ಚಿತ್ರರಂಗದಲ್ಲಿ ಸ್ಟಾರ್ ವಾರ್ ಹಾಗೂ ಸ್ಟಾರ್ಸ್ ಫ್ಯಾನ್ಸ್ ನಡುವೆ ವಾರ್ ಹೊಸದೇನು ಅಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅದು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ನೆಚ್ಚಿನ ನಟನನ್ನು ಹಾಡಿ ಹೊಗಳುವ ಭರದಲ್ಲಿ ಮತ್ತೊಬ್ಬ ನಟನನ್ನು ಹಿಯ್ಯಾಳಿಸಿ ಕೆಲವರು ಮಾತನಾಡುತ್ತಿದ್ದಾರೆ. ಕೆಟ್ಟದಾಗಿ ಕಾಮೆಂಟ್ ಮಾಡುವುದು, ಟ್ರೋಲ್ ಮಾಡುವುದು ಎಲ್ಲೆ ಮೀರುತ್ತಿದೆ. ಕಲಾವಿದರ ಕುಟುಂಬದವರ ಬಗ್ಗೆ ಕೂಡ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಸ್ಟಾರ್ ನಟರೇ ಬ್ರೇಕ್ ಹಾಕಬೇಕು. ಆ ಕೆಲಸ ಯಶ್ ಮಾತ್ರ ಮಾಡ್ತಿದ್ದಾರೆ.
ಅಭಿಮಾನಿಗಳ ಹೆಸರಿನಲ್ಲಿ ಕೆಲವರು ಹದ್ದು ಮೀರಿ ವರ್ತಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡ್ಕೊಂಡು ಹುಚ್ಚಾಟ ಮೆರೆಯುತ್ತಿದ್ದಾರೆ. ತಮ್ಮ ನಟನ ಬಗ್ಗೆ ಮಾತನಾಡಿದ್ರೆ ನೇರವಾಗಿಯೇ ಬೆದರಿಕೆ ಹಾಕುವುದು, ಕೆಟ್ಟ ಪದಗಳಿಂದ ನಿಂದಿಸುವ ಕೆಲಸ ಮಾಡ್ತಿದ್ದಾರೆ. ಇಂತಹ ಅಂಧಾಭಿಮಾನಿಗಳಿಗೆ ಅವರ ನೆಚ್ಚಿನ ನಟರೇ ಬುದ್ಧಿ ಹೇಳಬೇಕಿದೆ. ನಟಿ ರಮ್ಯಾ ಕೂಡ ಈ ಹಿಂದೆ ಈ ಬಗ್ಗೆ ಮಾತನಾಡಿದ್ದರು. ಇತ್ತೀಚೆಗೆ ಕನ್ನಡದಲ್ಲಿ ಯಶ್, ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ನಡುವೆ ಭಾರೀ ತಿಕ್ಕಾಟ ನಡೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಕೆಸರೆರಚಾಟ ನಡೀತಿದೆ. ಆದರೆ ಅವರ ಅಭಿಮಾನಿಗಳು ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲ.
ರಜತ್ ಶರ್ಮಾ ಅವರ ಪ್ರಸಿದ್ಧ ರಾಷ್ಟ್ರೀಯ ಟಾಕ್ ಶೋ Aap Ki Adalat ಕಾರ್ಯಕ್ರಮದಲ್ಲಿ ನಟ ಯಶ್ ಭಾಗವಹಿಸಿದ್ದರು. ಈ ವೇಳೆ ಅಭಿಮಾನಿಗಳ ಬಗ್ಗೆ ಸಾಕಷ್ಟು ವಿಚಾರಗಳನ್ನು ಅವರು ಮಾತನಾಡಿದ್ದರು. "ನನ್ನ ಫ್ಯಾನ್ಸ್ ಹೋಗಿ ಬೇರೆ ನಟರನ್ನು ಬೈದ್ರೆ, ತುಚ್ಚವಾಗಿ ಮಾತನಾಡಿದ್ರೆ ಅವ್ರು ನನ್ನ ಅಭಿಮಾನಿಗಳಲ್ಲ. ಬೇರೆ ನಟನಿಗೆ ಗೌರವ ಕೊಡದಿದ್ದರೆ ನೀನು ನನ್ನ ಅಭಿಮಾನಿಯಲ್ಲ. ನನಗೆ ಯಾರಾದ್ರು ಕೆಟ್ಟದಾಗಿ ಮಾತನಾಡಿದ್ರೆ ಬಿಟ್ಟುಬಿಡಿ ಪರವಾಗಿಲ್ಲ, ಆದ್ರೆ ನೀನು ನನ್ನ ಅಭಿಮಾನಿ ಎಂದು ಹೇಳಿಕೊಂಡು ಹೋಗಿ ಬೇರೆಯವರ ಬಗ್ಗೆ ತಪ್ಪಾಗಿ ಮಾತನಾಡಬೇಡ ಎಂದು ಯಶ್ ಹೇಳಿದ್ದರು.
ನಿಜಕ್ಕೂ ಯಶ್ ಮಾತಿನಲ್ಲಿ ಸತ್ಯ ಇದೆ. ಒಬ್ಬರನ್ನು ಮತ್ತೊಬ್ಬರು ಬೈಯುತ್ತಾ ಹೋದ್ರೆ ಫ್ಯಾನ್ಸ್ ವಾರ್‌ಗೆ ಎನ್ನುವುದಕ್ಕೆ ಕೊನೆ ಇರುವುದಿಲ್ಲ. ಹಾಗಾಗಿ ಇದಕ್ಕೆ ಬ್ರೇಕ್ ಹಾಕಲೇಬೇಕು. ಆ ಕೆಲಸ ಸ್ಟಾರ್ ನಟರಿಂದಲೇ ಆಗಬೇಕು. ಆದರೆ ದರ್ಶನ್ ಹಾಗೂ ಸುದೀಪ್ ತಮ್ಮ ಅಭಿಮಾನಿಗಳ ವಿಚಾರದಲ್ಲಿ ನೇರವಾಗಿ ಯಾವತ್ತೂ ಈ ಬಗ್ಗೆ ಮಾತನಾಡಿಲ್ಲ. ಪರೋಕ್ಷವಾಗಿ ಫ್ಯಾನ್ಸ್ ವಾರ್ ಅನ್ನು ಸಮರ್ಥಿಸಿಕೊಂಡಿದ್ದಾರೆ. ಅದಕ್ಕೆ ಅವರು ಹಿಂದಿನ ಸಂದರ್ಶನಗಳಲ್ಲಿ ಆಡಿರುವ ಮಾತುಗಳನ್ನು ಕೇಳಬೇಕು. ಯಶ್ ಹೇಳಿಕೆ ಸದ್ದು ಮಾಡ್ತಿದ್ದಂತೆ ಫ್ಯಾನ್ಸ್ ವಾರ್ ಬಗ್ಗೆ ದರ್ಶನ್ ಹಾಗೂ ಸುದೀಪ್ ಹೇಳಿಕೆ ವೈರಲ್ ಆಗ್ತಿದೆ.
ಫ್ಯಾನ್ ವಾರ್ ಬಗ್ಗೆ ಕೇಳಿದ ಪ್ರಶ್ನೆಗೆ "ಎರಡು ಕೈಯಲ್ಲಿ ಹೊಡೆದ್ರೆ ಚಪ್ಪಾಳೆ. ಒಬ್ರು ಮಾಡಲ್ಲ. ಇವರು ಸುಮ್ಮನಿದ್ರೆ ಅವ್ರು ಸುಮ್ಮನಾಗ್ತಾರೆ. ಒಬ್ಬರಿಗೊಬ್ಬರು ಬೇಕೇ ಬೇಕು" ಎಂದು ದರ್ಶನ್ ಹೇಳಿದ್ದರು. ಇನ್ನು ಕೆಲ ವರ್ಷಗಳ ಹಿಂದೆ ಸುದೀಪ್ ಹಾಗೂ ಯಶ್ ಅಭಿಮಾನಿಗಳ ನಡುವೆ ಕಿರಿಕ್ ಆಗಿತ್ತು. ಸುದೀಪ್ ಅವರನ್ನು 'ಸರ್' ಎಂದು ಯಶ್ ಕರೆಯಲಿಲ್ಲ. ಅವರಿಗೆ ಗೌರವ ಕೊಡಲಿಲ್ಲ ಎಂದು ಕಿಚ್ಚನ ಫ್ಯಾನ್ಸ್ ಕೆಂಡ ಮಂಡಲವಾಗಿದ್ದರು. ಇದೇ ವಿಚಾರದ ಬಗ್ಗೆ ಸುದೀಪ್ ಪ್ರತಿಕ್ರಿಯಿಸಿದ್ದರು.
"ನನ್ನ ಕರ್ತವ್ಯ ನಾನು ಮಾಡಿದ್ದೀನಿ, ಫ್ಯಾನ್ಸ್ ಅವ್ರ ಕರ್ತವ್ಯ ಮಾಡಿದ್ದಾರೆ. ಯಶ್ ನನ್ನನ್ನು ಸುದೀಪ್ ಎಂದು ಕರೆದಿದ್ದು ಬೇಜಾರ್ ಆಯ್ತು ಅಂತಲ್ಲ. ಹಾಗಂತ ಯಾರು ನನ್ನ ಪರ ದನಿ ಎತ್ತಿದ್ರೋ ಅವ್ರನ್ನ ರಾಂಗ್ ಎನ್ನುವುದು ನನ್ನ ತಪ್ಪಾಗುತ್ತೆ" ಎಂದು ಸುದೀಪ್ ಹೇಳಿದ್ದರು. ಫ್ಯಾನ್ ವಾರ್ ವಿಚಾರದಲ್ಲಿ ಸುದೀಪ್ ಹಾಗೂ ದರ್ಶನ್ ಇಬ್ಬರಿಗಿಂತ ಯಶ್ ಬಹಳ ಪ್ರಬುದ್ಧವಾಗಿ ಮಾತನಾಡಿದ್ದಾರೆ. ಸ್ಟಾರ್ ನಟರು ಮನಸ್ಸು ಮಾಡಿದ್ರೆ ಫ್ಯಾನ್ಸ್ ವಾರ್‌ಗೆ ಕೊಂಚ ಮಟ್ಟಿಗೆ ಕಡಿವಾಣ ಹಾಕಬಹುದು.
ಹೈದರಾಬಾದ್‌ನಲ್ಲಿ ನಡೆದ 'ಟಾಕ್ಸಿಕ್' ಸಿನಿಮಾ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಕೂಡ ಯುವ ಜನತೆಯನ್ನು ಉದ್ದೇಶಿಸಿ ಯಶ್ ಮಾತನಾಡಿದ್ದರು. ಸಿನಿಮಾವನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ನಾವೇನು ದೊಡ್ಡದಾಗಿ ಮಾಡಿಲ್ಲ. ನೀವು ನಿಮ್ಮ ಜೀವನದಲ್ಲಿ ಏನು ಸಾಧಿಸಬೇಕು ಎನ್ನುವುದರ ಕಡೆ ಗಮನಹರಿಸಿ. ದೊಡ್ಡ ಕನಸು ಕಂಡು ಅದನ್ನು ನನಸು ಮಾಡಿಕೊಳ್ಳಲು ಶ್ರಮವಹಿಸಿ ಎಂದು ಕಿವಿಮಾತು ಹೇಳಿದ್ದರು.