'ಯುವ' ಹಾಗೂ 'ಎಕ್ಕ' ಸಿನಿಮಾಗಳ ಬಳಿಕ ಯುವ ರಾಜ್‌ಕುಮಾರ್ ನಟನೆಯ ಮುಂದಿನ ಸಿನಿಮಾ ಯಾವ್ದು ಎನ್ನುವುದು ಖಚಿತವಾಗಿದೆ. ತರುಣ್ ಸುಧೀರ್ ನಿರ್ಮಾಣದಲ್ಲಿ ಜಡೇಶ್ ಹಂಪಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಗಣೇಶ ಹಬ್ಬದ ಸಂಭ್ರಮದಲ್ಲಿ ಚಿತ್ರದ ಟೈಟಲ್ ಅನಾವರಣವಾಗಿದೆ. 'ಪವರ್‌ಮ್ಯಾನ್' ಆಗಿ ಯುವ ಖದರ್ ತೋರ್ಸೋಕೆ ಬರ್ತಿದ್ದಾರೆ.

ಹೌದು ಯುವ ರಾಜ್‌ಕುಮಾರ್ ನಟನೆಯ ಮುಂದಿನ ಚಿತ್ರಕ್ಕೆ 'ಪವರ್‌ಮ್ಯಾನ್' ಎಂಬ ಟೈಟಲ್ ಫೈನಲ್ ಆಗಿದೆ. ಪುನೀತ್ ರಾಜ್‌ಕುಮಾರ್ ಅವರನ್ನು ಪವರ್‌ ಸ್ಟಾರ್ ಎಂದು ಅಭಿಮಾನಿಗಳು ಕರೆಯುತ್ತಿದ್ದರು. 'ಪವರ್' ಸ್ಟಾರ್ ಎಂಬ ಸಿನಿಮಾದಲ್ಲೂ ಅವ್ರು ನಟಿಸಿದ್ದರು. ಈಗ ಹೆಚ್ಚು ಕಮ್ಮಿ ಅದೇ ರೀತಿಯ ಟೈಟಲ್‌ ಇರುವ ಸಿನಿಮಾದಲ್ಲಿ ಅವ್ರ ಅಣ್ಣನ ಮಗ ಹೀರೊ ಆಗಿ ನಟಿಸುತ್ತಿರುವುದು ವಿಶೇಷ. ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ಥೀಮ್ ಪೋಸ್ಟರ್ ನೋಡ್ತಿದ್ರೆ ಇದೊಂದು ಅಡ್ವೆಂಚರಸ್ ಸಿನಿಮಾ ಎನ್ನುವುದು ಅರ್ಥವಾಗ್ತಿದೆ.

'ಪವರ್‌ಮ್ಯಾನ್' ಚಿತ್ರವನ್ನು ತರುಣ್ ಸುಧೀರ್ ಜೊತೆ ಸೇರಿ ಜಗದೀಶ್ ಗೌಡ ನಿರ್ಮಾಣ ಮಾಡ್ತಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕೆ ಇರಲಿದೆ. "The Greatest Power is A Good Heart" ಎಂಬ ಟ್ಯಾಗ್‌ಲೈನ್ ಕೂಡ 'ಪವರ್‌ಮ್ಯಾನ್' ಟೈಟಲ್ ಜೊತೆಗಿದೆ. "ಕೆಲವು ಕಥೆಗಳು ಕನಸುಗಳಿಂದ ಹುಟ್ಟುತ್ತವೆ. ಇನ್ನು ಕೆಲವು ನಂಬಿಕೆಯಿಂದ ಮೂಡಿಬರುತ್ತವೆ. ಮತ್ತೆ ಕೆಲವು, ಎಂದಿಗೂ ಮರೆಯಲಾಗದಂತಹ ವಿಷಯವಾಗಿ ಪರಿವರ್ತನೆಗೊಳ್ಳುವ ಶಕ್ತಿಯೊಂದಿಗೆ ಬರುತ್ತವೆ. ಇಂದು, ನಾವು ನಿಮಗೆ 'ಪವರ್‌ಮ್ಯಾನ್' ಅನ್ನು ಪರಿಚಯಿಸುತ್ತಿದ್ದೇವೆ.. ಒಂದು ಹೊಸ ಪಯಣದ ಆರಂಭ.." ಎಂದು ಚಿತ್ರತಂಡ ಹೇಳಿದೆ.

ಪೋಸ್ಟರ್ ನೋಡಿದ್ರೆ ಇದೊಂದು ಸೂಪರ್ ಹೀರೋ, ಸೂಪರ್ ಪವರ್ ಇರುವ ಅಡ್ವೆಂಚರ್ಸ್ ಸಿನಿಮಾ ರೀತಿ ಕಾಣಿಸ್ತಿದೆ. ಆರು ಮಂದಿ ಮಕ್ಕಳ ಜೊತೆ ಯುವ ರಾಜ್‌ಕುಮಾರ್ ಸಾಗರದ ಕಡೆ ಮುಖ ಮಾಡಿ ನಿಂತಂತೆ ಪೋಸ್ಟರ್ ಡಿಸೈನ್ ಮಾಡಲಾಗಿದೆ. ಥೀಮ್ ಪೋಸ್ಟರ್ ಮೂಲಕ ಸಿನಿಮಾ ಬಗ್ಗೆ ಕುತೂಹಲ ಮೂಡಿ ಮಾಡಿದೆ ಚಿತ್ರತಂಡ. ಯುವ ರಾಜ್‌ಕುಮಾರ್ ಮನೆಯಲ್ಲೇ 'ಪವರ್‌ಮ್ಯಾನ್' ಥೀಮ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೀತು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ಆಗಮಿಸಿ ತಂಡಕ್ಕೆ ಶುಭ ಕೋರಿದ್ದಾರೆ.

'ಎಕ್ಕ' ಬಳಿಕ ದುನಿಯಾ ಸೂರಿ ನಿರ್ದೇಶನದ ಚಿತ್ರದಲ್ಲಿ ಯುವ ನಟಿಸಬೇಕಿತ್ತು. ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಗಿದೆ. ಅತ್ತ ಸೂರಿ 'ಕಾಗೆ ಬಂಗಾರ' ಸಿನಿಮಾ ಆರಂಭಿಸಿದ್ದಾರೆ. ಇತ್ತ ತರುಣ್ ಹಾಗೂ ಜಡೇಶ್ ಜೊತೆ ಯುವ ಕೈ ಜೋಡಿಸಿದ್ದಾರೆ. 'ಜಂಟಲ್‌ಮ್ಯಾನ್' ಹಾಗೂ 'ಲ್ಯಾಂಡ್‌ಲಾರ್ಡ್' ಚಿತ್ರಗಳ ಬಳಿಕ ಜಡೇಶ್ ಈ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ. 'ಕಾಟೇರ' ಚಿತ್ರಕ್ಕೂ ಕಥೆ ಒದಗಿಸಿದ್ದರು. ಆ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದರು. ಇದೀಗ ತರುಣ್ ನಿರ್ಮಾಣದ ಚಿತ್ರವನ್ನು ಜಡೇಶ್ ಕಟ್ಟಿಕೊಡಲು ಮುಂದಾಗಿದ್ದಾರೆ.