ವಿಜಯಲಕ್ಷ್ಮಿ ದರ್ಶನ್ ಹಾಗೂ ಧನ್ವೀರ್ ಗೌಡ ಜಟಾಪಟಿ ವಿಚಾರ ಇದೀಗ ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ವರೆಗೆ ಹೋಗಿ ತಲುಪಿದೆ. ಜೈಲಿನಿಂದಲೇ ಧನ್ವೀರ್ಗೆ ದರ್ಶನ್ ಎಚ್ಚರಿಕೆ ಕೊಟ್ಟಿದ್ದಾರೆ ಎನ್ನುವಂತೆ ಮಾಧ್ಯಮಗಳ ಮುಂದೆ ನಟ ಝೈದ್ ಖಾನ್ ಹೇಳಿದ್ದಾರೆ. ಇದು ಮುಂದೆ ದರ್ಶನ್ ಜಾಮೀನು ಅರ್ಜಿ ವಿಚಾರಣೆ ವೇಲೆ ಕಂಟಕವಾಗುತ್ತಾ ಎನ್ನುವ ಚರ್ಚೆ ಶುರುವಾಗಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದ ದರ್ಶನ್ ಷರತ್ತುಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಮತ್ತೆ ಸಮಸ್ಯೆಗೆ ಸಿಲುಕಿದ್ದರು. ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ರದ್ದಾಗಿ ಮತ್ತೆ ಜೈಲು ಸೇರುವಂತಾಗಿತ್ತು. ಮತ್ತೆ ಜಾಮೀನು ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಮೇ 15, 2026ರಂದು ಅರ್ಜಿ ವಜಾಗೊಳಿಸಿ ಒಂದು ವರ್ಷದವರೆಗೆ ಯಾವುದೇ ಸಾಮಾನ್ಯ ಜಾಮೀನು ಅರ್ಜಿ ಸಲ್ಲಿಸದಂತೆ ನಿರ್ಬಂಧ ವಿಧಿಸಿದೆ. ಮುಂದೆ ಜಾಮೀನು ಅರ್ಜಿ ಸಲ್ಲಿಸಿದರೂ ಜೈಲಿನಲ್ಲಿ ದರ್ಶನ್ ಹೇಗೆ ಇದ್ದಾರೆ ಎನ್ನುವುದನ್ನು ಕೋರ್ಟ್ ಪರಿಗಣಿಸುವ ಸಾಧ್ಯತೆಯಿದೆ.
"ಅವನಿಗೆ(ಧನ್ವೀರ್ ಗೌಡ) ಧಮ್ ಇದ್ರೆ ಹೊರಗೆ ಬಂದಾಗ ನನ್ನ ಫೇಸ್ ಮಾಡಲಿ" ಎಂದು ದರ್ಶನ್ ಹೇಳಿದ್ದಾಗಿ ಝೈದ್ ಖಾನ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಆಪ್ತರ ಇಂತಹ ಹೇಳಿಕೆಗಳೇ ದರ್ಶನ್ಗೆ ಮುಳುವಾಗಬಹುದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಹಣದ ವಿಚಾರಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಧನ್ವೀರ್ ಕುಟುಂಬದ ನಡುವೆ ಸಂಘರ್ಷ ಏರ್ಪಟ್ಟಿದೆ. ವಿಜಯಲಕ್ಷ್ಮಿ ವಿರುದ್ಧ ಧನ್ವೀರ್ ಗುರುತರ ಆರೋಪಗಳನ್ನು ಮಾಡಿದ್ದಾರೆ. ಈ ಬಗ್ಗೆ ದರ್ಶನ್ ಜೊತೆ ಚರ್ಚಿಸಲು ನಿನ್ನೆ(ಅಕ್ಟೋಬರ್ 27) ವಿಜಯಲಕ್ಷ್ಮಿ ಮತ್ತು ಝೈದ್ ಖಾನ್ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದರು.
"ದರ್ಶನ್ ಅಣ್ಣ ಧನ್ವೀರ್ಗೆ ವಾರ್ನಿಂಗ್ ಕೊಡೋಕೆ ಹೇಳಿದ್ದಾರೆ. ನಾನು ಒಳಗಡೆ ಇದ್ದೀನಿ ಅಂತ ನನ್ನ ಹೆಂಡತಿ, ಮಕ್ಕಳ ಬಗ್ಗೆ ಮಾತಾಡೋದು ತಪ್ಪು. ನನ್ನ ಫ್ಯಾಮಿಲಿ ಬಗ್ಗೆ ಮಾತಾಡೋಕೆ ಯಾರ್ಗೂ ಅಧಿಕಾರ ಇಲ್ಲ. ನಾನು ಹೊರಗೆ ಬಂದ್ಮೇಲೆ ಧೈರ್ಯ ಇದ್ದರೆ ನನ್ನ ಮುಂದೆ ಮಾತಾಡಲಿ. ಫೋನ್ ಮಾಡಿ ಮಾಧ್ಯಮಗಳ ಜೊತೆ ಮಾತನಾಡಿ ಸುಳ್ಳು ಮಾಹಿತಿ ಕೊಡುವುದು, ನನ್ನ ಅಭಿಮಾನಿಗಳಿಗೆ ತಪ್ಪು ಸಂದೇಶ ನೀಡುವುದು ಸರಿಯಲ್ಲ" ಎಂದು ದರ್ಶನ್ ಹೇಳಿದ್ದಾಗಿ ಝೈದ್ ಖಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.