ಬೆಂಗಳೂರಿನಲ್ಲಿ ನಡೆದ 'ರಾಮಾಯಣ' ಸಿನಿಮಾ ಕಾರ್ಯಕ್ರಮದಲ್ಲಿ 15 ನಿಮಿಷಗಳ ಕಾಲ ಯಶ್ ಮಾತನಾಡಿದರು. ತಮ್ಮದೇ ಶೈಲಿಯಲ್ಲಿ ಸಿನಿಮಾ ಪ್ರಯತ್ನವನ್ನು ವಿಶ್ಲೇಷಿಸಿದರು. 'ಟಾಕ್ಸಿಕ್' ಸಿನಿಮಾ ಸೋಲು ಎದುರಾಗಿದ್ದ ಟೀಕೆಗಳ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದರು. ಇದು ಮನೆಮಂದಿಯೆಲ್ಲಾ ಕೂತು ನೋಡುವ ಸಿನಿಮಾ ಎಂದು ನಗೆ ಚಟಾಕಿ ಹಾರಿಸಿದರು.
'ಟಾಕ್ಸಿಕ್' ಸಿನಿಮಾ ಫ್ಯಾಮಿಲಿ ಜೊತೆ ಕೂತು ನೋಡೊಕೆ ಸಾಧ್ಯವಿಲ್ಲ ಎಂದು ಸಾಕಷ್ಟು ಜನ ಟೀಕೆ ಮಾಡಿದ್ದರು. ಇದನ್ನೇ ಪ್ರಸ್ತಾಪಿಸಿ ಯಶ್ ಮಾತನಾಡಿದರು. "ಈ ಸಿನಿಮಾ ಮನೆಮಂದಿಯೆಲ್ಲಾ ಮಕ್ಕಳೆಲ್ಲಾ ಕೂತು ನೋಡುವ ಸಿನಿಮಾ.. ಯಾವ್ ಯಾವ್ ಸಿನಿಮಾ ಯಾರ್ ಯಾರ್ಗೆ ಮಾಡ್ಬೇಕು ಎನ್ನುವುದು ನಮಗೆ ಗೊತ್ತು.. 'ರಾಮಾಯಣ' ಸಿನಿಮಾ ನೋಡಿ" ಎಂದರು.
ಅಭಿಮಾನಿಗಳ ಕೋರಿಕೆ ಮೇರೆಗೆ 'ರಾಮಾಯಣ' ಚಿತ್ರದ ಡೈಲಾಗ್ ಹೇಳಿ ರಂಜಿಸಿದರು. ಸೀತೆಯಾಗಿ ಸಾಯಿ ಪಲ್ಲವಿ ನಟನೆ ಬಗ್ಗೆ ಮಾತನಾಡಿದ ಯಶ್ ನನ್ನ ಸೀತೆ ರಾಧಿಕಾ ಇಲ್ಲೇ ಇದ್ದಾರೆ ಎಂದರು. "ರಾವಣ ಆಗ್ಲಿ, ರಾಯ ಆಗ್ಲಿ, ರಾಕಿ ಆಗ್ಲಿ, ರಾಜಾಹುಲಿ ಆಗ್ಲಿ ಏನೇ ಆದ್ರು ಮನೆಗೆ ಬಂದ್ರೆ ನಾನು ನಾನೇ.. ಮನೆಯಲ್ಲಿ ಆ ಶಕ್ತಿ, ಬೆಂಬಲ ಇಲ್ಲ ಅಂದ್ರೆ ಕಷ್ಟ. ಈ ಸಿನಿಮಾ ಮಾಡುವಾಗ ನನಗೆ ಒಂದು ವಿಷಯ ಗೊತ್ತಾಯ್ತು.. ಈಗ ನಮ್ಮ ಹೆಸರನ್ನು ಹೆಂಡ್ತಿ ಜೊತೆ ಸೇರಿಸ್ತೀವಿ. ಆದ್ರೆ ಮೊದಲೆಲ್ಲಾ ಪತ್ನಿ ಹೆಸರಿನ ಜೊತೆ ನಮ್ಮ ಹೆಸರು ಇರ್ತಿತ್ತು. ಸೀತಾಪತಿ ತರ. ನಾನು ರಾಧಿಕಾ ಪತಿ" ಎಂದರು.
ಯಾಕೆ ರಾವಣನ ಪಾತ್ರ ಎಂದು ಕೆಲವರು ಕೇಳ್ತಾರೆ. ನಮಗೆ ಸಿಕ್ಕಿರುವ ಶಕ್ತಿಯಿಂದ ಉದ್ಯಮಕ್ಕೂ ಏನಾದರೂ ಮಾಡ್ಬೇಕು. ಕನ್ನಡ ಚಿತ್ರರಂಗದಲ್ಲಿ 'ಪ್ರೇಮದ ಊರಲಿ' ಗೆದ್ದಿರುವುದು ಗೊತ್ತಾಯ್ತು.. ಆ ತಂಡವನ್ನು ಭೇಟಿ ಮಾಡ್ದೆ. ಅವ್ರ ಕಣ್ಣಲ್ಲಿ ಗೆಲುವು ನೋಡ್ದೆ. ನಮಗೆ ಎರಡೂ ಬೇಕು.. ಎಲ್ಲೇ ಮೀರಿ ಸಿನಿಮಾ ಮಾಡಬೇಕು, ಅದೇ ರೀತಿ ನಮ್ಮ ಅಡಿಪಾಯ ಕೂಡ ಭದ್ರ ಮಾಡಿಕೊಳ್ಳಬೇಕು. ಕನ್ನಡಿಗರು ಈ ಮಟ್ಟಿಗೆ ಯಶಸ್ಸು ಕೊಟ್ಟಿದ್ದೀರಾ ಅದನ್ನು ಮರೆಯುವುದಿಲ್ಲ ಎಂದು ಯಶ್ ವಿವರಿಸಿದರು.
'ಟಾಕ್ಸಿಕ್' ಸಿನಿಮಾವನ್ನು ನೀವೆಲ್ಲಾ ಎಷ್ಟು ನೋಡಿದ್ರೆ, ಇಷ್ಟಪಟ್ರಿ ಅದಕ್ಕಾಗಿ ಎಷ್ಟು ಹೊಡೆದಾಡಿದ್ರಿ.. ಇಷ್ಟೆಲ್ಲಾ ಆದ್ರು ಎಷ್ಟು ಕಲೆಕ್ಷನ್ ಕೊಟ್ಟಿದ್ದೀರಾ.. ಎಲ್ಲಾ ಗೊತ್ತು.. ಆ ಋಣ ತೀರಿಸೋಕೆ ಸಾಧ್ಯವಿಲ್ಲ. 'ರಾಮಾಯಣ' ಚಿತ್ರಕ್ಕೆ ನಾನು ನಿರ್ಮಾಪಕ. ಭಾರತದಿಂದ ಹೊರಗಡೆ ಹೋಗಿ ಸಿನಿಮಾ ಮಾಡ್ತಿದ್ದೀವಿ, ಕನ್ನಡಿಗರ ಪರವಾಗಿ ನಾನು ನಿಂತಿದ್ದೀನಿ ಎಂದು ಯಶ್ ಹೆಮ್ಮೆ ಮಾತುಗಳನ್ನಾಡಿದರು.
ಈ ಸಿನೆಮಾ ಮನೆ-ಮಂದಿಯೆಲ್ಲಾ
— S R E E 🆇 ಶ್ರೀ (@SreeDharaNEL) October 15, 2026
ಮಕ್ಳೆಲ್ಲಾ ಕೂತ್ಕಂಡು ನೋಡೋ ಸಿನೆಮಾ !! 😉#Yash #Ramayana@TheNameIsYash pic.twitter.com/Xk90egSoBQ