'ರಾಮಾಯಣ' ಸಿನಿಮಾ ಪ್ರಚಾರ ಜೋರಾಗಿದೆ. ಸದ್ಯ ಲಂಡನ್‌ನಲ್ಲಿ ಚಿತ್ರತಂಡ ಬೀಡುಬಿಟ್ಟಿದೆ. ಪ್ರೀಮಿಯರ್ ಶೋಗಳಲ್ಲಿ ಭಾಗವಹಿಸಿ ಅಲ್ಲಿನ ಪ್ರೇಕ್ಷಕರ ಜೊತೆ ಸಿನಿಮಾ ನೋಡುತ್ತಿದ್ದಾರೆ. ಅಲ್ಲಿನ ಜನಪ್ರಿಯ ಯೂಟ್ಯೂಬ್ ಚಾನಲ್ ಸಂದರ್ಶನಗಳಲ್ಲಿ ಯಶ್, ರಣ್‌ಬೀರ್, ಸಾಯಿ ಪಲ್ಲವಿ ಮಾತನಾಡುತ್ತಿದ್ದಾರೆ. ಎಲ್ಲೆ ಹೋದರೂ ಯಶ್ ತಾವು ಕನ್ನಡಿಗ ಎಂದು ಪದೇ ಪದೆ ಸಾರಿ ಹೇಳುತ್ತಿದ್ದಾರೆ.

ಹಾಲಿವುಡ್ ಇರಲಿ ಯೂರೋಪ್ ಇರಲಿ ಯಶ್ ಎಲ್ಲೇ ಹೋದರೂ ನಾನು ಕನ್ನಡಿಗ ಎಂದು ಎದೆ ತಟ್ಟಿ ಹೇಳುತ್ತಿದ್ದಾರೆ. ನಾನು ಕನ್ನಡ ಚಿತ್ರರಂಗದಿಂದ ಬಂದವನು ಎನ್ನುತ್ತಿದ್ದಾರೆ. ಎಲ್ಲರಿಗೂ ನಮಸ್ಕಾರ ಎಂದು ಲಾಸ್‌ ವೇಗಾಸ್‌ನಲ್ಲಿ ನಡೆದ ಪ್ರೀಮಿಯರ್ ಶೋ ವೇಳೆ ವೇದಿಕೆಯಲ್ಲಿ ಯಶ್ ಮಾತನಾಡಿದ್ದರು. ಬಳಿಕ ಅಲ್ಲಿ ಕೆಲ ಸಂದರ್ಶನಗಳಲ್ಲಿ ಯಶ್ ಭಾಗಿ ಆಗಿದ್ದರು. ಅದೇ ರೀತಿ ಲಾಸ್ ಏಂಜಲೀಸ್‌ನ ಖ್ಯಾತ ಟಿಕ್ ಟಾಕರ್, ಯೂಟ್ಯೂಬರ್ ಸ್ಟ್ರಾ ಹ್ಯಾಟ್ ಗೂಫಿ ಪಾಡ್‌ಕಾಸ್ಟ್‌ನಲ್ಲಿ ರಣ್‌ಬೀರ್, ಸಾಯಿಪಲ್ಲವಿ ಹಾಗೂ ಯಶ್ ಭಾಗಿ ಆಗಿದ್ದರು. ಆ ಸಂದರ್ಶನ ಈಗ ಅಪ್‌ಲೋಡ್ ಆಗಿದೆ.

'ರಾಮಾಯಣ' ಸಿನಿಮಾ, ನಮ್ಮ ಪುರಾಣಗಳು, ಆಚಾರ ವಿಚಾರ, ಭಾರತದ ವಿವಿಧ ಚಿತ್ರರಂಗಗಳು ಹೀಗೆ ಸಾಕಷ್ಟು ಸಂಗತಿಗಳನ್ನು ಯಶ್ ಮಾತನಾಡಿದ್ದಾರೆ. ನಾನು ಕನ್ನಡಿಗ, ಕನ್ನಡ ಚಿತ್ರರಂಗದಿಂದ ಬಂದವನು ಎಂದು ಹೇಳಿದ್ದಾರೆ. 'ಮರಕ್ಕಿಂತ ಮರ ದೊಡ್ಡದು' ಎಂದು ಕನ್ನಡ ನುಡಿಗಟ್ಟನ್ನು ಹೇಳಿದ್ದಾರೆ. ನಿರೂಪಕ ಸ್ಟ್ರಾ ಹ್ಯಾಟ್ ಗೂಫಿಗೆ ಕನ್ನಡದ ಕೆಲ ಸಿನಿಮಾಗಳನ್ನು ನೋಡುವಂತೆ ಸಲಹೆ ನೀಡಿದ್ದಾರೆ.

ಶ್ರೀರಾಮ ಹಾಗೂ ರಾವಣ ಪಾತ್ರಗಳ ಬಗ್ಗೆ ಹೇಳುತ್ತಾ ಯಶ್ 'ಮರಕ್ಕಿಂತ ಮರ ದೊಡ್ಡದು' ಎನ್ನುವಂತೆ ಒಬ್ಬರಿಗಿಂತ ಒಬ್ಬರು ದೊಡ್ಡವರು ಇರ್ತಾರೆ. ಹಾಗಾಗಿ ಅಹಂಭಾವ ಇರಬಾರದು. ಹೊರಗಿನ ದೊಡ್ಡ ಪ್ರಪಂಚಕ್ಕಿಂತ ನಮ್ಮೊಳಗಿನ ಒಂದು ಪ್ರಪಂಚವನ್ನು ಕಂಡುಕೊಳ್ಳಬೇಕು, ಬ್ರಹ್ಮಾಂಡದಲ್ಲಿ ಮನುಷ್ಯ ಕೇವಲ ಸಣ್ಣ ಕಣ ಅಷ್ಟೆ ಎಂದು ನಮ್ಮ ಪುರಾಣ ಶಾಸ್ತ್ರಗಳಲ್ಲಿ ಹೇಳಿದೆ ಎಂದು ಯಶ್ ವಿವರಿಸಿದ್ದಾರೆ.

ನಿಮಗೆ ಬಹಳ ಸ್ಫೂರ್ತಿ ತುಂಬಿದ ಪರಿಣಾಮ ಬೀರಿದ ಸಿನಿಮಾಗಳ ಪಟ್ಟಿಕೊಡಿ ಎಂದು ನಿರೂಪಕ ಸ್ಟ್ರಾ ಹ್ಯಾಟ್ ಗೂಫಿ ಕೇಳಿದ್ದಾರೆ. ಯಶ್, ರಣ್‌ಬೀರ್, ಸಾಯಿಪಲ್ಲವಿ ಮೂವರು ತಮ್ಮ ನೆಚ್ಚಿನ ಸಿನಿಮಾಗಳ ಹೆಸರಗಳನ್ನು ಹೇಳಿದ್ದಾರೆ. ರಣ್‌ಬೀರ್ ಮಾತನಾಡಿ "ಹಿಂದಿಯಲ್ಲಿ 'ಶ್ರೀ ಚಾರ್ ಸೌ ಬೀಸ್' ನನ್ನ ಇಷ್ಟದ ಸಿನಿಮಾ" ಎಂದಿದ್ದಾರೆ. ಇಟಾಲಿಯನ್ ಸಿನಿಮಾ 'ಲೈಫ್ ಈಸ್ ಬ್ಯೂಟಿಫುಲ್', ಹಾಲಿವುಡ್‌ನಲ್ಲಿ 'ET', 'ಹೋಮ್ ಅಲೋನ್', 'ಬ್ರೇವ್ ಹಾರ್ಟ್' ಸಿನಿಮಾಗಳ ಹೆಸರು ಹೇಳಿದ್ದಾರೆ.

ಯಶ್ ಮಾತನಾಡಿ ನಾನು ಸಿನಿಮಾಗಳಿಂದ ಬಹಳ ಪ್ರಭಾವಿತನಾಗಿದ್ದೀನಿ.. 'ಸ್ಕಾರ್‌ಫೇಸ್', 'ಗಾಡ್‌ಫಾದರ್', 'ಹೀಟ್ ' ಹೀಗೆ ಹಾಲಿವುಡ್ ಗ್ಯಾಂಗ್‌ಸ್ಟರ್ ಸಿನಿಮಾಗಳ ಹೆಸರು ಹೇಳಿದ್ದಾರೆ. ಭಾರತದಲ್ಲಿ ಸಾಕಷ್ಟು ಸಿನಿಮಾಗಳಿವೆ. ನಾನು ಕನ್ನಡ ಸಿನಿಮಾಗಳನ್ನು ನೋಡಿ ಬೆಳೆದವನು. ಭಾರತದಲ್ಲಿ ಸಾಕಷ್ಟು ಭಾಷೆಗಳು, ಸಾಕಷ್ಟು ಚಿತ್ರರಂಗಗಳಿವೆ. ಅಲ್ಲಿ ಬೇರೆ ಬೇರೆ ಸಿನಿಮಾಗಳು ನಿರ್ಮಾಣವಾಗುತ್ತವೆ.. ನಟನಾಗಿ ನನಗೆ ಸಾಕಷ್ಟು ಸಿನಿಮಾಗಳು ಪ್ರೇರಣೆಯಾಗಿದೆ. ರಾಮಾಯಣ, ಮಹಾಭಾರತದಿಂದ ಕೂಡ ಸಾಕಷ್ಟು ಕಲಿತಿದ್ದೇನೆ. ಕನ್ನಡದಲ್ಲಿ 'ಒಂದು ಮುತ್ತಿನ ಕಥೆ' ಹಾಗೂ 'ಗಂಧದಗುಡಿ' ಅದ್ಭುತ ಸಿನಿಮಾಗಳು. ನಾನು ಬೇಕಾದರೆ ಇಂತಹ ಸಾಕಷ್ಟು ಸಿನಿಮಾಗಳ ಪಟ್ಟಿ ಕೊಡಬಲ್ಲ ಎಂದಿದ್ದಾರೆ.

ನಿರೂಪಕ ಸ್ಟ್ರಾ ಹ್ಯಾಟ್ ಗೂಫಿ ಮಾತನಾಡಿ ಸಂದರ್ಶನದ ಬಳಿಕ ನಿಮ್ಮ ಇಷ್ಟದ ಸಿನಿಮಾಗಳ ಪಟ್ಟಿ ಕೊಡಿ.. ಖಂಡಿತ ಆ ಸಿನಿಮಾಗಳನ್ನು ನಾನು ನೋಡಿ ಹೇಗಿದೆ ಎಂದು ಟಿಕ್‌ಟಾಕ್ ವೀಡಿಯೋ ಮಾಡಿ ಹೇಳ್ತೀನಿ ಎಂದಿದ್ದಾರೆ.