ಪುನೀತ್ ರಾಜ್‌ಕುಮಾರ್ ನಟನೆಯ 'ಜಾಕಿ' ಸಿನಿಮಾ ಟೈಟಲ್ ಸಾಂಗ್ ಯಾರಿಗ್ ಗೊತ್ತಿಲ್ಲ ಹೇಳಿ. ವಿ. ಹರಿಕೃಷ್ಣ ಟ್ಯೂನು, ಯೋಗರಾಜ್ ಭಟ್ರ ಸಾಹಿತ್ಯ ಹಾಗೂ ನವೀನ್ ಮಾಧವ್ ವಾಯ್ಸ್‌ನಲ್ಲಿ ಈ ಸಾಂಗ್ ಮ್ಯಾಜಿಕ್ ಬಿಡಿಸಿ ಹೇಳೋದು ಬೇಕಿಲ್ಲ. ಇವತ್ತಿಗೂ ಪಡ್ಡೆ ಹುಡುಗರು ಜಾಕಿ ಜಾಕಿ ಅಂತ ಹಾಡಿ ಕುಣಿಯುತ್ತಲೇ ಇರ್ತಾರೆ. ಪುಟಾಣಿ ಮಕ್ಕಳಿಗೂ ಸಾಂಗ್ ಹಾಟ್ ಫೇವರಿಟ್.

ಚಿತ್ರದ ಎಲ್ಲಾ ಹಾಡುಗಳು ಒಂದು ತೂಕವಾದ್ರೆ ಟಪ್ಪಾಂಗುಚ್ಚಿ ಡ್ಯಾನ್ಸ್ ನಂಬರ್ 'ಜಾಕಿ ಜಾಕಿ' ಖದರ್‌ರೇ ಬೇರೆ.. ಬಹಳ ಕಲೋಕಿಯಲ್ ಆಗಿ ಭಟ್ರು ಹಾಡಿಗೆ ಸಾಹಿತ್ಯ ಪೋಣಿಸಿದ್ರು. ಅದ್ರಲ್ಲೂ ಜಾನಕಿರಾಮ 'ಚಡ್ಡಿ ತೂತು' ಜಾಕಿ ಜಾಕಿ ಅಂತ ಕೇಳಿಸೋ ಸಾಲು ಕೊಂಚ ವಿಚಿತ್ರ ಅನ್ನಿಸಿದ್ದು ಇದೆ. ಆದ್ರೆ ಬೇಕೆಂದೆ ಆ ರೀತಿ ಸಾಹಿತ್ಯ ಬರೆದಿದ್ದಾರೆ ಅಂತ ಎಲ್ಲರೂ ಅಂದುಕೊಂಡಿದ್ದರು. ಇವತ್ತಿಗೂ ಅದು ಜಾನಕಿರಾಮ 'ಚಡ್ಡಿ ತೂತು' ಅಂತ್ಲೇ ಸಾಕಷ್ಟು ಜನ ಅಪಾರ್ಥ ಮಾಡಿಕೊಂಡಿದ್ದಾರೆ. 16 ವರ್ಷಗಳ ಬಳಿಕ ಈ ಗೊಂದಲಕ್ಕೆ ಸ್ವತಃ ಭಟ್ರು ತೆರೆ ಎಳೆದಿದ್ದಾರೆ.

ಜಾನಕಿರಾಮ 'ಚಡ್ಡಿ ತೂತು' ಅಂತ ಕೆಲವರಿಗೆ ಅದು ಕೇಳಿಸಬಹುದು. ಆದರೆ ಅದು "ಜಾನಕಿರಾಮ ಝಡ್ಡಿ ಕುಣುಕು" ಎಂದು ಯೋಗರಾಜ್ ಭಟ್ ಸ್ಪಷ್ಟಪಡಿಸಿದ್ದಾರೆ. Keerthi ENT Clinic ಯೂಟ್ಯೂಬ್ ವಾಹಿನಿ ಸಂದರ್ಶನದ ನಡುವೆ ಈ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ಕಿರುತೆರೆ ನಟಿಯರಾದ ಅನುಪಮಾ ಗೌಡ, ನೇಹಾ ಮತ್ತು ಇಷಿತಾ ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ನಡುವೆ ನೇಹಾ 'ಜಾಕಿ ಜಾಕಿ ಜಾಕಿ ಜಾನಕಿರಾಮ ಚಡ್ಡಿ ತೂತು' ಎಂದು ಹಾಡಿದ್ದಾರೆ. ಹಾಡಿನ ಸಾಹಿತ್ಯ ಸರೀನಾ ಎಂದು ಕೀರ್ತಿ ಸ್ವತಃ ಯೋಗರಾಜ್ ಭಟ್ಟರಿಗೆ ಮೆಸೇಜ್ ಮಾಡಿ ಕೇಳಿದ್ದಾರೆ. ಆಗ ಭಟ್ರು ಅಸಲಿ ಸಂಗತಿ ಬಿಚ್ಚಿಟ್ಟಿದ್ದಾರೆ.

ಅದು ಝಡ್ಡಿ ಕುಣುಕು ನಕ್ಕು, ಝಡ್ಡಿ ಕುಣುಕು ನಕ್ಕು ಝಡ್ಡ್‌ ಝಡ್ಡ್‌ ಝಡ್ಡ್‌ ಅಂತ ಟಮಟೆ ಸೌಂಡ್‌ಗೆ ಹೇಳುವಂಥದ್ದು ಎಂದು ಯೋಗರಾಜ್ ಭಟ್ ವಿವರಿಸಿದ್ದಾರೆ. ಇದನ್ನು ಕೇಳಿ ನೇಹಾ ಒಂದು ಕ್ಷಣ ಅವಕ್ಕಾಗಿದ್ದಾರೆ. ದುನಿಯಾ ಸೂರಿ ನಿರ್ದೇಶನದ 'ಜಾಕಿ' ಸಿನಿಮಾ 16 ವರ್ಷ ಪೂರೈಸಿದೆ. ಪುನೀತ್ ರಾಜ್‌ಕುಮಾರ್ ಜೊತೆ ಭಾವನಾ ನಾಯಕಿಯಾಗಿ ನಟಿಸಿ ಗೆದ್ದಿದ್ದರು. ಪೂರ್ಣಿಮಾ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಚಿತ್ರ ನಿರ್ಮಾಣ ಮಾಡಿದ್ದರು. ಎರಡು ವರ್ಷಗಳ ಹಿಂದೆ ಹೊಸ ರೂಪದಲ್ಲಿ ಈ ಸಿನಿಮಾ ರೀ-ರಿಲೀಸ್ ಆಗಿ ಸದ್ದು ಮಾಡಿದ್ದು ಗೊತ್ತೇಯಿದೆ.