ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಪ್ರೇಕ್ಷಕರ ನಿರೀಕ್ಷೆ ಹುಸಿಯಾಗಿಸಿತ್ತು. ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಬಹುತೇಕ ಮುಕ್ತಾಯವಾಗಿದೆ. ಓಟಿಟಿಗೆ ಬರೋಕು ಮುನ್ನ ಚಿತ್ರಕ್ಕೆ ಭಾರೀ ಪೆಟ್ಟು ಬಿದ್ದಿದೆ. ಅಧಿಕೃತವಾಗಿ ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಬಗ್ಗೆ ಗೊತ್ತಾಗ್ತಿಲ್ಲ. ಅಷ್ಟರಲ್ಲೇ ಚಿತ್ರದ HD ಪ್ರಿಂಟ್ ಲೀಕ್ ಆಗಿದೆ.

ಹೌದು, 'ಟಾಕ್ಸಿಕ್' ಚಿತ್ರಕ್ಕೆ ಪೈರಸಿ ಕಾಟ ಮೊದಲ ದಿನದಿಂದಲೇ ಶುರುವಾಗಿತ್ತು. ಸಿನಿಮಾ ಬಿಡುಗಡೆ ಬೆನ್ನಲ್ಲೇ ಕೆಲವರು ಸಿನಿಮಾ ಲೀಕ್ ಮಾಡಿದ್ದರು. 3 ಲಕ್ಷಕ್ಕೂ ಅಧಿಕ ಪೈರಸಿ ಲಿಂಕ್ ಡಿಲೀಟ್ ಮಾಡಿದ್ದಾಗಿ ಚಿತ್ರತಂಡವೇ ಮಾಹಿತಿ ನೀಡಿದೆ. ಸಿನಿಮಾ ಗಳಿಕೆ ಮೇಲೆ ಇದು ಪರಿಣಾಮ ಬೀರಿದ್ದು ಸುಳ್ಳಲ್ಲ. ಫೇಸ್ಬುಕ್‌ ಪೇಜ್‌ಗಳಲ್ಲಿ ಇಡೀ ಸಿನಿಮಾವನ್ನು ಕಿಡಿಗೇಡಿಗಳು ಅಪ್‌ಲೋಡ್ ಮಾಡಿದ್ದರು. ಇದೀಗ HD ಪ್ರಿಂಟ್ ಕೂಡ ಆನ್ಲೈನ್‌ನಲ್ಲಿ ಹರಿದಾಡ್ತಿದೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆಯಾದ 30 ದಿನಕ್ಕೆ ಓಟಿಟಿಗೆ ಬರ್ತಿದೆ. 'ಟಾಕ್ಸಿಕ್' ಸಿನಿಮಾ ತೆರೆಗೆ ಬಂದು 40 ದಿನ ಕಳೆದಿದೆ. ಸೆಪ್ಟೆಂಬರ್ 25ರಂದು ಸಿನಿಮಾ ಓಟಿಟಿಗೆ ಬರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸುಳ್ಳಾಗಿದೆ. ಹಿಂದಿ ಸಿನಿಮಾಗಳು ಎರಡು ತಿಂಗಳ ಬಳಿಕ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಬೇಕು ಎನ್ನುವ ನಿಯಮ ಇದೆ. ಹಾಗಾಗಿ ನವೆಂಬರ್‌ನಲ್ಲಿ ಒಮ್ಮೆಲೆ ಎಲ್ಲಾ ಭಾಷೆಗಳಲ್ಲಿ ಸಿನಿಮಾ ಓಟಿಟಿಗೆ ಬರುತ್ತೆ ಎಂದು ನಿರೀಕ್ಷಿಸಲಾಗ್ತಿದೆ. ಇದೆಲ್ಲದರ ನಡುವೆ ಸಿನಿಮಾ ಲೀಕ್ ಆಗಿರುವುದು ಚಿತ್ರತಂಡದ ಆತಂಕಕ್ಕೆ ಕಾರಣವಾಗಿದೆ.

ಓಟಿಟಿಗೆ ಬರುವ ಮುನ್ನ HD ಪ್ರಿಂಟ್ ಆಗಿಬಿಟ್ಟರೆ ಸಹಜವಾಗಿಯೇ ಓಟಿಟಿಯಲ್ಲಿ ಸಿನಿಮಾ ನೋಡುವವರ ಸಂಖ್ಯೆ ಕಮ್ಮಿ ಆಗುತ್ತದೆ. ಇದೇ ನೆಪವೊಡ್ಡಿ ಓಟಿಟಿ ಸಂಸ್ಥೆಗಳು ಚೌಕಾಸಿ ಮಾಡುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ಸಾಧ್ಯವಾದಷ್ಟು ಬೇಗ ಸಿನಿಮಾ ಓಟಿಟಿಗೆ ತರಬೇಕು ಎಂದು ಕೆಲವರು ಭಾವಿಸುತ್ತಾರೆ. ಸದ್ಯ 'ಟಾಕ್ಸಿಕ್' ಚಿತ್ರತಂಡದ ಮುಂದಿನ ನಡೆ ಏನು ಎನ್ನುವುದನ್ನು ಕಾದು ನೋಡಬೇಕಿದೆ.

ಯಶ್ 'ಟಾಕ್ಸಿಕ್' ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ಮಾಪಕರಾಗಿಯೂ ಕೈಜೋಡಿಸಿದ್ದಾರೆ. ಹಾಗಾಗಿ ಈ ಪೈರಸಿ, ಓಟಿಟಿ ಎಲ್ಲವೂ ಅವರ ಮೇಲೆ ಪರಿಣಾಮ ಬೀರಲಿದೆ. ಅಂದಹಾಗೆ 'ರಾಮಾಯಣ' ಸಿನಿಮಾ ಪ್ರಚಾರಕ್ಕೆ ಯಶ್ ಮುಂದಾಗಿದ್ದಾರೆ. ದೀಪಾವಳಿ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ರಾವಣನಾಗಿ ನಟಿಸುವುದರ ಜೊತೆಗೆ ನಿರ್ಮಾಪಕನಾಗಿ ಕೂಡ ಯಶ್ ತಂಡದ ಬೆನ್ನಿಗೆ ನಿಂತಿದ್ದಾರೆ.