'ರಾಮಾಯಣ' ಚಿತ್ರದ ಪ್ರಚಾರ ಬೆಂಗಳೂರಿನಿಂದ ಆರಂಭವಾಗಿದೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಚಿತ್ರತಂಡ ಮಾತನಾಡಿದೆ. ಇಡೀ ಚಿತ್ರತಂಡ ಈ ವೇಳೆ ಹಾಜರಾಗಿತ್ತು. 'ಟಾಕ್ಸಿಕ್' ಸಿನಿಮಾ ಬಿಡುಗಡೆ ಬಳಿಕ ಇದೇ ಮೊದಲ ಬಾರಿ ಯಶ್ ಮಾತನಾಡಿದರು. ಪರೋಕ್ಷವಾಗಿ 'ಟಾಕ್ಸಿಕ್' ಸಿನಿಮಾ ಪ್ರಯತ್ನ ಹಾಗೂ ಫಲಿತಾಂಶದ ಬಗ್ಗೆ ಅವರು ಪ್ರತಿಕ್ರಿಯಿಸಿದರು.
ಸೋನಿ ಪಿಕ್ಚರ್ಸ್ ಸಂಸ್ಥೆ ಇದೇ ಮೊದಲ ಬಾರಿಗೆ ಹಾಲಿವುಡ್ ಸಿನಿಮಾಗಳನ್ನು ವಿತರಣೆ ಮಾಡುವಂತೆ ನಮ್ಮ ಸಿನಿಮಾವನ್ನು ರಿಲೀಸ್ ಮಾಡ್ತಿದ್ದಾರೆ. ಅದು ದೊಡ್ಡ ಸಾಧನೆ. ಅಂತರಾಷ್ಟ್ರೀಯಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡಿದ್ರೆ ಏನಾಯ್ತು ಎಂದು ಕೆಲವರು ಕೇಳಬಹುದು. ನಾವು ಭಾರತೀಯರಾಗಿ ಒಂದು ಅರ್ಥ ಮಾಡಿಕೊಳ್ಳಬೇಕು. ನಾವು ಏನು ಮಾಡ್ತೀವಿ ಎನ್ನುವುದನ್ನು ಇಡೀ ಪ್ರಪಂಚಕ್ಕೆ ತಿಳಿಸಿ ಹೇಳಬೇಕು. ಯಾರೋ ಹೇಳ್ತಾರೆ ಎಂದು ಸುಮ್ಮನಿರಬಾರದು ಎಂದು ಯಶ್ ಹೇಳಿದ್ದಾರೆ.
'ಟಾಕ್ಸಿಕ್' ಸಿನಿಮಾ ಸೋಲು ಗೆಲುವಿನ ಬಗ್ಗೆ ಎಲ್ಲರಿಗೂ ಗೊತ್ತೇಯಿದೆ. ಇದೇ ವಿಚಾರವನ್ನು ಸೂಚ್ಯವಾಗಿ ಪ್ರಸ್ತಾಪಿಸಿ ಯಶ್ ಮಾತನಾಡಿದ್ರು. "ಕೆಲವೊಮ್ಮೆ ಗಡಿದಾಟಿ, ಪಣಕ್ಕಿಟ್ಟು ಸೋಲು-ಗೆಲುವು ಮೀರಿ ಕೆಲ ಪ್ರಯತ್ನಗಳನ್ನು ಮಾಡಬೇಕಾಗುತ್ತೆ. ಆ ಪ್ರಯತ್ನಗಳು ಇತಿಹಾಸದಲ್ಲಿ ಮೈಲಿಗಲ್ಲಾಗುತ್ತೆ. ಕೆಲವೊಮ್ಮೆ ಮೇಲೆ ಹತ್ತುವವರಿಗೆ ಮೆಟ್ಟಿಲಾಗುತ್ತೆ. ಆ ಕೆಲಸ ಎಲ್ಲರೂ ಮಾಡಬೇಕು. ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಯಾವ್ದೊ ಚಿತ್ರ ನೋಡಿ ವಿಎಫ್ಎಕ್ಸ್ ಹಂಗಿದೆ, ಆ ನಟ ಹಿಂಗೆ ಮಾಡಬಹುದಿತ್ತು ಅಂತಾರೆ. ಕಾಲಕಾಲದಿಂದ ಇದೇ ಆಗಿರೋದು. ಬ್ರಿಟೀಷರು ಮಾಡಿದ್ದು ಇದ್ದನ್ನೆ.. ನಮ್ಮ ನಮ್ಮಲ್ಲೇ ಕಿತ್ತಾಡಿಕೊಂಡು ಇದ್ದರೆ ಸಾಧಿಸೋದು ಕಷ್ಟ.. ಉದ್ದೇಶ ಸರಿಯಾಗಿ ಇದ್ದಾಗ ನಾವೆಲ್ಲಾ ಒಂದಾಗಿ ಒಂದು ಒಳ್ಳೆ ಕೆಲಸವನ್ನು ಒಪ್ಪಿಕೊಳ್ಳಬೇಕು, ಮೆಚ್ಚಬೇಕು ಎಂದು ಯಶ್ ಕೇಳಿಕೊಂಡರು.
ತೆಲುಗು ಪ್ರೇಕ್ಷಕರು ಬೇಕೆಂದೇ 'ಟಾಕ್ಸಿಕ್' ಸಿನಿಮಾ ತುಳಿದ್ರು ಎನ್ನುವ ಆರೋಪ ಕೇಳಿಬಂದಿದ್ದು ಗೊತ್ತೇಯಿದೆ. ಇದನ್ನು ಯಶ್ ಪ್ರಸ್ತಾಪಿಸಿ ಮಾತನಾಡಿದ್ರು. "ರಾಮಾಯಣ ಚಿತ್ರದ ಮೂಲಕ ನಮ್ಮ ಪ್ರಯತ್ನವನ್ನು ನೀವು ಗೌರವಿಸಬೇಕು.. ಯಶ್ ಯಾವಾಗಲೂ ಜನರನ್ನು ಒಟ್ಟು ಸೇರಿಸಲು ನೋಡ್ತಾನೆ. ಯಾರು ಕೂಡ ಯಾರ ಮೇಲೆ ಕೋಪ ಇಟ್ಕೊಬೇಡಿ. ಬೇಸರ ಮಾಡ್ಕೊಬೇಡಿ. ಎಲ್ಲಾ ರಾಜ್ಯದವರು ಪ್ರೀತಿ ತೋರಿಸ್ತಾರೆ. ಒಳ್ಳೆ ಚಿತ್ರವನ್ನು ಅವ್ರು ಹಾರೈಸಿದ್ದಾರೆ. ನಾವು ಪ್ರೀತಿ ಹಂಚೋಣ. ಪ್ರೀತಿ ಪಡೆಯೋಣ. ಎಲ್ಲರೂ ಒಟ್ಟಾರೆ, ಪ್ರಪಂಚವನ್ನು ಆಕ್ರಮಿಸಿಕೊಳ್ಳೋಣ" ಎಂದು ಯಶ್ ವಿವರಿಸಿದ್ದಾರೆ.