ಭಾರತ ಮಾತ್ರವಲ್ಲ, ವಿದೇಶಗಳಲ್ಲಿ ಕೂಡ 'ರಾಮಾಯಣ' ಸಿನಿಮಾ ಆರ್ಭಟ ಜೋರಾಗಿದೆ. ಈಗಾಗಲೇ 1400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿದೆ. 'ಧುರಂಧರ್' ಚಿತ್ರದ ದಾಖಲೆಯನ್ನು ಹಿಂದಿಕ್ಕಿದೆ. ನಿರ್ದೇಶನ, ಮೇಕಿಂಗ್, ಕಲಾವಿದರ ಅಭಿನಯ ಎಲ್ಲದರ ಬಗ್ಗೆ ಮೆಚ್ಚುಗೆ ವ್ಯಕ್ತವಾಗತ್ತಿದೆ. ರಾವಣನಾಗಿ ಯಶ್ ಆರ್ಭಟವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.

ಶ್ರೀರಾಮನಾಗಿ ರಣ್‌ಬೀರ್ ಕಪೂರ್ ಹಾಗೂ ಸೀತೆಮಾತೆಯಾಗಿ ಸಾಯಿಪಲ್ಲವಿ ಸಂಪೂರ್ಣವಾಗಿ ಪ್ರೇಕ್ಷಕರನ್ನು ಆವರಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇನ್ನುಳಿದಂತೆ ಮಂಡೋದರಿಯಾಗಿ ಕಾಜಲ್ ಅಗರ್‌ವಾಲ್ ಒಂದೆರಡು ದಿನಗಳಲ್ಲಿ ಬಂದು ಹೋಗುತ್ತಾರೆ. ವಿದ್ಯುಜ್ಜಿಹ್ವನಾಗಿ ವಿವೇಕ್ ಒಬೆರಾಯ್ ಹಾಗೂ ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್‌ ಇಬ್ಬರಿಗೂ ಹೆಚ್ಚು ಅವಕಾಶ ಸಿಕ್ಕಿದೆ. ದಶರಥನಾಗಿ ಅರುಣ್‌ ಗೋವಿಲ್, ಕೈಕೇಯಿ ಆಗಿ ಲಾರಾ ದತ್ತಾ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಇವರೆಲ್ಲರ ನಡುವೆ ಮ್ಯಾಜಿಕ್ ಮಾಡಿರುವುದು ಲಕ್ಷ್ಮಣ ಪಾತ್ರಧಾರಿ ರವಿದುಬೆ.

ಉತ್ತರಪ್ರದೇಶ ಮೂಲದ ರವಿ ದುಬೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಿ ಹೆಚ್ಚು ನಟಿಸಿದ್ದ ಇವರನ್ನು 'ರಾಮಾಯಣ' ರೀತಿಯ ದೊಡ್ಡ ಚಿತ್ರಕ್ಕೆ ಆಯ್ಕೆ ಮಾಡಿದಾಗ ಕೆಲವರು ಅಚ್ಚರಿಗೊಂಡಿದ್ದರು. ಆದರೆ ಎಲ್ಲರ ನಿರೀಕ್ಷೆ ಮೂಡಿ ರವಿ ದುಬೆ ಮ್ಯಾಜಿಕ್ ಮಾಡಿದ್ದಾರೆ. ಲಕ್ಷ್ಮಣನಾಗಿ ತಮ್ಮ ಅದ್ಭುತ ನಟನೆ ಮೂಲಕ ಗಮನ ಸೆಳೆದಿದ್ದಾರೆ. ಸಾಕಷ್ಟು ಜನ ಅವರ ನಟನೆಯನ್ನು ಕೊಂಡಾಡುತ್ತಿದ್ದಾರೆ. ಔಟ್ ಆಫ್‌ ದಿ ಬಾಕ್ಸ್ ಎನ್ನುವಂತೆ ರವಿ ದುಬೆ ಪ್ರೇಕ್ಷಕರ ಮನಗೆದ್ದಿದ್ದಾರೆ.

ರಾಮನ ಪಕ್ಕದ ಕೊಂಚ ಕಾಮಿಡಿ ಮಾಡುತ್ತಾ ರವಿ ದುಬೆ ಹೆಚ್ಚು ಅಂಕ ಗಿಟ್ಟಿಸಿಬಿಟ್ಟಿದ್ದಾರೆ. ಅವರ ದೈವಿಕ ಕಳೆ ಹಾಗೂ ಸ್ಕ್ರೀನ್‌ ಪ್ರಸೆನ್ಸ್ ಗಮನ ಸೆಳೆದಿದೆ. ಇನ್ನು ಸ್ವಲ್ಪ ಹೊತ್ತು ಅವರನ್ನು ತೆರೆಮೇಲೆ ನೋಡಲು ಪ್ರೇಕ್ಷಕರು ಬಯಸುವಂತಾಗಿದೆ. ಲಕ್ಷ್ಮಣ ಕಾಮಿಡಿ ಮಾಡ್ತಿದ್ನಾ ? ಇದು ಯಾಕೋ ಕೊಂಚ ಅತಿಯಾಯ್ತು ಎಂದು ಕೆಲವರು ಟೀಕಿಸುತ್ತಿದ್ದಾರೆ. ಅದೆಲ್ಲವನ್ನು ಮೀರಿ ತಮಗೆ ಕೊಟ್ಟ ಪಾತ್ರವನ್ನು ರವಿ ದುಬೆ ಸೊಗಸಾಗಿ ನಿಭಾಯಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಎರಡನೇ ಭಾಗದಲ್ಲಿ ಕೂಡ ಅವರ ಪಾತ್ರಕ್ಕೆ ಹೆಚ್ಚಿನ ಮಹತ್ವ ಇರಲಿದೆ.

ರಣ್‌ಬೀರ್ ಜೊತೆಗಿನ ರವಿ ದುಬೆ ಕೆಮೆಸ್ಟ್ರಿ, ಕಾಮಿಡಿ ಟೈಮಿಂಗ್, ಆಕ್ಷನ್ ಸೀಕ್ವೆನ್ಸ್ ಬಗ್ಗೆ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಸಿನಿಮಾ ಬಿಡುಗಡೆಯಾಗುವ ಮುನ್ನ ಯಾರೊಬ್ಬರು ಲಕ್ಷ್ಮಣನಾಗಿ ರವಿದುಬೆ ಇಷ್ಟು ಹೆಸರು ಮಾಡುತ್ತಾರೆ ಎಂದು ಯಾರು ಊಹಿಸಿರಲಿಲ್ಲ. ಮುಂದಿನ ಸಾಕಷ್ಟು ಅವಕಾಶಗಳು ಅವರಿಗೆ ಸಿಗುವುದರಲ್ಲಿ ಎರಡು ಮಾತಿಲ್ಲ. ರಾವಣನಾಗಿ ಗತ್ತು, ಗಾಂಭೀರ್ಯ ಹಾಗೂ ಆರ್ಭಟದ ಮೂಲಕ ಯಶ್ ಭಾರೀ ಮೆಚ್ಚುಗೆ ಗಳಿಸಿದ್ದಾರೆ. ಒಟ್ಟಾರೆ ಘಟಾನುಘಟಿಗಳ ನಡುವೆ ರವಿ ದುಬೆ ಕೊಂಚ ಹೆಚ್ಚು ಅಂಕ ಗಳಿಸಿದ್ದಾರೆ ಅಂದ್ರೆ ತಪ್ಪಾಗಲ್ಲ.