ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ನಿರೀಕ್ಷೆ ಹುಸಿ ಮಾಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಾಕ್ಸಾಫೀಸ್ ಶೇಕ್ ಮಾಡುತ್ತದೆ ಎಂದುಕೊಂಡಿದ್ದ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. 1000 ಕೋಟಿ ರೂ. ಕೊಳ್ಳೆ ಹೊಡೆಯುತ್ತದೆ ಎಂದುಕೊಂಡಿದ್ದ ಸಿನಿಮಾ 300 ಕೋಟಿ ರೂ. ಮಾತ್ರ ಗಳಿಕೆ ಕಂಡಿದೆ. ಬಹುತೇಕ ಕಡೆಗಳಲ್ಲಿ ಸಿನಿಮಾ ಪ್ರದರ್ಶನ ಮುಗಿಸಿದೆ.
'ಟಾಕ್ಸಿಕ್' ಸಿನಿಮಾ 1000 ಕೋಟಿ ರೂ. ಅಲ್ಲ 500 ಕೋಟಿ ರೂ. ಕಲೆಕ್ಷನ್ ಕೂಡ ಕಷ್ಟ ಎನ್ನುವಂತಾಗಿದೆ. ಇದೆಲ್ಲದರ ನಡುವೆ ಯಶ್ ಅಭಿಮಾನಿಯೊಬ್ಬರು ಅರ್ಧ ಮೀಸೆ ಬೋಳಿಸಿಕೊಂಡಿದ್ದಾರೆ. ಸಿನಿಮಾ ಬಿಡುಗಡೆ ದಿನ ಮಾಧ್ಯಮಗಳ ಮುಂದೆ ಸವಾಲು ಹಾಕಿದ್ದ ಯಶ್ ಅಭಿಮಾನಿ ಸವಾಲು ಸೋತಿದ್ದಾರೆ. ಅದನ್ನು ಒಪ್ಪಿಕೊಂಡು ಹೇಳಿದಂತೆ ಅರ್ಧ ಮೀಸೆ ತೆಗೆದಿದ್ದಾರೆ. 'ಟಾಕ್ಸಿಕ್' ಸಿನಿಮಾ 2000 ಕೋಟಿ ರೂ. ಕಲೆಕ್ಷನ್ ಮಾಡುತ್ತೆ. ಅದು ಸುಳ್ಳಾದ್ರೆ ನಾನು ಅರ್ಧ ಮೀಸೆ ಬೋಳಿಸಿಕೊಳ್ತೀನಿ ಎಂದು ಅವರು ಹೇಳಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈತ 'ಕೋಟೆ ಹುಡುಗ' ಗುರ್ತಿಸಿಕೊಂಡಿದ್ದಾರೆ.
ಸಿನಿಮಾ ಸೋಲುತ್ತಿದ್ದಂತೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದರು. ಈಗ ಹೇಳಿದಂತೆ ಮೀಸೆ ಬೋಳಿಸಿಕೊಳ್ತೀರಾ ಎಂದಿದ್ದರು. ಹಾಗಾಗಿ ನುಡಿದಂತೆ ಅರ್ಧ ಮೀಸೆ ತೆಗೆಯುತ್ತೇನೆ ಎಂದು ಕೋಟೆ ಹುಡುಗ ವೀಡಿಯೋ ಹಂಚಿಕೊಂಡಿದ್ದಾರೆ. ಪ್ರಚಾರಕ್ಕಾಗಿ ಹೀಗೆಲ್ಲಾ ಮಾಡ್ತಿದ್ದಾನೆ ಎಂದು ಅಣಕವಾಡುವವರಿಗೆ ಮತ್ತೊಂದು ವೀಡಿಯೋ ಮಾಡಿ ತಿರುಗೇಟು ನೀಡಿದ್ದಾರೆ. "ನಾನು ಪ್ರಚಾರಕ್ಕಾಗಿ ಹೀಗೆ ಮಾಡ್ತಿಲ್ಲ. 'ಟಾಕ್ಸಿಕ್' ಸಿನಿಮಾ ಬಿಡುಗಡೆಗೂ ಆರು ತಿಂಗಳು ಮುನ್ನ ನಾನು ಸವಾಲು ಹಾಕಿದ್ದೆ. ಅದೇ ಮಾತನ್ನು ಸಿನಿಮಾ ಬಿಡುಗಡೆ ದಿನ ಚಿತ್ರಮಂದಿರದ ಮುಂದೆ ಹೇಳಿದ್ದೆ.. ಈಗ ಹೇಳಿದಂತೆ ಮಾಡಿದ್ದೀನಿ. ನನಗೆ ಪ್ರಚಾರ ಬೇಕಿಲ್ಲ" ಎಂದು ವೀಡಿಯೋದಲ್ಲಿ ಹೇಳಿದ್ದಾರೆ.
ಆಗಸ್ಟ್ 26ರಂದು ತೆರೆಗೆ ಬಂದಿದ್ದ 'ಟಾಕ್ಸಿಕ್' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಕೆಲವರು ಅದ್ಭುತ ಸಿನಿಮಾ ಎಂದು ಪದೇ ಪದೆ ನೋಡಿದ್ದರು. ಕೆಲವರಿಗೆ ಸಿನಿಮಾ ಇಷ್ಟವಾಗಿರಲಿಲ್ಲ. ಆದರೆ ಒಂದು ವರ್ಗದವರು ಮಾತ್ರ ನೆಗೆಟಿವ್ ಕಾಮೆಂಟ್ ಮಾಡಿದ್ದರು. ಇನ್ನು ಚಿತ್ರಕ್ಕೆ ದೊಡ್ಡಮಟ್ಟದಲ್ಲಿ ಪೈರಸಿ ಕಾಟ ಎದುರಾಗಿತ್ತು. 3 ಲಕ್ಷಕ್ಕೂ ಅಧಿಕ ಪೈರಸಿ ಲಿಂಕ್ ತೆಗೆಸಿರುವುದಾಗಿ ಚಿತ್ರತಂಡದ ಸದಸ್ಯರೊಬ್ಬರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಸೆಪ್ಟೆಂಬರ್ 25ರಂದು 'ಟಾಕ್ಸಿಕ್' ಸಿನಿಮಾ ಓಟಿಟಿಗೆ ಬರುತ್ತೆ ಎನ್ನಲಾಗ್ತಿದೆ. ಜೀ ಸಂಸ್ಥೆ ಭಾರೀ ಮೊತ್ತಕ್ಕೆ ರೈಟ್ಸ್ ಕೊಂಡುಕೊಂಡಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಗೀತು ಮೋಹನ್ ದಾಸ್ ನಿರ್ದೇಶನದ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ನಿರ್ಮಾಣ ಮಾಡಿದ್ದರು. ನಯನತಾರಾ, ಕಿಯಾರಾ ಅಡ್ವಾನಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.