ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಕಮರ್ಷಿಯಲ್ ಆಗಿ ಸೋತಿರಬಹುದು. ಆದರೆ ಯಶ್ ಪ್ರಯತ್ನ, ಅವರ ಪರ್ಫಾರ್ಮನ್ಸ್ ಬಗ್ಗೆ ಎರಡು ಮಾತಿಲ್ಲ. ನಿಜ ಹೇಳಬೇಕು ಅಂದ್ರೆ ಒಂದು ವರ್ಗಕ್ಕೆ ಸಿನಿಮಾ ಸಿಕ್ಕಾಪಟ್ಟೆ ಇಷ್ಟ ಆಗಿದೆ. ನಾಲ್ಕೈದು ಬಾರಿ ಚಿತ್ರಮಂದಿರಗಳಲ್ಲಿ 'ಟಾಕ್ಸಿಕ್' ಸಿನಿಮಾ ನೋಡಿರುವವರು ಇದ್ದಾರೆ. ನಿಮಗೆ ಗೊತ್ತಾ ಡಾ. ರಾಜ್‌ಕುಮಾರ್ ಕೂಡ ಇಂಥದ್ದೆ ಒಂದು ಸೈಕಲಾಜಿಕಲ್ ಸಿನಿಮಾ ಮಾಡಿದ್ದರು.

ಅಣ್ಣಾವ್ರು ನಟಿಸಿದ ಬಹುತೇಕ ಸಿನಿಮಾಗಳು ಗೆದ್ದಿದ್ದವು. ಆದರೆ ಕೆಲ ಸಿನಿಮಾಗಳು ಸೋತಿದ್ದು ಇದೆ. ಅದಕ್ಕೆ ಕಾರಣ ವಿಭಿನ್ನ ಪ್ರಯತ್ನ. ವರನಟನ ಸಿನಿಮಾ ಅಂದ್ರೆ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಇರ್ತಿತ್ತು. ಆದರೆ ಕೆಲವೊಮ್ಮೆ ಪ್ರಯೋಗಾತ್ಮಕವಾಗಿ ಮಾಡಿದ್ದ ಸಿನಿಮಾಗಳು ಮಿಶ್ರ ಪ್ರತಿಕ್ರಿಯೆ ಪಡೆದಿದ್ದು ಇದೆ. ಅದಕ್ಕೆ 'ಒಂದು ಮುತ್ತಿನ ಕಥೆ' ಬೆಸ್ಟ್ ಎಕ್ಸಾಂಪಲ್. ಇವತ್ತಿಗೆ ಅದು ಕ್ಲಾಸಿಕ್ ಸಿನಿಮಾ ಎನಿಸಿಕೊಂಡಿದೆ. ಆದರೆ ಅವತ್ತು ಪ್ರೇಕ್ಷಕರನ್ನು ರಂಜಿಸುವಲ್ಲಿ ಸಿನಿಮಾ ಸೋತಿತ್ತು.

'ಅದೇ ಕಣ್ಣು' ಕೂಡ ಅಂಥದ್ದೇ ಪ್ರಯತ್ನವಾಗಿತ್ತು. ಚಿ. ದತ್ತರಾಜ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ತಂದೆ- ಮಗನಾಗಿ ದ್ವಿಪಾತ್ರದಲ್ಲಿ ಅಣ್ಣಾವ್ರು ನಟಿಸಿದ್ದರು. 'ಟಾಕ್ಸಿಕ್' ಚಿತ್ರವನ್ನು 'ಅದೇ ಕಣ್ಣು' ಚಿತ್ರಕ್ಕೆ ಹೋಲಿಸಿ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಅದರಲ್ಲೂ ಕ್ಲೈಮ್ಯಾಕ್ಸ್ ಅಂತೂ ಸೇಮ್ ಟು ಸೇಮ್ ಎಂದು ಹೇಳುತ್ತಿದ್ದಾರೆ. ಡಾ. ರಾಜ್, ಗಾಯತ್ರಿ ಹಾಗೂ ತೂಗುದೀಪ ಶ್ರೀನಿವಾಸ್ ನಟನೆಯ 'ಅದೇ ಕಣ್ಣು' ಸಿನಿಮಾ 1985ರಲ್ಲಿ ತೆರೆಗೆ ಬಂದಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು.

ನೇತ್ರದಾನದ ಸಂದೇಶ ಇದೆ ಎನ್ನುವ ಕಾರಣಕ್ಕೆ ಅಣ್ಣಾವ್ರು ಈ ಕಥೆ ಮೆಚ್ಚಿ ನಟಿಸಿದ್ದರು. ಆದರೆ ಪ್ರೇಕ್ಷಕರಿಗೆ ಇಷ್ಟವಾಗಿರಲಿಲ್ಲ. ವಾಲಿ ಎಂಬುವವರು ಬರೆದ ತಮಿಳು ನಾಟಕದಿಂದ ಪ್ರೇರಣೆಗೊಂಡು 'ಅದೇ ಕಣ್ಣು' ಸಿನಿಮಾ ಮಾಡಿದ್ದರು. ಚಿ. ಉದಯಶಂಕರ್ ಚಿತ್ರಕಥೆ ಹಾಗೂ ಹಾಡುಗಳಿಗೆ ಸಾಹಿತ್ಯ ಬರೆದಿದ್ದರು. ಜಿ. ಕೆ ವೆಂಕಟೇಶ್ ಸಂಗೀತ ಚಿತ್ರಕ್ಕಿತ್ತು.

'ಕಮಲಾ ಕಾಫಿ ಎಸ್ಟೇಟ್'ನ ಶ್ರೀಮಂತ ಮಾಲೀಕ ಜಗನ್ನಾಥ ರಾವ್, ಮಗ ಗೋಪಿ(ಡಾ. ರಾಜ್‌ಕುಮಾರ್ ದ್ವಿಪಾತ್ರ).. ಪತ್ನಿ ಕಮಲಾ(ಗಾಯತ್ರಿ) ಜೊತೆಗಿನ ಜಗಳದ ವೇಳೆ ಆಕೆಗೆ ಜಗನ್ನಾಥ ರಾವ್ ಕಪಾಳಮೋಕ್ಷ ಮಾಡಿ ಆಕಸ್ಮಿಕವಾಗಿ ಮೃತಪಡುತ್ತಾಳೆ. ಬಳಿಕ ಅನ್ನು ಮುಚ್ಚಿಹಾಕಿಬಿಡುತ್ತಾನೆ. ಒಂದ್ಕಡೆ ಕಮಲಾ ನಿಗೂಢ ಸಾವಿನ ಹಿಂದೆ ಬೀಳುವ ಪೊಲೀಸ್ ಆಫೀಸರ್. ಮುಂದೆ ಮತ್ತೆರಡು ಕೊಲೆ. ಕೊನೆಗೆ ಜಗನ್ನಾಥ ರಾವ್ ಅಪರಾಧ ಪ್ರಜ್ಞೆಯಿಂದ ನರಳುವ ಕಥೆ 'ಅದೇ ಕಣ್ಣು' ಚಿತ್ರದಲ್ಲಿದೆ.

'ಟಾಕ್ಸಿಕ್' ಚಿತ್ರದ ಕಥೆಯ ತಿರುಳು ಇದೇ ರೀತಿಯಿದೆ. ಗ್ಯಾಂಗ್‌ಸ್ಟರ್ ರಾಯ(ಯಶ್) ತನ್ನ ದಾದಾಗಿರಿಗೆ ತನ್ನವರನ್ನು ಕಳೆದುಕೊಂಡು ಬೆಲೆ ತೆರುತ್ತಾನೆ. ಅಂತಿಮವಾಗಿ ಅದೇ ಪಾಪಪ್ರಜ್ಞೆಯಿಂದ ನರಳುತ್ತಾನೆ. 'ಟಾಕ್ಸಿಕ್' ಚಿತ್ರದ ಕ್ಲೈಮ್ಯಾಕ್ಸ್ ಹಾಗೂ 'ಅದೇ ಕಣ್ಣು' ಟೈಟಲ್ ಸಾಂಗ್‌ ಮಧ್ಯೆ ಸಾಕಷ್ಟು ಹೋಲಿಕೆಯಿದೆ. ಇವತ್ತಿಗೂ 'ಅದೇ ಕಣ್ಣು' ಕೆಲವರು ಬಹಳ ಫೇವರಿಟ್ ಸಿನಿಮಾ. 'ಟಾಕ್ಸಿಕ್' ಬಗ್ಗೆ ಕೂಡ ಮುಂದೊಂದು ದಿನ ಜನ ಇದೇ ರೀತಿ ಮಾತನಾಡುತ್ತಾರೆ.