ಯಶ್ ನಿರ್ಮಿಸಿ ನಟಿಸಿದ 'ಟಾಕ್ಸಿಕ್' ಸಿನಿಮಾ ಸದ್ದು ಗದ್ದಲ ಹೇಗಿತ್ತು ಎನ್ನುವುದು ಗೊತ್ತೇಯಿದೆ. ಭಾರೀ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಚಿತ್ರದಲ್ಲಿದ್ದ ಹಸಿಬಿಸಿ ದೃಶ್ಯಗಳು ಹಾಗೂ ರಕ್ತಸಿಕ್ತ ದೃಶ್ಯಗಳ ಬಗ್ಗೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಬಹುಭಾಷಾ ನಟ ಸುಮನ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ಸಿನಿಮಾಗಳನ್ನು ಸೆನ್ಸಾರ್ ಮಂಡಳಿ ಹೇಗೆ ಒಪ್ಪಿಕೊಳ್ಳುತ್ತೆ ಎಂದು ಪ್ರಶ್ನಿಸಿದ್ದಾರೆ.

ಎಪಿ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಡೈರೆಕ್ಟರ್ ಆಗಿ ಕೂಡ ಸುಮನ್ ಗುರ್ತಿಸಿಕೊಂಡಿದ್ದಾರೆ. ಸೆನ್ಸಾರ್ ಮಂಡಳಿ ಬಗ್ಗೆ ಮೊದಲಿನಿಂದಲೂ ಸುಮನ್ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಮತ್ತೊಮ್ಮ ಅವರು ಈ ಬಗ್ಗೆ ಮಾತನಾಡಿದ್ದಾರೆ. 'ಟಾಕ್ಸಿಕ್' ಸಿನಿಮಾ ಬಗ್ಗೆ ಕೂಡ ಅವರು ಪ್ರಸ್ತಾಪಿಸಿದ್ದಾರೆ. ಮದ್ರಾಸ್‌ನಲ್ಲಿ, ತುಳು ಮಾತನಾಡುವ ಬಿಲ್ಲವ ಕುಟುಂಬವೊಂದರಲ್ಲಿ ಸುಮನ್ ಹುಟ್ಟಿದವರು. ಹಾಗಾಗಿ ಕರ್ನಾಟಕ ನಂಟು ಇದೆ. ಕೆಲ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಆದರೆ ತೆಲುಗಿನಲ್ಲಿ ಹೆಚ್ಚು ಯಶಸ್ಸು ಸಿಕ್ಕಿತ್ತು.

'ಟಾಕ್ಸಿಕ್' ಸಿನಿಮಾ ವಲ್ಗರ್ ಆಗಿದೆ ಅದಕ್ಕೆ ಜನ ಒಪ್ಪಿಕೊಳ್ಳಲಿಲ್ಲ. ಸೆನ್ಸಾರ್ ಮಂಡಳಿ ಇದನ್ನು ಹೇಗೆ ಒಪ್ಪಿ ಬಿಡುಗಡೆ ಅವಕಾಶ ಕೊಡುತ್ತೆ. ಸಿನಿಮಾ ಮೇಕಿಂಗ್ ಅನ್ನೋದು ಕೇಕ್ ಇದ್ದಂತೆ. ಅದನ್ನು ಬಹಳ ಅಲಂಕಾರಿಕವಾಗಿ ಮಾಡ್ಬೇಕು. ಸಿನಿಮಾದಲ್ಲಿ ವಿಷಯ ಇರಬೇಕು. ಕಾಮಿಡಿ, ಫೈಟ್ಸ್, ಆಕ್ಷನ್ ಎಲ್ಲವೂ ಇರಬೇಕು. ಬಹಳ ನೀಟ್ ಆಗಿ ಇರಬೇಕು. ನಿಮಗೆ ಗೊತ್ತು ಇತ್ತೀಚೆಗೆ ಬಹಳ ವಲ್ಗರ್ ಸಿನಿಮಾವೊಂದು ರಿಲೀಸ್ ಆಯ್ತು. ಜನ ಒಪ್ಪಲಿಲ್ಲ. ಅದರಿಂದ ಕೋಟಿ ಕೋಟಿ ನಷ್ಟ ಆಯ್ತ. ಇಂತಹ ಸಿನಿಮಾಗಳು ಹೇಗೆ ಸೆನ್ಸಾರ್ ಪಾಸ್ ಮಾಡುತ್ತೋ ಗೊತ್ತಿಲ್ಲ. ಇಂತಹ ಸಿನಿಮಾಗಳನ್ನು ಮಕ್ಕಳು ಹಾಳಾಗ್ತಾರೆ. ಇಂತಹ ಸಿನಿಮಾಗಳನ್ನು ಫ್ಯಾಮಿಲಿ ಸಮೇತ ಹೇಗೆ ನೋಡುವುದು ? ಎಂದು ಸುಮನ್ ಪ್ರಶ್ನಿಸಿದ್ದಾರೆ.

ಬಹಳ ಹಿಂದೆ ಕೂಡ ಹಸಿಬಿಸಿ ದೃಶ್ಯಗಳಿರುವ ಸಿನಿಮಾಗಳು ಬರ್ತಿದ್ದವು. ಆಗ ತಪ್ಪಾಗಿದೆ. ಈಗ ಅದನ್ನು ಮುಂದುವರೆಸುವುದು ಬೇಡ ಎಂದು Hit TV Now ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸುಮನ್ ಮಾತನಾಡಿದ್ದಾರೆ. ನಾನು ಸಾಕಷ್ಟು ಟ್ರೆಂಡ್ ನೋಡಿಬಿಟ್ಟಿದ್ದೀನಿ. ಕೆಲ ನಟ ಡಬಲ್ ಮೀನಿಂಗ್ ಡೈಲಾಗ್ಸ್, ಹಸಿಬಿಸಿ ದೃಶ್ಯಗಳಿರುವ ಚಿತ್ರದಲ್ಲಿ ನಟಿಸಿದ್ದರು. ಆದ್ರೆ ನಾನು ನಟಿಸ್ಲಿಲ್ಲ. ಕೆಲ್ಸ ಇಲ್ದೆ ಖಾಲಿ ಕೂತ್ರು ಅಂತಹ ಅವಕಾಶ ಒಪ್ಪಿಕೊಳ್ಳಲಿಲ್ಲ. ಬಹಳ ಕಷ್ಟಪಟ್ಟು ಈ ಇಮೇಜ್ ಗಳಿಸಿದ್ದೇನೆ. ಅದನ್ನು ಕಳೆದುಕೊಳ್ಳುವ ಇಷ್ಟವಿಲ್ಲ. ಇವತ್ತು ಮೊಬೈಲ್‌ನಲ್ಲಿ ಅಶ್ಲೀಲ ಸಿನಿಮಾ ನೋಡ್ತಿದ್ದಾರೆ. ಅದನ್ನು ತಡೆಯೋದು ಕಷ್ಟ. ಸೆ*ಕ್ಸ್ ತಪ್ಪಲ್ಲ.. ಅದು ಪ್ರಕೃತಿ ನಿಯಮ. ಆದ್ರೆ ಮೊಬೈಲ್ ಬಂದು ಸೆ*ಕ್ಸ್ ವೀಡಿಯೋ ನೋಡುವುದು ಸುಲಭವಾಗಿಬಿಟ್ಟಿದೆ. ಅದರಿಂದ ಸಾಕಷ್ಟು ಸಮಸ್ಯೆ ಎದುರಾಗ್ತಿದೆ. ಆದರೆ ಮೊಬೈಲ್ ಬಿಟ್ರೆ ಸಿನಿಮಾದಿಂದ ಹಾಳಾಗ್ತಿದ್ದಾರೆ ಎಂದಿದ್ದಾರೆ.

ಸೆನ್ಸಾರ್ ಮಂಡಳಿ ಇಂತಹ ದೃಶ್ಯಗಳನ್ನು ಹೇಗೆ ಒಪ್ಪಿಕೊಳ್ಳುತ್ತಾರೆ. ಒಂದೊಂದು ಚಿತ್ರಕ್ಕೆ ಒಂದೊಂದು ನ್ಯಾಯ ಯಾಕೆ ? ಕೆಲ ಸಿನಿಮಾಗಳಲ್ಲಿ ಅಂತಹ ದೃಶ್ಯಗಳಿಗೆ ಕತ್ತರಿ ಬೀಳ್ತಿದೆ. ಮತ್ತೆ ಕೆಲ ಸಿನಿಮಾಗಳಲ್ಲಿ ಸೆನ್ಸಾರ್ ನಡೀತಿಲ್ಲ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕು. ಮೊನ್ನೆ 'ಟಾಕ್ಸಿಕ್' ಸಿನಿಮಾ ಬಗ್ಗೆ ಕಾಮೆಂಟ್ ಮಾಡ್ದೆ. ಯಾವುದಾದರೂ ಸಿನಿಮಾ, ಕಾಲೇಜ್, ದೇವಸ್ಥಾನದಲ್ಲಿ ಆ ಚಿತ್ರವನ್ನು ಪ್ರದರ್ಶನ ಮಾಡೋಕೆ ಸಾಧ್ಯನಾ ? ತಾಕತ್ತು ಇದ್ದು ಪ್ರದರ್ಶಿಸಿ.. ಸಿನಿಮಾ ಅಂದ್ರೆ ಸಂಭ್ರಮಾಚರಣೆ ವೇಳೆ ಪ್ರದರ್ಶಣ ಮಾಡಬೇಕು, ಮಕ್ಕಳಿಗೆ, ಕುಟುಂಬಸ್ಥರಿಗೆ ತೋರಿಸುವಂತಿರಬೇಕು. ಆ ರೀತಿ ಸಿನಿಮಾ ಇರಬೇಕು. ಕಾಮಿಡಿ, ಆಕ್ಷನ್, ರೊಮ್ಯಾನ್ಸ್ ಎಲ್ಲದಕ್ಕೂ ಒಂದು ಮಿತಿ ಇರಬೇಕು ಎಂದು ಸುಮನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.