ಯಶ್ ನಿರ್ಮಿಸಿ ನಟಿಸಿದ 'ಟಾಕ್ಸಿಕ್' ಸಿನಿಮಾ ದೊಡ್ಡದಾಗಿ ಸದ್ದು ಮಾಡಿದ್ದು ಗೊತ್ತೇಯಿದೆ. ಆದರೆ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಮುಗ್ಗರಿಸಿತ್ತು. ಚಿತ್ರದಲ್ಲಿ ಯಶ್ ಹಾಗೂ ಕಿಯಾರಾ ಅದ್ವಾನಿ ಸಖತ್ ಬಿಂದಾಸ್ ಆಗಿ ಕಾಣಿಸಿಕೊಂಡಿದ್ದರು. ಇಬ್ಬರ ಹಸಿಬಿಸಿ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಮದುವೆ ಬಳಿಕ ಕಿಯಾರಾ ಇಷ್ಟು ಬೋಲ್ಡ್ ಆಗಿ ನಟಿಸುತ್ತಿದ್ದಾರೆ. ಪತ ಸಿದ್ದಾರ್ಥ್ ಇದಕ್ಕೆ ಏನೂ ಹೇಳಲ್ವಾ ಎನ್ನುವ ಚರ್ಚೆ ಕೂಡ ಮುನ್ನಲೆಗೆ ಬಂದಿತ್ತು. ಇದೇ ವಿಚಾರದ ಬಗ್ಗೆ ಕಾಫಿ ವಿತ್ ಕರಣ್ ಶೋನಲ್ಲಿ ಜೋಡಿಗೆ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಕಿಯಾರಾ ಪ್ರತಿಕ್ರಿಯಿಸಿದ್ದಾರೆ. ಮೊದಲಿಗೆ ಸಿನಿಮಾ ಫಲಿತಾಂಶದ ಬಗ್ಗೆ ಕಿಯಾರಾ ಮಾತನಾಡಿದ್ದಾರೆ. "ಮೊದಲ ದಿನವೇ ಚಿತ್ರದ ಫಲಿತಾಂಶ ತುಂಬಾ ನೋವುಂಟುಮಾಡಿತು. ಏಕೆಂದರೆ ಇಡೀ ತಂಡದಲ್ಲಿ ಯಾರೊಬ್ಬರೂ ಇದನ್ನು ನಿರೀಕ್ಷಿಸಿರಲಿಲ್ಲ. ಉತ್ತಮ ಆರಂಭ ಸಿಕ್ಕಿದ್ದರೂ, ಚಿತ್ರವು ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಫಸ್ಟ್ ವೀಕೆಂಡ್ ನನಗೆ ತುಂಬಾ ನೋವಿನಿಂದ ಕೂಡಿತ್ತು. ಈ ವಿಷಯದಿಂದಾಗಿ ನಾನು ತುಂಬಾ ಕುಗ್ಗಿಹೋಗಿದ್ದೆ" ಎಂದಿದ್ದಾರೆ.

'ಟಾಕ್ಸಿಕ್' ಚಿತ್ರವನ್ನು ಕೆಲವರು ಕೊಂಡಾಡಿದರು. ಈ ಬಗ್ಗೆ ಕೂಡ ಪ್ರತಿಕ್ರಿಯಿಸಿ "ಆರಂಭದಲ್ಲಿ ಬೇಸರವಾದರೂ ನಂತರ ಸಾಕಷ್ಟು ಮೆಚ್ಚುಗೆ ವ್ಯಕ್ತವಾಯಿತು. ನನ್ನ ಕಂಫರ್ಟ್ ಝೋನ್‌ನಿಂದ ಹೊರಬಂದು ಆ ಪಾತ್ರವನ್ನು ನಿರ್ವಹಿಸಿದ್ದೆ. ನನ್ನ ವೃತ್ತಿಪರ ಪಯಣದಲ್ಲಿ ಇದೊಂದು ನಿರ್ಣಾಯಕ ಘಟ್ಟವಾಗಲಿದೆ ಎಂದು ನಾನು ಭಾವಿಸುತ್ತೇನೆ" ಎಂದು ಕಿಯಾರಾ ತಿಳಿಸಿದ್ದಾರೆ.

ನೆಗೆಟಿವ್ ಕಾಮೆಂಟ್ಸ್ ಬಗ್ಗೆ ಕೂಡ ಕಿಯಾರ, ಸಿದ್ದಾರ್ಥ್ ಮಾತನಾಡಿದ್ದಾರೆ. ನಾವಿಬ್ಬರು ಈ ಬಗ್ಗೆ ಚರ್ಚಿಸಲೇ ಇಲ್ಲ ಎಂದಿದ್ದಾರೆ. "ಸಿದ್ದಾರ್ಥ್‌ಗೆ ಈ ಬಗ್ಗೆ ಯಾವುದೇ ತಲೆಬಿಸಿ ಇರಲಿಲ್ಲ. ಅವರು ಎಂದಿಗೂ ಈ ವಿಷಯದ ಬಗ್ಗೆ ಕೇಳಲಿಲ್ಲ. ನಾವು ಈ ಬಗ್ಗೆ ಎಂದಿಗೂ ಮಾತನಾಡಿಕೊಂಡಿಲ್ಲ. ಇದು ಅವರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ, ಅವರಿಗೆ ಇದರಿಂದ ಯಾವುದೇ ಸಮಸ್ಯೆ ಇರಲಿಲ್ಲ" ಎಂದು ಕಿಯಾರಾ ಹೇಳಿದ್ದಾರೆ. "ಹೌದು, ನಾನು ಆ ಬಗ್ಗೆ ಹೆಚ್ಚು ಯೋಚಿಸಲೇ ಇಲ್ಲ" ಎಂದು ಸಿದ್ದಾರ್ಥ್ ದನಿಗೂಡಿಸಿದ್ದಾರೆ.

ಟ್ರೋಲ್ಸ್ ಬಗ್ಗೆ ಮಾತನಾಡಿ ಕಿಯಾರಾ "ಇದು ದಶಕಗಳಿಂದ ನಡೆಯುತ್ತಿದೆ. ಐಶ್ವರ್ಯಾರಿಂದ ಹಿಡಿದು ಇನ್ನೂ ಅನೇಕ ಅದ್ಭುತ ನಟಿಯರ ವಿಷಯದಲ್ಲಿ ಹೀಗೆಯೇ ಆಗಿದೆ, ಸಾಮಾಜಿಕ ಜಾಲತಾಣದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾನು ನೋಡುತ್ತಿದ್ದಾಗ, ಈಗಾಗಲೇ ಅದನ್ನು ಖಂಡಿಸಲು ಪ್ರಾರಂಭಿಸಿದ್ದ ಜನರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನನಗೆ ನಿಜವಾಗಿಯೂ ಸಮರ್ಥಿಸಿಕೊಳ್ಳಬೇಕು ಅನಿಸಲಿಲ್ಲ" ಎಂದಿದ್ದಾರೆ.