ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಸೋಲೊಪ್ಪಿಕೊಂಡಿದೆ. ಯಶ್ ಪ್ರಯತ್ನ, ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಕೆಲವರು ಸಿನಿಮಾ ಸಿಕ್ಕಾಪಟ್ಟೆ ಇಷ್ಟ ಆಗಿ ನಾಲ್ಕೈದು ಬಾರಿ ನೋಡಿದ್ದಾರೆ. ಆದರೆ ದೊಡ್ಡ ಪ್ರೇಕ್ಷಕ ವರ್ಗಕ್ಕೆ ಸಿನಿಮಾ ಇಷ್ಟವಾಗಲಿಲ್ಲ. ಹಾಗಾಗಿ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸೋತಿದೆ. ಸದ್ಯ 'ಟಾಕ್ಸಿಕ್' ಬಳಿಕ ಮುಂದೇನು ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡ್ತಿದೆ.
ಈಗಾಗಲೇ 'ರಾಮಾಯಣ' ಸರಣಿ ಸಿನಿಮಾಗಳಲ್ಲಿ ರಾವಣನಾಗಿ ಯಶ್ ನಟಿಸುತ್ತಿದ್ದಾರೆ. ಚಿತ್ರದ ಮೊದಲ ಭಾಗ ದೀಪಾವಳಿ ಸಂಭ್ರಮದಲ್ಲಿ ತೆರೆಗೆ ಬರಲಿದೆ. ಎರಡನೇ ಭಾಗ ಮುಂದಿನ ವರ್ಷ ಬಿಡುಗಡೆ ಆಗಲಿದೆ. ಆ ಬಳಿಕ ಬೇರೆ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ. ಈಗಾಗಲೇ ಅದಕ್ಕಾಗಿ ಒಂದಷ್ಟು ಕಥೆಗಳನ್ನು ಕೇಳಿದ್ದಾರೆ. ರಾಕಿಂಗ್ ಸ್ಟಾರ್ ಜೊತೆ ಕೆಲಸ ಮಾಡಲು ಭಾರತೀಯ ಚಿತ್ರರಂಗದ ಖ್ಯಾತ ಫಿಲ್ಮ್ ಮೇಕರ್ಸ್ ಕಾಯುತ್ತಿದ್ದಾರೆ. ಆದರೆ ಯಶ್ ನಡೆ ಏನು ಎನ್ನುವುದು ನಿಗೂಢವಾಗಿಯೇ ಇದೆ.
ಅಂದಹಾಗೆ ಯಶ್ ಮುಂದೆ ಈಗ ಐದು ಆಯ್ಕೆಗಳಿವೆ ಎಂದು ಹೇಳಲಾಗ್ತಿದೆ. ಯಶ್ ಅವರಿಗೆ ಕಥೆ ಹೇಳಿರುವುದಾಗಿ ತಮಿಳು ನಿರ್ದೇಶಕ ಮಿತ್ರನ್ ಹೇಳಿದ್ದಾರೆ. ಆದಿತ್ಯಧರ್ ಕಾಂಬಿನೇಷನ್‌ನಲ್ಲಿ ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಎನ್ನಲಾಗ್ತಿದೆ. ಒಟ್ಟಾರೆ ಯಶ್ ಮುಂದೆ ಇರುವ ಆ 5 ಆಯ್ಕೆಗಳು ಯಾವ್ದು ? ಇದೆಲ್ಲಾ ಬಿಟ್ಟು ಬೇರೆ ಆಯ್ಕೆ ಮಾಡ್ತಾರಾ ಕಾದು ನೋಡಬೇಕಿದೆ.
ಹೇಮಂತ್ ರಾವ್
ರಕ್ಷಿತ್ ಶೆಟ್ಟಿ ನಟನೆಯ 'ಸಪ್ತಸಾಗರದಾಚೆ ಎಲ್ಲೋ' ಸರಣಿ ಸಿನಿಮಾ ಪ್ರೇಕ್ಷಕರ ಮನಗೆದ್ದಿದ್ದು ಗೊತ್ತೇಯಿದೆ. ಅಂದಹಾಗೆ ಈ ಕಥೆಯನ್ನ ಯಶ್ ಅವರಿಗೂ ಹೇಳಿದ್ದರು. ಪುನೀತ್ ರಾಜ್‌ಕುಮಾರ್ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ಮಾಡಿದ್ದ ಕಥೆ ಅಂತಿಮವಾಗಿ ರಕ್ಷಿತ್ ಪಾಲಾಗಿತ್ತು. ಆದರೆ ಯಶ್ ಹಾಗೂ ಹೇಮಂತ್ ರಾವ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತೆ ಎಂದು ಐಎಂಡಿಬಿ ಸುದ್ದಿ ಮಾಡಿದ್ದು ಸದ್ದು ಮಾಡಿತ್ತು. ಈ ಬಗ್ಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.
ಪಿ.ಎಸ್. ಮಿತ್ರನ್
ಯಶ್ ಅವರಿಗೆ ಕಥೆ ಹೇಳಿರುವುದಾಗಿ ತಮಿಳಿನ ಖ್ಯಾತ ನಿರ್ದೇಶಕ ಪಿ.ಎಸ್. ಮಿತ್ರನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅದು ಅಡ್ವೆಂಚರಸ್ ಕಥೆ. ನನ್ನ ಜೀವನದ ಮಹತ್ವಾಕಾಂಕ್ಷೆಯ ಸಿನಿಮಾ. ಎಲ್ಲವೂ ಕೂಡಿ ಬಂದರೆ ಸಿನಿಮಾ ಮಾಡಲು ಉತ್ಸುಕನಾಗಿದ್ದೇನೆ ಎಂದು ಅವರು ಹೇಳಿದ್ದಾರೆ. 'ಇರುಂಬು ತಿರೈ', 'ಹೀರೊ', 'ಸರ್ದಾರ್' ರೀತಿಯ ಹಿಟ್ ಸಿನಿಮಾಗಳನ್ನು ಅವರು ಕಟ್ಟಿಕೊಟ್ಟಿದ್ದಾರೆ.
ಆದಿತ್ಯಧರ್
'ಧುರಂಧರ್' ಸರಣಿ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಆದಿತ್ಯಧರ್ ಜೊತೆ ಯಶ್ ಸಿನಿಮಾ ಮಾಡ್ತಾರಾ ಎನ್ನುವ ಕುತೂಹಲ ಮೂಡಿದೆ. 'ಟಾಕ್ಸಿಕ್' ಸಿನಿಮಾ ನೋಡಿ ಆದಿತ್ಯಧರ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ರಾಕಿಂಗ್ ಸ್ಟಾರ್ ಪ್ರಯತ್ನಕ್ಕೆ ಬಹುಪರಾಕ್ ಎಂದಿದ್ದರು. ಇಬ್ಬರು ಜೊತೆಯಾದ್ರೆ ಬಾಕ್ಸಾಫೀಸ್ ಶೇಕ್ ಆಗುವುದು ಗ್ಯಾರಂಟಿ.
ದಿಲ್ ರಾಜು
'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳ ತೆಲುಗು ವಿತರಣೆ ಹಕ್ಕುಗಳನ್ನು ನಿರ್ಮಾಪಕ ದಿಲ್ ರಾಜು ಕೊಂಡುಕೊಂಡಿದ್ದಾರೆ. 'ಟಾಕ್ಸಿಕ್' ಹೈದರಾಬಾದ್ ಪ್ರೀ ರಿಲೀಸ್ ಈವೆಂಟ್ ವೇಳೆ ಯಶ್ ಜೊತೆ ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಈಗಾಗಲೇ ಈ ಬಗ್ಗೆ ಯಶ್ ಅವರೊಟ್ಟಿಗೆ ಮಾತನಾಡಿದ್ದೀನಿ. ಅವ್ರು ಕಂಡಿತ ಮಾಡೋಣ, ಅದಕ್ಕೆ ಕಾಲ ಕೂಡಿ ಬರಬೇಕು ಎಂದಿರುವುದಾಗಿ ತಿಳಿಸಿದ್ದರು. ಹಾಗಾಗಿ ದಿಲ್ ರಾಜು ಯಾರಾದರೂ ನಿರ್ದೇಶಕರನ್ನು ಕರ್ಕೊಂಡ್ ಬಂದು ಯಶ್ ಜೊತೆ ಸಿನಿಮಾ ಮಾಡ್ತಾರಾ ನೋಡಬೇಕು.
ಯಶ್ ರಾಜ್ ಫಿಲ್ಮ್ಸ್
'ಕೆಜಿಎಫ್- 2' ಬೆನ್ನಲ್ಲೇ ಯಶ್ ಬಾಲಿವುಡ್ ಅಂಗಳಕ್ಕೆ ಹೋಗ್ತಾರೆ. ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ ಜೊತೆ ಸಿನಿಮಾ ಮಾಡ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಯಶ್ ಜೊತೆ ಒಂದು ಟ್ರ್ಯಾಜಿಕ್ ಲವ್ ಸ್ಟೋರಿ ಗ್ಯಾಂಗ್‌ಸ್ಟರ್ ಡ್ರಾಮಾ ಸಿನಿಮಾ ಮಾಡಲು ಸಂಸ್ಥೆ ಚರ್ಚೆ ನಡೆಸ್ತಿದೆ. ರಾಮ್‌ಗೋಪಾಲ್ ವರ್ಮಾ ಚಿತ್ರಕ್ಕೆ ಕಥೆ ಬರೆಯಲಿದ್ದು ಮೋಹಿತ್ ಸೂರಿ ಆಕ್ಷನ್ ಕಟ್ ಹೇಳಬಹುದು ಎಂದು ಗುಲ್ಲಾಗಿದೆ.
ಒಟ್ಟಾರೆ ಈ ಐದು ಆಯ್ಕೆ ಬಿಟ್ಟು ಯಶ್ ಬೇರೆ ಯಾವುದಾದರೂ ಸಾಹಸ ಮಾಡ್ತಾರಾ? ನರ್ತನ್ ಜೊತೆ ಅಪ್ಪಿತಪ್ಪಿ ಸಿನಿಮಾ ಮಾಡ್ತಾರಾ? ಅಥವಾ ಪ್ರಶಾಂತ್ ನೀಲ್ ಜೊತೆ 'ಕೆಜಿಎಫ್ - 3' ಸಿನಿಮಾ ಮಾಡಲು ಮನಸ್ಸು ಮಾಡ್ತಾರಾ ಗೊತ್ತಿಲ್ಲ. 'ರಾಮಾಯಣ' 2 ಸಿನಿಮಾ ಚಿತ್ರೀಕರಣದಲ್ಲಿ ಯಶ್ ಭಾಗವಹಿಸಬೇಕಿದೆ. ಹಾಗಾಗಿ ಇನ್ನೊಂದು ವರ್ಷ ಅವರು ಹೊಸ ಸಿನಿಮಾ ಆರಂಭಿಸುವುದು ಅನುಮಾನ ಎನ್ನುವಂತಾಗಿದೆ