಯಲ್ಲಿ ಶಾಸಕರಾದ ರವಿ ಗಾಣಿಗ ಅವರು ಮಾತನಾಡುವಾಗ ಕೆಲವರು ಡಿ ಬಾಸ್.. ಡಿ ಬಾಸ್ ಎಂದು ಕೂಗಿ ಭಾಷಣಕ್ಕೆ ಅಡ್ಡಿಪಡಿಸಿದ್ದರು. ಹಾಗಾಗಿ ಶಾಸಕರು ಕೆಂಡಾಮಂಡಲವಾದರು.

ಏಯ್ ಯಾರೋ ಡಿಬಾಸ್, ಮುಚ್ಚೋ ಬಾಯಿ.. ನೀವೆಲ್ಲಾ ಹಿಂಗೆ ಕಿರುಚಿದ್ದಕ್ಕೆ ಜೈಲಿಗೆ ಹೋಗಿರೋದು.. ಮುಚ್ಚೋ ಬಾಯಿ, ಹೇಳ್ದಷ್ಟು ಕೇಳೋ, ಡಿಬಾಸ್ ಅಂತೆ, ಡಿಬಾಸ್.. ಸುಮ್ನೆ ಕೂತ್ಕೊಳ್ಳೋ ಎಂದು ಮಾತು ಮುಂದುವರೆಸಿದರು. ಈ ವೇಳೆ ವೇದಿಕೆಯಲ್ಲಿ ಧ್ರುವ ಸರ್ಜಾ ಕೂಡ ಶಾಸಕರ ಪಕ್ಕ ಇದ್ದರು.

ದರ್ಶನ್ ಅಭಿಮಾನಿಗಳ ಹೆಸರಿನಲ್ಲಿ ಹೀಗೆ ಸಭೆ ಸಮಾರಂಭಗಳಲ್ಲಿ ಕಿರುಚಾಡುವುದು ಇದೇ ಮೊದಲಲ್ಲ. ಸಾಕಷ್ಟು ಕಡೆಗಳಲ್ಲಿ ಈ ರೀತಿ ಆಗ್ತಿದೆ. ರಾಮನಗರದಲ್ಲಿ ನಡೆದ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವದ ವೇದಿಕೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಭಾಷಣ ಮಾಡುವಾಗ ಕೂಡ ಇದೇ ರೀತಿ ನಡೆದಿತ್ತು. "ನಮಸ್ಕಾರ, ಆಯ್ತು ನಿಮ್ಮ ಭಾವನೆ ಅರ್ಥವಾಗಿದೆ, ಡಿ ಬಾಸ್ ಬಗ್ಗೆ ಮಾತನಾಡುತ್ತಿದ್ದೀರಿ, ಇಂತಹ ವಿಷಯ ಸಾರ್ವಜನಿಕವಾಗಿ ಮಾತನಾಡುವುದಕ್ಕೆ ಆಗುವುದಿಲ್ಲ. ತಾಳ್ಮೆಯಿಂದ ಇರಿ" ಎಂದು ಸಿಎಂ ಹೇಳಿದ್ದರು.

ನಟ ದರ್ಶನ್ ಅವರನ್ನು ಅಭಿಮಾನಿಗಳು ಡಿಬಾಸ್ ಎಂದೇ ಕರೆಯುತ್ತಾರೆ. ದರ್ಶನ್ ಹೋದಲ್ಲಿ ಬಂದಲ್ಲಿ ಹೀಗೆ ಜೈಕಾರ ಹಾಕುತ್ತಿದ್ದರು. ಈಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಅವರು ಜೈಲಿನಲ್ಲಿದ್ದಾರೆ. ಇತ್ತ ಅಭಿಮಾನಿಗಳು ಮಾತ್ರ ಡಿಬಾಸ್ ಡಿಬಾಸ್ ಎಂದು ಕೂಗುವುದು ನಿಲ್ಲಿಸಿಲ್ಲ.