ಮೈಸೂರಿನ ಪಡುವಾರಹಳ್ಳಿಯ ನವೀನ್ ಕುಮಾರ್ ಗೌಡ ಇವತ್ತು ರಾಕಿಂಗ್ ಸ್ಟಾರ್ ಅಷ್ಟೇ ಅಲ್ಲ ಪ್ಯಾನ್ ಇಂಡಿಯಾ ಸ್ಟಾರ್.. 'ರಾಮಾಯಣ' ಸಿನಿಮಾ ಮೂಲಕ ಮತ್ತೊಮ್ಮೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶ್ ದರ್ಬಾರ್ ನಡೆಸುತ್ತಿದ್ದಾರೆ. ಕೆಎಸ್ಆರ್ಟಿಸಿ ಬಸ್ ಡ್ರೈವರ್ ಮಗ ನವೀನ್ ಕುಮಾರ್ ಇವತ್ತು ನೂರಾರು ಕೋಟಿ ಆಸ್ತಿ ಸಂಪಾದಿಸಿದ್ದಾರೆ.
ಮನೆಬಿಟ್ಟು ಬೆಂಗಳೂರಿಗೆ ಬಂದು 'ಬೆನಕ' ನಾಟಕ ತಂಡ ಸೇರಿದ್ದು ಬಳಿಕ ಚಿತ್ರರಂಗ ಪ್ರವೇಶಿಸಿದ್ದು ಗೊತ್ತೇಯಿದೆ. ಹಂತ ಹಂತವಾಗಿ ಹೀರೊ ಆಗಿ ಒಂದೊಂದೇ ಸಿನಿಮಾದಲ್ಲಿ ನಟಿಸುತ್ತಾ ತನ್ನ ಪರಿಶ್ರಮದ ಮೂಲಕ ಇವತ್ತು ಸೂಪರ್ ಸ್ಟಾರ್ ಪಟ್ಟಕ್ಕೇರಿದ್ದಾರೆ. ಅಂದು ಹೀಗೆ ಏಕಾಏಕಿ ಮನೆ ಬಿಟ್ಟು ಯಶ್ ಬೆಂಗಳೂರಿಗೆ ಓಡಿ ಬರಲು ಕಾರಣವಾಗಿದ್ದು ಒಂದು ತಮಿಳು ಸಿನಿಮಾ. ಆ ಸಿನಿಮಾ 5 ಬಾರಿ ನೋಡಿದ್ದರಂತೆ. ಈ ವಿಚಾರವನ್ನು ಅದೇ ಚಿತ್ರದ ನಿರ್ಮಾಪಕ ಎ. ಎಂ ರತ್ನಂ ಬಳಿ ಯಶ್ ಹೇಳಿಕೊಂಡಿದ್ದಾರೆ. ನಿರ್ಮಾಪಕರು ಸಂದರ್ಶನವೊಂದರಲ್ಲಿ ಆ ವಿಚಾರ ಬಹಿರಂಗಪಡಿಸಿದ್ದಾರೆ.
ಶಂಕರ್ ನಿರ್ದೇಶನದ 'ಬಾಯ್ಸ್' ಚಿತ್ರವನ್ನು ಎ. ಎಂ ರತ್ನಂ ನಿರ್ಮಿಸಿದ್ದರು. ಸಿದ್ದಾರ್ಥ್, ಜೆನಿಲಿಯಾ, ತಮನ್, ಭರತ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಹದಿಹರೆಯದ ವಯಸ್ಸಿನಲ್ಲಿ ಮಾಡುವ ತಪ್ಪು ಮುಂದೆ ಏನೆಲ್ಲಾ ಸಮಸ್ಯೆ ತಂದೊಡ್ಡಬಹುದು ಎನ್ನುವ ಸಂದೇಶ ಆ ಚಿತ್ರದಲ್ಲಿತ್ತು. ವಿಶಾಲ್ ಚಿತ್ರರಂಗ ಪ್ರವೇಶಿಸಿ 25 ವರ್ಷ ಪೂರೈಸಿದ ಸಮಯದಲ್ಲಿ ಒಂದು ಕಾರ್ಯಕ್ರಮ ನಡೀತು. ಆಗ ಯಶ್, ಮೋಹನ್ ಲಾಲ್ ಸೇರಿ ಸಾಕಷ್ಟು ಗಣ್ಯರು ಭಾಗವಹಿಸಿದ್ದರು. ಅದೇ ಸಮಯದಲ್ಲಿ ಯಶ್ ತಮ್ಮ 'ಕೆಜಿಎಫ್' ಚಿತ್ರದ ಟ್ರೈಲರ್ ಅನ್ನು ನಮಗೆಲ್ಲಾ ತೋರಿಸಿದ್ದರು ಎಂದು ನಿರ್ಮಾಪಕ ಎ. ಎಂ ರತ್ನಂ ಮೆಲುಕು ಹಾಕಿದ್ದಾರೆ.
ಅವತ್ತು ರಾತ್ರಿ ಊಟದ ಸಮಯದಲ್ಲಿ ಯಶ್ ಬಂದು ನನಗೂ, ಶಂಕರ್ ಸರ್ಗೂ ಮೊಬೈಲ್ನಲ್ಲಿ 'ಕೆಜಿಎಫ್' ಚಿತ್ರದ ಟ್ರೈಲರ್ ತೋರಿಸಿದ್ರು.. ಬಳಿಕ ಮಾತನಾಡಿ "ಸರ್ ನಿಮ್ಮ ಬಾಯ್ಸ್ ಚಿತ್ರವನ್ನು ಚಿತ್ರಮಂದಿರದಲ್ಲಿ ಐದು ಬಾರಿ ನೋಡಿದ್ದೆ.. ಆ ಸಿನ್ಮಾ ನೋಡಿ ನೋಡಿ ಮನೆಬಿಟ್ಟು ಓಡಿ ಬಂದೆ.. ಬಳಿಕ ಹೀರೋ, ನಿಮ್ಮ 'ಬಾಯ್ಸ್' ಸಿನಿಮಾ ನೋಡಿ ಸ್ಫೂರ್ತಿ ಪಡೆದಿದ್ದೆ" ಅಂದಿದ್ರು.. ಆ ಚಿತ್ರದಲ್ಲಿ ಕೂಡ ಮನೆಬಿಟ್ಟು ಬಂದ ಹುಡುಗರು ಮ್ಯೂಸಿಕ್ ಬ್ಯಾಂಡ್ ಮಾಡಿ ಗೆಲ್ಲುವ ಕಥೆಯಿತ್ತು ಎಂದು ರತ್ನಂ ವಿವರಿಸಿದ್ದಾರೆ.