ರಾಕಿಂಗ್ ಸ್ಟಾರ್ ಯಶ್ ಲೆಕ್ಕಾಚಾರ ತಲೆ ಕೆಳಗಾಗಿದೆ. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ 'ಟಾಕ್ಸಿಕ್' ಸಿನಿಮಾ ನಿರಾಸೆ ಅನುಭವಿಸಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಕರ್ನಾಟಕ ಹಾಗೂ ಉತ್ತರ ಭಾರತ ಬಿಟ್ಟು ಬಹುತೇಕ ಕಡೆಗಳಲ್ಲಿ ಸಿನಿಮಾ ನಷ್ಟ ಅನುಭವಿಸುವಂತಾಗಿದೆ. ಇದೆಲ್ಲದರ ನಡುವೆ ಚಿತ್ರದ ಓಟಿಟಿ ರೈಟ್ಸ್ ಕೇಳುವವರೇ ಇಲ್ಲ ಎನ್ನುವಂತಾಗಿದೆ.
ಸಿನಿಮಾ ಬಿಡುಗಡೆಗೂ ಮುನ್ನ 200 ಕೋಟಿ ರೂ.ಗೆ ಓಟಿಟಿ ರೈಟ್ಸ್ ಕೇಳ್ತಿದ್ದಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಆದರೆ ಈಗ ಕೇವಲ 30 ಕೋಟಿ ಕೊಡ್ತೀವಿ ಅಂತಿದ್ದಾರೆ ಎಂದು ಗುಲ್ಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಕೆಲವರು ಟಾರ್ಗೆಟ್ ಮಾಡಿ ಕೆಟ್ಟದಾಗಿ ಟ್ರೋಲ್ ಮಾಡಿದ್ದರು. ಇನ್ನು ಲಕ್ಷಾಂತರ ಪೈರಸಿ ಲಿಂಕ್‌ಗಳನ್ನು ಚಿತ್ರತಂಡ ಡಿಲೀಟ್ ಮಾಡಿಸಿತ್ತು. ಫೇಸ್‌ಬುಕ್ ಖಾತೆಗಳಲ್ಲಿ ಹಿಂದಿ ವರ್ಷನ್ ಸಿನಿಮಾ ಲೀಕ್ ಮಾಡಿಬಿಟ್ಟಿದ್ದರು. ಅದೆಲ್ಲದರ ಪರಿಣಾಮ ಚಿತ್ರದ ಓಟಿಟಿ ರೈಟ್ಸ್ ಮೇಲೆ ಬಿದ್ದಿರುವುದು ಸುಳ್ಳಲ್ಲ.
ನೆಗೆಟಿವ್ ರಿವ್ಯೂ ನೋಡಿ ಕೆಲವರು ಚಿತ್ರಮಂದಿರದಲ್ಲಿ 'ಟಾಕ್ಸಿಕ್' ಸಿನಿಮಾ ನೋಡಲು ಹಿಂದೇಟು ಹಾಕಿದ್ದರು. ಅವರೆಲ್ಲಾ ಓಟಿಟಿ ಸ್ಟ್ರೀಮಿಂಗ್ ಯಾವಾಗ ಎಂದು ಕಾಯುತ್ತಿದ್ದಾರೆ. ಇಂಗ್ಲೀಷ್ ಭಾಷೆಯಲ್ಲಿ ಕೂಡ ಸಿನಿಮಾ ನಿರ್ಮಾಣವಾಗಿತ್ತು. ಹಾಗಾಗಿ ಇಂಗ್ಲೀಷ್ ವರ್ಷನ್ ಸೇರಿ ದೊಡ್ಡ ಮೊತ್ತಕ್ಕೆ ಓಟಿಟಿ ರೈಟ್ಸ್ ಡೀಲ್ ನಡೆಯುವ ಸಾಧ್ಯತೆಯಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಬಿಡುಗಡೆ ಆಗಬೇಕು ಎನ್ನುವುದು ಅಭಿಮಾನಿಗಳ ಆಸೆಯಾಗಿದೆ.
ಜೀ ಸಂಸ್ಥೆ ಚಿತ್ರದ ಆಡಿಯೋ ರೈಟ್ಸ್ ಕೊಂಡುಕೊಂಡಿತ್ತು. ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಸೇರಿ ದೊಡ್ಡಮಟ್ಟದಲ್ಲೇ ವ್ಯವಹಾರ ಕುದುರಿಸಬಹುದು ಎನ್ನಲಾಗ್ತಿದೆ. ಅಧಿಕೃತವಾಗಿ ಯಾವುದೇ ಮಾಹಿತಿ ಇಲ್ಲ. ಏಕಾಏಕಿ 30 ಕೋಟಿಗೆ ಓಟಿಟಿ ರೈಟ್ಸ್ ಕೇಳ್ತಿದ್ದಾರೆ ಅನ್ನೋದೆಲ್ಲಾ ಸುಳ್ಳು. ಸುಖಾಸುಮ್ಮನೆ ಸೋಶಿಯಲ್ ಮೀಡಿಯಾದಲ್ಲಿ ವದಂತಿ ಹಬ್ಬಿಸುತ್ತಿದ್ದಾರೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಚಿತ್ರತಂಡ ಥ್ರಿಯೇಟ್ರಿಕಲ್ ರಿಸಲ್ಟ್ ನೋಡಿಕೊಂಡು ಓಟಿಟಿ ಡೀಲ್ ಕುದುರಿಸಲು ತೀರ್ಮಾನಿಸಿತ್ತು. ಆದರೆ ಈಗ ಎಲ್ಲಾ ಉಲ್ಟಾ ಪಲ್ಟಾ ಆಗಿದೆ. ಇನ್ನು 15 ದಿನಗಳಲ್ಲಿ ಸಿನಿಮಾ ಓಟಿಟಿಗೆ ಬರುವ ನಿರೀಕ್ಷೆಯಿದೆ.
ಮಿಶ್ರ ಪ್ರತಿಕ್ರಿಯೆ ನಡುವೆಯೂ 'ಟಾಕ್ಸಿಕ್' ಸಿನಿಮಾ ವಿಶ್ವದಾದ್ಯಂತ 330 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಯಶ್ ನಟನೆ ಹಾಗೂ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.