'ಟಾಕ್ಸಿಕ್' ಬಳಿಕ ಯಶ್ ಮುಂದಿನ ಸಿನಿಮಾ ಯಾವ್ದು ಎನ್ನುವ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಸದ್ಯ 'ರಾಮಾಯಣ' ಸಿನಿಮಾ ಬಿಡುಗಡೆ ಆಗಬೇಕಿದೆ. ಎರಡು ಭಾಗಗಳಾಗಿ ಈ ಸಿನಿಮಾ ತೆರೆಗೆ ಬರಲಿದೆ. ಆ ನಂತರ ಬೇರೆ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ. ಈಗಾಗಲೇ ಕೆಲ ನಿರ್ದೇಶಕರು ಅವರಿಗೆ ಕಥೆ ಹೇಳಿದ್ದಾರೆ. ಆದರೆ ಯಾವುದು ಫೈನಲ್ ಆಗಿಲ್ಲ.

ಹೇಮಂತ್ ರಾವ್, ತಮಿಳು ನಿರ್ದೇಶಕ ಮಿತ್ರನ್, ಬಾಲಿವುಡ್ ನಿರ್ದೇಶಕ ಮೋಹಿತ್ ಸೂರಿ ಸೇರಿದಂತೆ ಕೆಲ ನಿರ್ದೇಶಕ ಹೆಸರು ಕೇಳಿಬರ್ತಿದೆ. ಇದೆಲ್ಲದರ ನಡುವೆ 'ಅಯೋಗ್ಯ' ಸಿನಿಮಾ ನಿರ್ದೇಶನ ಮಾಡಿದ್ದ ಮಹೇಶ್ ನಿರ್ದೇಶನದಲ್ಲಿ ಯಶ್ ನಟಿಸ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಆದರೆ ಇದು ಕೇವಲ ವದಂತಿ ಎನ್ನುವುದು ಗೊತ್ತಾಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸುಖಾಸುಮ್ಮನೆ ಇಂತಾದೊಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.

ಮಹೇಶ್ ನಿರ್ದೇಶನದ 'ಅಯೋಗ್ಯ'-2 ಸಿನಿಮಾ ಹಿಟ್ ಆಗಿದೆ. ಸಿನಿಮಾ ಅರ್ಧ ಶತಕ ಬಾರಿಗೆ ಗಮನ ಸೆಳೆದಿದೆ. 'ಅಯೋಗ್ಯ' ಹಾಗೂ 'ಮದಗಜ' ಚಿತ್ರಗಳನ್ನು ಮಹೇಶ್ ಕಟ್ಟಿಕೊಟ್ಟಿದ್ದರು. ಬಳಿಕ ಅಭಿಷೇಕ್ ಅಂಬರೀಶ್ ಕಾಂಬಿನೇಷನ್ ಸಿನಿಮಾ ಮಾಡಲು ಯತ್ನಿಸಿದ್ದರು. ಅದು ಸಾಧ್ಯವಾಗಿರಲಿಲ್ಲ. ಬಳಿಕ 'ಅಯೋಗ್ಯ'-2 ಚಿತ್ರ ಮಾಡಿ ಸಕ್ಸಸ್ ಕಂಡಿದ್ದಾರೆ. ಯಶ್ ಜೊತೆ ನಾನು ಸಿನಿಮಾ ಮಾಡ್ತೀನಿ ಎನ್ನುವುದೆಲ್ಲಾ ಬರೀ ವದಂತಿ ಎಂದು ಸಿನಿ ಸಮಾಚಾರ ವೆಬ್‌ಸೈಟ್‌ಗೆ ಮಹೇಶ್ ಪ್ರತಿಕ್ರಿಯಿಸಿದ್ದಾರೆ.

'ಟಾಕ್ಸಿಕ್' ಸಿನಿಮಾ ಸೋತಿದೆ. ಯಶ್ ಪ್ರಯತ್ನಕ್ಕೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಿಗಲಿಲ್ಲ. ಅದಕ್ಕಿಂತ 'ಅಯೋಗ್ಯ'-2 ಸಿನಿಮಾ ಚೆನ್ನಾಗಿದೆ. ಯಶ್ ದೊಡ್ಡ ಸಿನಿಮಾ ಬಿಟ್ಟು 'ಅಯೋಗ್ಯ'-2 ರೀತಿಯ ಒಂದು ಹಳ್ಳಿಸೊಗಡಿನ ಸಿನಿಮಾ ಮಾಡ್ಬೇಕು ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದರು. ಅದು ವೈರಲ್ ಆಗಿ ಯಶ್ ಜೊತೆ ಮಹೇಶ್ ಸಿನಿಮಾ ಮಾಡ್ತಾರೆ ಎನ್ನುವ ವದಂತಿ ಹರಡಿದೆ.