ರಾವಣನಾಗಿ ಯಶ್ ನಟಿಸಿರುವ 'ರಾಮಾಯಣ' ಸಿನಿಮಾ ಬಿಡುಗಡೆ ದಿನಾಂಕ ಸಮೀಪಿಸುತ್ತಿದೆ. ನಟಿಸುವುದರ ಜೊತೆಗೆ ನಿರ್ಮಾಪಕರಾಗಿ ಕೂಡ ಅವರು ಕೈ ಜೋಡಿಸಿದ್ದಾರೆ. ಹಾಗಾಗಿ ತಾವೇ ಮುಂದೆ ನಿಂತು ಸಿನಿಮಾ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಬಳಿಕ ಹೈದರಾಬಾದ್‌ನಲ್ಲಿ ಪ್ರೀ ರಿಲೀಸ್ ಈವೆಂಟ್ ನಡೀತು. ಚೆನ್ನೈನಲ್ಲಿ ಆಡಿಯೋ ಲಾಂಚ್ ಕಾರ್ಯಕ್ರಮ ನೆರವೇರಿದೆ. ಈ ನಡುವೆ ಕೊಲ್ಕತ್ತಾಗೂ ಚಿತ್ರತಂಡ ಭೇಟಿ ನೀಡಿತ್ತು.

'ಟಾಕ್ಸಿಕ್' ಸಿನಿಮಾ ಸೋಲಿನಿಂದ ಯಶ್ ಹೊರ ಬರಬೇಕಿದೆ. ಈ ಸಿನಿಮಾ ಮೇಲೆ ಯಶ್ ಬೆಟ್ಟದ್ದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಸಿನಿಮಾ ಮಿಶ್ರ ಪ್ರತಕ್ರಿಯೆ ಪಡೆದುಕೊಂಡಿತ್ತು. ಕೆಲವರು ಅದ್ಭುತ ಸಿನಿಮಾ ಎಂದು ಐದಾರು ಬಾರಿ ನೋಡಿ ಕೊಂಡಾಡಿದ್ದರು. ಆದರೆ ಬಹತೇಕರು ಸಿನಿಮಾ ಚೆನ್ನಾಗಿಲ್ಲ ಎಂದು ಮೂಗು ಮುರಿದಿದ್ದರು. 'ರಾಮಾಯಣ' ಸಿನಿಮಾ ಪ್ರಚಾರದ ವೇಳೆ ಯಶ್ 'ಟಾಕ್ಸಿಕ್' ಸಿನಿಮಾ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ. ಆದರೆ ಸಿನಿಮಾ ಹೆಸರು ಹೇಳದೇ ಪರೋಕ್ಷವಾಗಿ ಮಾತನಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೂಡ "ಕೆಲವೊಮ್ಮೆ ಗಡಿದಾಟಿ, ಪಣಕ್ಕಿಟ್ಟು ಸೋಲು-ಗೆಲುವು ಮೀರಿ ಕೆಲ ಪ್ರಯತ್ನಗಳನ್ನು ಮಾಡಬೇಕಾಗುತ್ತೆ. ಆ ಪ್ರಯತ್ನಗಳು ಇತಿಹಾಸದಲ್ಲಿ ಮೈಲಿಗಲ್ಲಾಗುತ್ತೆ. ಕೆಲವೊಮ್ಮೆ ಮೇಲೆ ಹತ್ತುವವರಿಗೆ ಮೆಟ್ಟಿಲಾಗುತ್ತೆ. ಆ ಕೆಲಸ ಎಲ್ಲರೂ ಮಾಡಬೇಕು" ಎಂದು ಯಶ್ ಹೇಳಿದ್ದರು. 'ಟಾಕ್ಸಿಕ್' ಚಿತ್ರವನ್ನು ತೆಲುಗು ಮಂದಿ ಸೋಲಿಸಿದರು ಎನ್ನುವ ಆರೋಪದ ಬಗ್ಗೆಯೂ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದರು. "ಯಶ್ ಯಾವಾಗಲೂ ಜನರನ್ನು ಒಟ್ಟು ಸೇರಿಸಲು ನೋಡ್ತಾನೆ. ಯಾರು ಕೂಡ ಯಾರ ಮೇಲೆ ಕೋಪ ಇಟ್ಕೊಬೇಡಿ. ಬೇಸರ ಮಾಡ್ಕೊಬೇಡಿ. ಎಲ್ಲಾ ರಾಜ್ಯದವರು ಪ್ರೀತಿ ತೋರಿಸ್ತಾರೆ. ಒಳ್ಳೆ ಚಿತ್ರವನ್ನು ಅವ್ರು ಹಾರೈಸಿದ್ದಾರೆ. ನಾವು ಪ್ರೀತಿ ಹಂಚೋಣ. ಪ್ರೀತಿ ಪಡೆಯೋಣ. ಎಲ್ಲರೂ ಒಟ್ಟಾರೆ, ಪ್ರಪಂಚವನ್ನು ಆಕ್ರಮಿಸಿಕೊಳ್ಳೋಣ" ಎಂದಿದ್ದರು.

ಹೈದರಾಬಾದ್‌ನಲ್ಲಿ ನಡೆದ ಈವೆಂಟ್‌ನಲ್ಲಿ ಕೂಡ 'ಟಾಕ್ಸಿಕ್' ಸಿನಿಮಾ ಬಗ್ಗೆ ಯಶ್ ಮಾತನಾಡಿದ್ದರು. "ಎರಡು ತಿಂಗಳ ಹಿಂದೆ ನಿಮ್ಮ ಮುಂದೆ ಬಂದಿದ್ದೆ. ನಮ್ಮ ವರ್ಕ್ ಬಗ್ಗೆ ಮಾತನಾಡಿದ್ದೆ.. ನಿಮ್ಮ ಪ್ರೀತಿ, ಗೌರವ ಬೇಕು ಎಂದು ಕೇಳಿಕೊಂಡಿದ್ದೆ.. ಯಾರು ಸಿನ್ಮಾ ಇಷ್ಟಪಟ್ರೋ ಅವ್ರಿಗೆ ಧನ್ಯವಾದ.. ಯಾರು ಇಷ್ಟಪಡಲಿಲ್ಲವೋ ಅವರಿಗೂ ಧನ್ಯವಾದ.. ನೀವೆಲ್ಲಾ ಬಹಳ ಪ್ರೀತಿಯಿಂದ ಸಿನ್ಮಾ ನೋಡೋಕೆ ಬಂದ್ರಿ. ಅದು ಮಾತ್ರ ಮುಖ್ಯ. ಇದು ಬಹಳ ಸುದೀರ್ಘವಾದ ಪ್ರಯತ್ನ ಎನ್ನುವುದು ನನಗೆ ಗೊತ್ತು..ಆ ದಿಶೆಯಲ್ಲಿ ಕೆಲಸ ಮಾಡಬೇಕು" ಎಂದು ಹೇಳಿದ್ದರು.

'ಟಾಕ್ಸಿಕ್' ಚಿತ್ರದಲ್ಲಿ ಹಸಿಬಿಸಿ ದೃಶ್ಯಗಳಿವೆ. ಮಕ್ಕಳನ್ನು ಈ ಸಿನಿಮಾಗೆ ಕರೆದುಕೊಂಡು ಹೋಗುವುದ ಹೇಗೆ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮಾತನಾಡಿ "ಎಲ್ಲಾ ಕನ್ನಡಿಗರಿಗೆ ನನ್ನ ಕಡೆಯಿಂದ ಮನವಿ.. ಯಾರು ಏನೇ ಮಾತಾಡ್ಲಿ, 'ರಾಮಾಯಣ' ಮನೆಮಂದಿಯೆಲ್ಲಾ, ಮಕ್ಕಳೆಲ್ಲಾ ಕೂತು ನೋಡುವಂತಹ ಸಿನಿಮಾ. ಯಾವ ಯಾವ ಸಿನಿಮಾ, ಯಾರ್ಯಾರಿಗೆ ಮಾಡಬೇಕು ಅಂತ ನಮಗೆ ಗೊತ್ತಿರುತ್ತೆ" ಎಂದು ಟೀಕಾಕಾರರಿಗೆ ಯಶ್ ತಿರುಗೇಟು ನೀಡಿದ್ದರು. ಆಗ ಕೂಡ 'ಟಾಕ್ಸಿಕ್' ಹೆಸರು ಹೇಳಿರಲಿಲ್ಲ.

ಹೀಗೆ 'ಟಾಕ್ಸಿಕ್' ಸಿನಿಮಾ ಬಳಿಕ ನಾಲ್ಕು ಬಾರಿ ಯಶ್ ವೇದಿಕೆಯಲ್ಲಿ ಮಾತನಾಡಿದ್ದಾರೆ. 'ಟಾಕ್ಸಿಕ್' ಸಿನಿಮಾ ಬಗ್ಗೆ ಕೂಡ ಸೂಚ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಆದರೆ ಚಿತ್ರದ ಹೆಸರು ಮಾತ್ರ ಹೇಳಲೇ ಇಲ್ಲ. 'ರಾಮಾಯಣ' ಚಿತ್ರದ ಪ್ರಚಾರದ ವೇಳೆ 'ಟಾಕ್ಸಿಕ್' ಹೆಸರು ಹೇಳಿದ್ರೆ, ಎಲ್ಲರ ಗಮನ ಅತ್ತ ಹೋಗುತ್ತೆ. ಅದೇ ದೊಡ್ಡದಾಗಿ ಸುದ್ದಿ ಆಗುತ್ತೆ ಎನ್ನುವುದನ್ನು ಯಶ್ ಅವರಿಗೆ ಚೆನ್ನಾಗಿ ಗೊತ್ತು. ಹಾಗಾಗಿ ಅವರು ಎಚ್ಚರಿಕೆ ವಹಿಸುತ್ತಿರುವುದು ಅರ್ಥವಾಗ್ತಿದೆ. ಆದರೂ 'ಟಾಕ್ಸಿಕ್' ಸೋಲು ಅವರ ಮೇಲೆ ಪರಿಣಾಮ ಬೀರಿರುವುದು ಸುಳ್ಳಲ್ಲ.

ಒಂದು ಸಿನಿಮಾ ಸೋತ ಮಾತ್ರಕ್ಕೆ ಸುಮ್ಮನಾಗುವ ಜಾಯಮಾನ ಅವರದ್ದಲ್ಲ. ಅದನ್ನೂ ಕೂಡ ತಮ್ಮ ಹೇಳಿಕೆಗಳಲ್ಲಿ ಸ್ಪಷ್ಟಪಡಿಸಿದ್ದಾರೆ. 'ಪ್ರೇಮದ ಊರಲಿ' ಸಿನಿಮಾ ಬಗ್ಗೆ ಮಾತನಾಡುತ್ತಾ "ಚಿತ್ರರಂಗಕ್ಕೆ ಎರಡೂ ತರಹದ ಸಿನಿಮಾಗಳು ಬೇಕು. ಹೊರಗಡೆ ಹೋಗಿ ಎಲ್ಲೆಗಳನ್ನು ಒಡೆಯುವಂಥ ಕೆಲಸ ಮಾಡಬೇಕು, ಹಾಗಂತ ನಮ್ಮಲ್ಲಿ ಇರುವಂಥ ಅಡಿಪಾಯವನ್ನು ಗಟ್ಟಿ ಮಾಡಿಕೊಳ್ಳುತ್ತಾ ಇರಬೇಕು. ಹೊಸ ಪ್ರತಿಭೆಗಳನ್ನು ಬೆಂಬಲಿಸಬೇಕು" ಎಂದು ಹೇಳಿದ್ದರು. ಅಲ್ಲಿಗೆ ಯಶ್ ಪ್ಯಾನ್ ಇಂಡಿಯಾ ಅಥವಾ ಗ್ಲೋಬಲ್ ಸಿನಿಮಾ ಕನಸು ಇಲ್ಲಿಗೆ ನಿಲ್ಲುವುದಿಲ್ಲ. ಮತ್ತೆ ಮತ್ತೆ ಇಂತಹ ಪ್ರಯತ್ನ ಮಾಡುತ್ತಲೇ ಇರ್ತಾರೆ ಎನ್ನುವುದು ಖಚಿತವಾಗಿದೆ.