'ಟಾಕ್ಸಿಕ್' ಹಾಗೂ 'ರಾಮಾಯಣ' ಸರಣಿ ಸಿನಿಮಾಗಳ ಬಳಿಕ ಯಶ್ ಯಾವ ಚಿತ್ರದಲ್ಲಿ ನಟಿಸ್ತಾರೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ. ದೊಡ್ಡ ದೊಡ್ಡ ನಿರ್ದೇಶಕರು ರಾಕಿಂಗ್ ಸ್ಟಾರ್ ಜೊತೆ ಸಿನಿಮಾ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ. ಕೆಲವರು ಕಥೆ ಹೇಳಿದ್ದಾರೆ. ಆದರೆ ಯಾವುದು ಇನ್ನು ಫೈನಲ್ ಮಾಡಿಲ್ಲ.
ಸದ್ಯ ಯಶ್ ಜೊತೆ ಸಿನಿಮಾ ಮಾಡಲು ಸ್ಯಾಂಡಲ್ವುಡ್ನಿಂದ ಬಾಲಿವುಡ್ವರೆಗೆ ಫಿಲ್ಮ್ ಮೇಕರ್ ಕಾಯ್ತಿದ್ದಾರೆ. 'ಧುರಂಧರ್' ಸರಣಿ ಸಿನಿಮಾಗಳ ಬಳಿಕ ನಿರ್ದೇಶಕ ಆದಿತ್ಯಧರ್ ಕೂಡ ಸೈಲೆಂಟ್ ಆಗಿದ್ದಾರೆ. 'ಟಾಕ್ಸಿಕ್' ಸಿನಿಮಾ ನೋಡಿ ಆದಿತ್ಯಧರ್ ಮೆಚ್ಚಿದ್ದರು. ಹಾಗಾಗಿ ಇಬ್ಬರೂ ಸೇರಿ ಸಿನಿಮಾ ಮಾಡ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ.
ಬಹಳ ಹಿಂದೆಯೇ ಅಶ್ವತ್ಥಾಮ ಜೀವನವನ್ನಾಧರಿಸಿ ಆದಿತ್ಯಧರ್ ಸಿನಿಮಾ ಘೋಷಿಸಿದ್ದರು. ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಗಿತ್ತು. ಅದೇ ಚಿತ್ರವನ್ನು 'ಉರಿ' ನಿರ್ದೇಶಕ ಕೈಗೆತ್ತಿಕೊಳ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಇದೆಲ್ಲದರ ನಡುವೆ ಚಂದ್ರಗುಪ್ತ ಮೌರ್ಯ ಕಥೆಯನ್ನು ಆದಿತ್ಯಧರ್ ತೆರೆಗೆ ತರಲು ಪ್ರಯತ್ನ ನಡೆಸುತ್ತಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಯಶ್ ಕೂಡ ಈಗ ಪೌರಾಣಿಕ, ಐತಿಹಾಸಿಕ ಸಿನಿಮಾಗಳ ಕಡೆ ಮುಖ ಮಾಡಿದ್ದಾರೆ. ಇವರಿಬ್ಬರು ಕೈಜೋಡಿಸಿದ್ರೆ ಬಾಕ್ಸಾಫೀಸ್ ಶೇಕ್ ಆಗುವುದು ಗ್ಯಾರಂಟಿ.
ಭಾರತದ ಇತಿಹಾಸದಲ್ಲಿ ಚಂದ್ರಗುಪ್ತ ಮೌರ್ಯನನ್ನು ಮರೆಯೋಕೆ ಸಾಧ್ಯವಿಲ್ಲ. ಮೌರ್ಯ ಸಾಮ್ರಾಜ್ಯ ಕಟ್ಟಿ ಬೆಳೆಸಿದ ಆತನ ಶೌರ್ಯ ಪರಾಕ್ರಮದ ಬಗ್ಗೆ ಬಿಡಿಸಿ ಹೇಳಬೇಕಿಲ್ಲ. ಇನ್ನು ಚಂದ್ರಗುಪ್ತ ಮೌರ್ಯ ಹಾಗೂ ಚಾಣಕ್ಯನ ಸಾಹಸ, ಬುದ್ಧಿವಂತಿಕೆ ಮತ್ತು ಗುರಿಯ ಸಾಧನೆಗೆ ಇಬ್ಬರ ಹೋರಾಟದ ಕಥೆ ಸ್ಫೂರ್ತಿದಾಯಕ. ಇದೇ ಕಥೆಯನ್ನು ಅದಿತ್ಯಧರ್ ತೆರೆಗೆ ತರುವ ಪ್ರಯತ್ನ ಮಾಡ್ತಿದ್ದು ಯಶ್ ಹಾಗೂ ರಣ್ವೀರ್ ಸಿಂಗ್ ಇಬ್ಬರೂ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಇದು ಎಷ್ಟು ನಿಜವೂ ಎಷ್ಟು ಸುಳ್ಳೋ ನಿಜವಾಗಿಬಿಟ್ಟರೆ 2000 ಕೋಟಿ ರೂ. ಬಾಕ್ಸಾಫೀಸ್ ಕಲೆಕ್ಷನ್ ಕೂಡ ಕಷ್ಟ ಆಗುವುದಿಲ್ಲ.
ತಮಿಳು ನಿರ್ದೇಶಕ ಪಿ. ಎಸ್ ಮಿತ್ರನ್ ಕೂಡ ಯಶ್ ಅವರಿಗೆ ಕಥೆ ಹೇಳಿದ್ದಾರೆ. ಅದನ್ನು ಅವರು ಇಷ್ಟಪಟ್ಟಿದ್ದಾರಂತೆ. ಆದರೆ ಯಾವಾಗ ಸಿನಿಮಾ ಎನ್ನುವುದು ಗೊತ್ತಿಲ್ಲ. 'ಕೆಜಿಎಫ್- 3' ಸಿನಿಮಾ ಕೂಡ ಘೋಷಣೆಯಾಗಿದೆ. ಸದ್ಯಕ್ಕೆ ಈ ಸಿನಿಮಾ ಶುರುವಾಗುವ ಸುಳಿವು ಸಿಕ್ತಿಲ್ಲ. 'ಡ್ರ್ಯಾಗನ್' ಸಿನಿಮಾ ನಿರ್ದೇಶನದಲ್ಲಿ ಪ್ರಶಾಂತ್ ನೀಲ್ ಬ್ಯುಸಿಯಾಗಿದ್ದಾರೆ. ಬಳಿಕ 'ಸಲಾರ್-2' ಸಿನಿಮಾ ಕಟ್ಟಿಕೊಡಬೇಕಿದೆ. ಆ ಬಳಿಕ ರಾಕಿಭಾಯ್ ಕಥೆ ಮುಂದುವರೆಸೋಕೆ ಸಾಧ್ಯ. ಒಟ್ಟಾರೆ ಆದಿತ್ಯಧರ್ ನಿರ್ದೇಶನದ ಮಲ್ಟಿಸ್ಟಾರರ್ ಚಿತ್ರದಲ್ಲಿ ಯಶ್ ಹಾಗೂ ರಣ್ವೀರ್ ಜೊತೆಯಾಗ್ತಾರಾ ಕಾದು ನೋಡಬೇಕಿದೆ.