10 ಕೋಟಿ ರೂ. ಹಣದ ವಿಚಾರಕ್ಕೆ ವಿಜಯಲಕ್ಷ್ಮಿ ದರ್ಶನ್ ಹಾಗೂ ಧನ್ವೀರ್ ಗೌಡ ನಡುವೆ ಕಿರಿಕ್ ಉಂಟಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಧನ್ವೀರ್ -ವಿಜಯಲಕ್ಷ್ಮಿ ಮಧ್ಯೆ 10 ಕೋಟಿ ರೂ. ಹಣ ವರ್ಗಾವಣೆ ಆಗಿದೆ ಎನ್ನಲಾಗ್ತಿದೆ. ಈ ಸಂಬಂಧ ಈಗ ವಕೀಲ ಪ್ರಶಾಂತ್ ಮೆಥಲ್ ಅವರು ಐಟಿ ಮತ್ತು ಇಡಿಗೆ ದೂರು ನೀಡಿದ್ದಾರೆ. ಇದು ದರ್ಶನ್ ಕುಟುಂಬ ಹಾಗೂ ಧನ್ವೀರ್ ಕುಟುಂಬಕ್ಕೆ ಹೊಸ ಸಂಕಷ್ಟ ತಂದೊಡ್ಡಿದೆ.
ಒಂದ್ಕಡೆ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದಾರೆ. ಜಾಮೀನು ಸಿಗದೇ ಪರದಾಡುವಂತಾಗಿದೆ. ಇತ್ತ ತಮ್ಮನಂತೆ ಇದ್ದ ಧನ್ವೀರ್ ಹಾಗೂ ವಿಜಯಲಕ್ಷ್ಮಿ ದರ್ಶನ್ ನಡುವೆ ಸಂಘರ್ಷ ಏರ್ಪಟ್ಟಿದೆ. ದರ್ಶನ್ನ ಜೈಲಿನಿಂದ ಹೊರಗಡೆ ಕರೆದುಕೊಂಡು ಬರಲು ವಿಜಯಲಕ್ಷ್ಮಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಧನ್ವೀರ್ ಕೂಡ ಆಕೆಯ ಬೆಂಬಲಕ್ಕೆ ನಿಂತಿದ್ದರು. ಆದರೆ ಉಲ್ಟಾ ಹೊಡೆದಿದ್ದಾರೆ. ನನ್ನ ನಿಷ್ಠೆ ದರ್ಶನ್ ಸರ್ಗೆ ಮಾತ್ರ ಎನ್ನುತ್ತಿದ್ದಾರೆ. ವಿಜಯಲಕ್ಷ್ಮಿ ವಿರುದ್ಧ ನಾನಾ ಆರೋಪಗಳನ್ನು ಮಾಡುತ್ತಿದ್ದಾರೆ.
ಅಕ್ಕ- ತಮ್ಮನ ರೀತಿ ಇದ್ದವರು ಇದ್ದಕ್ಕಿದಂತೆ ಯಾಕೆ ದೂರಾದರು. ಪರಸ್ಪರ ದೂರು ನೀಡುವ ಮಟ್ಟಕ್ಕೆ ಯಾಕೆ ಹೋದರು ಎನ್ನುವ ಪ್ರಶ್ನೆಗೆ 10 ಕೋಟಿ ರೂ. ಹಣದ ವ್ಯವಹಾರ ಕಾರಣ ಎನ್ನುವ ಮಾತುಗಳು ಕೇಳಿಬಂದಿದೆ. ದರ್ಶನ್ನ ಜೈಲಿನಿಂದ ಹೊರಗಡೆ ಕರೆದುಕೊಂಡು ಬರಲು ಸಾಕಷ್ಟು ಶ್ರಮವಹಿಸುವಂತಾಗಿದೆ. ಕೆಲ ನ್ಯಾಯಾಲಯಗಳು ಮಾತ್ರವಲ್ಲದೇ ಸುಪ್ರೀಂ ಕೋರ್ಟ್ನಲ್ಲಿ ಕೂಡ ಜಾಮೀನ ಅರ್ಜಿ ಹಾಕಿ ಪ್ರಯತ್ನಿಸಲಾಗಿದೆ. ಇದಕ್ಕೆಲ್ಲಾ ಸಾಕಷ್ಟು ಹಣ ವ್ಯಯಿಸಲಾಗಿದೆ. ಇದೇ ರೀತಿ ಕಾನೂನು ಹೋರಾಟ ಸಂಬಂಧ ಧನ್ವೀರ್ ಹಾಗೂ ವಿಜಯಲಕ್ಷ್ಮಿ ನಡುವೆ ಹಣ ವರ್ಗಾವಣೆಯಾಗಿದೆ. ಈ ಅಕ್ರಮ ವ್ಯವಹಾರ ತನಿಖೆಗೆ ಆಗ್ರಹಿಸಿ ದೂರು ದಾಖಲಾಗಿದೆ.
ಇಷ್ಟು ದೊಡ್ಡ ಮೊತ್ತದ ಹಣದ ಮೂಲ ಯಾವುದು? ಅಕ್ರಮ ವಹಿವಾಟಿನ ಹಿಂದಿನ ಉದ್ದೇಶ ಏನು ಎಂದು ಸೂಕ್ತ ತನಿಖೆಗೆ ವಕೀಲರಾದ ಪ್ರಶಾಂತ್ ಮೆಥಲ್ ಆಗ್ರಹಿಸಿದ್ದಾರೆ. ನಿಯಮಗಳ ಪ್ರಕಾರ 2 ಲಕ್ಷ ರೂ.ಗಿಂತ ಹೆಚ್ಚು ಮೊತ್ತವನ್ನು ನಗದು ರೂಪದಲ್ಲಿ ವ್ಯವಹರಿಸುವಂತಿಲ್ಲ. ಇದೀಗ ನಿಯಮ ಮೀರಿ 10 ಕೋಟಿ ರೂ. ನಗದು ರೂಪದಲ್ಲಿ ವ್ಯವಹಾರ ನಡೆಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.