ಲಾಸ್‌ ಏಂಜಲೀಸ್‌ನಲ್ಲಿ ನಡೆದ 'ರಾಮಾಯಣ' ಚಿತ್ರದ ಪ್ರೀಮಿಯರ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇಡೀ ಚಿತ್ರತಂಡ ಅಮೆರಿಕಾದ ಪ್ರೇಕ್ಷಕರ ಜೊತೆ ಸಿನಿಮಾ ನೋಡಿ ಎಂಜಾಯ್ ಮಾಡಿದೆ. ನಟ ಯಶ್ ಫ್ಯಾಮಿಲಿ ಸಮೇತ ಭಾಗವಹಿಸಿದ್ದರು. ಮಕ್ಕಳು ಯಥರ್ವ್ ಹಾಗೂ ಮಗಳು ಐರಾಗೆ ಇದು ಮೊದಲ ಸಿನಿಮಾ ಅನುಭವ.

'ರಾಮಾಯಣ' ಚಿತ್ರದಲ್ಲಿ ರಾವಣನಾಗಿ ಯಶ್ ನಟಿಸಿರುವುದು ಸಿನಿಮಾ ವೃತ್ತಿಜೀವನದ ಮಹತ್ವದ ಮೈಲಿಗಲ್ಲಾಗಿದೆ. ಇತ್ತ ಐರಾ ಹಾಗೂ ಯಥರ್ವ್ ಪಾಲಿಗೆ ಇದು ಮೊದಲ ಸಿನಿಮಾ ವೀಕ್ಷಣೆಯಾಗಿ ಸದಾ ಸ್ಮರಣೀಯವಾಗಿರಲಿದೆ. ಇನ್ನು ಸಿನಿಮಾ ನೋಡಿ ಮಕ್ಕಳು ಹೇಗೆ ಪ್ರತಿಕ್ರಿಯಿಸಿದರು ಎನ್ನುವುದು ಬಹಿರಂಗವಾಗಿದೆ. ಸಿನಿಮಾ ನೋಡಿ ಹೊರ ಬಂದ ಯಥರ್ವ್ ಆ ದೃಶ್ಯದ ಬಗ್ಗೆ ಅಪ್ಪನ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ ನಟಿ ಸಾಯಿ ಪಲ್ಲವಿ ವಿವರಿಸಿದ್ದಾರೆ.

ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ, ನಿರ್ದೇಶಕ ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಸೇರಿದಂತೆ ಹಲವರು ಪ್ರೀಮಿಯರ್‌ ಶೋನಲ್ಲಿ 'ರಾಮಾಯಣ' ಚಿತ್ರದ ಮೊದಲ ಭಾಗ ವೀಕ್ಷಿಸಿದ್ದಾರೆ. ಸಿನಿಮಾ ನೋಡಿ ಬಂದ ಯಥರ್ವ್ ಪ್ರತಿಕ್ರಿಯೆ ಹೇಗಿತ್ತು ಎಂದು ಸಂದರ್ಶನವೊಂದರಲ್ಲಿ ಸಾಯಿ ಪಲ್ಲವಿ ತಿಳಿಸಿದ್ದಾರೆ. "ಅವ್ನು ಅಳ್ತಿದ್ದ. ನೀನು ಆ ಪಕ್ಷಿಯನ್ನು(ಜಟಾಯು) ಕೊಂದಿದ್ದು ನನಗೆ ಇಷ್ಟವಾಗಲಿಲ್ಲ. ಅವನಿಗೆ ಗೊತ್ತು ಅಪ್ಪ ಆಕ್ಟಿಂಗ್ ಮಾಡಿದ್ದಾರೆ. ಆದ್ರು ಅದು ಸರಿಯಲ್ಲ, ಚೆನ್ನಾಗಿಲ್ಲ, ಸಿನಿಮಾದಲ್ಲಿ ಪಕ್ಷಿಯನ್ನು ಕೊಲ್ಲೋದು. ನೀನು ಹೀಗೆ ಮಾಡ್ತೀಯಾ ಅಂತ ಗೊತ್ತಿರಲಿಲ್ಲ.. ಬಹಳ ಸುಂದರ ಸನ್ನಿವೇಶ" ಎಂದಿದ್ದಾರೆ.

ಸಾಯಿ ಪಲ್ಲವಿ ಮಾತಿಗೆ ಯಶ್ ದನಿಗೂಡಿಸಿ "ಅವ್ರು(ಐರಾ ಹಾಗೂ ಐಥರ್ವ್) ಯೋಚಿಸಲು ಆರಂಭಿಸಿದ್ದಾರೆ. ಸರಿ ತಪ್ಪುಗಳ ಅರಿವು ಅವರಿಗೆ ಗೊತ್ತಾಗ್ತಿದೆ. ಈ ಸಿನಿಮಾದಲ್ಲಿ ಕೂಡ ಅದೇ ವಿಚಾರಗಳನ್ನು ಚರ್ಚಿಸಲಾಗಿದೆ" ಎಂದು ಯಶ್ ಹೇಳಿದ್ದಾರೆ. ರಾವಣನಾಗಿ ನಟಿಸುವುದರ ಜೊತೆಗೆ ಚಿತ್ರಕ್ಕೆ ಅವರು ಬಂಡವಾಳು ಹೂಡಿದ್ದಾರೆ. ರಾವಣ ಹಾಗೂ ಜಟಾಯು ಯುದ್ಧದೊಂದಿಗೆ ಮೊದಲ ಭಾಗ ಸಿನಿಮಾ ಮುಕ್ತಾಯವಾಗಲಿದೆ. ಅದೇ ಕ್ಲೈಮ್ಯಾಕ್ಸ್ ಆಗಿರಲಿದೆ. ಎರಡನೇ ಭಾಗ ನೋಡಲು ಇನ್ನು ಬಹಳ ಸಮಯ ಬೇಕಿದೆ.

ಮೂಲ ಕಥೆಯನ್ನು ಎರಡು ಭಾಗಗಳಾಗಿ ವಿಭಾಗಿಸಿರುವುದರಿಂದ ಮೊದಲ ಭಾಗದಲ್ಲಿ ರಾವಣನ ಆರ್ಭಟದ ದೃಶ್ಯಗಳು ಹೆಚ್ಚಾಗಿದೆ. ರಾವಣ ಶಿವನ ತಪಸ್ಸು ಮಾಡುವುದು, ವರ ಪಡೆದು ಮೂರು ಲೋಕಗಳಲ್ಲಿ ಆರ್ಭಟ ನಡೆಸುವುದು ಹೀಗೆ ನಾನಾ ಸನ್ನಿವೇಶಗಳಿವೆ. ಆದರೆ ರಾಮ-ರಾವಣ ಎದುರುಬದಿರಾಗುವ ಸನ್ನಿವೇಶ ಮೊದಲ ಭಾಗದಲ್ಲಿ ಇಲ್ಲ. ಅದೇ ಕಾರಣಕ್ಕೆ ಯಶ್ ಹಾಗೂ ರಣ್‌ಬೀರ್ ಇನ್ನು ಒಟ್ಟಿಗೆ ಕ್ಯಾಮರಾ ಮುಂದೆ ಕಾಣಿಸಿಕೊಂಡಿಲ್ಲ. ಇನ್ನು ಪ್ರೀಮಿಯರ್ ಶೋ ವೇಳೆ ಯಶ್ ಲುಕ್ ಹೈಲೆಟ್ ಆಗಿತ್ತು. ಕಪ್ಪು ಬಣ್ಣದ ಬ್ಲೇಜರ್ ಧರಿಸಿ ಯಶ್ ಮಿಂಚಿದ್ದರು. ಹಸಿರು ಬಣ್ಣ ಸೀರೆಯಲ್ಲಿ ರಾಧಿಕಾ ಪಂಡಿತ್ ಸಾಥ್ ಕೊಟ್ಟಿದ್ದರು.