ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲಿನಲ್ಲಿದ್ದಾರೆ. ಇತ್ತ ಸೋದರನಂತೆ ಇದ್ದ ಧನ್ವೀರ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವೆ ಶೀತಲ ಸಮರ ಶುರುವಾಗಿದೆ. ಧನ್ವೀರ್ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ ಎಂದು ವಿಜಯಲಕ್ಷ್ಮಿ ಮ್ಯಾನೇಜರ್ ನಾಗರಾಜ್ ದೂರು ನೀಡಿದ್ದಾರೆ. ವಿಜಯಲಕ್ಷ್ಮಿ ನಮ್ಮ ಮನೆಗೆ ಬಂದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಧನ್ವೀರ್ ತಂದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ದರ್ಶನ್ ಜೈಲಿನಿಂದ ಹೊರಗೆ ಬರುವುದು ಖುದ್ದು ಪತ್ನಿಗೆ ಇಷ್ಟ ಇಲ್ಲ ಎಂದು ಧನ್ವೀರ್ ಸ್ನೇಹಿತ ಹೇಳಿದ್ದಾನೆ ಎನ್ನುವ ಆಡಿಯೋ ವೈರಲ್ ಆಗ್ತಿದೆ.
ಇತ್ತೀಚೆಗೆ ವಿಜಯಲಕ್ಷ್ಮಿ ಹಾಗೂ ಧನ್ವೀರ್ ಸೋಶಿಯಲ್ ಮೀಡಿಯಾದಲ್ಲಿ ಮಾರ್ಮಿಕವಾಗಿ ಪೋಸ್ಟ್ ಮಾಡ್ತಾ ಬಂದಿದ್ದರು. ಇದನ್ನು ಗಮನಿಸಿದರೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿರುವುದು ಸ್ಪಷ್ಟವಾಗಿತ್ತು. ಇದೀಗ ಪೊಲೀಸ್ ಠಾಣೆ, ದೂರು, ಆಡಿಯೋ ಲೀಕ್ ಎನ್ನುತ್ತಿದ್ದಂತೆ ಈ ಸಂಘರ್ಷ ಬೀದಿಗೆ ಬಂದಿದೆ. ಸದ್ಯ ನಟ ಧನ್ವೀರ್ ಸ್ನೇಹಿತ ಶಶಿ ಹಾಗೂ ಅನಾಮಿಕ ವ್ಯಕ್ತಿ ಸಂಭಾಷಣೆ ನಡೆಸಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಇದರಲ್ಲಿ ಸ್ನೇಹಿತನ ಪರ ವಹಿಸಿಕೊಂಡು ಶಶಿ ಮಾತನಾಡಿರುವುದು ಗೊತ್ತಾಗುತ್ತಿದೆ.
ಒಂದು ಕಾರಿನ ವಿಚಾರದಲ್ಲಿ ಧನ್ವೀರ್ನ ಸಿಲುಕಿಸುವ ಪ್ರಯತ್ನ ನಡೀತಿದೆ ಎಂದು ಆಡಿಯೋದಲ್ಲಿ ಮಾತನಾಡಿರುವುದು ಕೇಳಬಹುದು. ಅಂದಹಾಗೆ ಆ ಕಾರಿಗೂ ಧನ್ವೀರ್ಗೂ ಯಾವುದೇ ಸಂಬಂಧ ಇಲ್ಲ. ಆದರೂ ಆತನನ್ನು ಬಲಿಪಶು ಮಾಡುವ ಯತ್ನ ನಡೀತಿದೆ ಎಂದು ಹೇಳಿರುವುದು ಗೊತ್ತಾಗ್ತಿದೆ. ಇನ್ನು "ದರ್ಶನ್ ಜೈಲಿನಿಂದ ಹೊರಬರುವುದು ಪತ್ನಿ ವಿಜಯಲಕ್ಷ್ಮೀಗೆ ಇಷ್ಟವಿಲ್ಲ" ಎನ್ನುವಂತೆ ಹೇಳಿರುವುದನ್ನು ಆಡಿಯೋದಲ್ಲಿ ಕೇಳಬಹುದು. ಇದು ಈಗ ಸಖತ್ ವೈರಲ್ ಆಗ್ತಿದೆ.
ಮೊದಲಿನಿಂದ ದರ್ಶನ್ ಆಪ್ತವಲಯದಲ್ಲಿ ಧನ್ವೀರ್ ಗುರ್ತಿಸಿಕೊಂಡಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸಂಕಷ್ಟಕ್ಕೆ ಸಿಲುಕಿದ ಬಳಿಕ ಅವರ ಕುಟುಂಬಕ್ಕೆ ಧನ್ವೀರ್ ಮತ್ತಷ್ಟು ಆಪ್ತರಾಗಿದ್ದರು. ದರ್ಶನ್ ಮಧ್ಯಂತರ ಜಾಮೀನು ಪಡೆದು ಬಳ್ಳಾರಿ ಜೈಲಿನಿಂದ ಬಿಡುಗಡೆಯಾದಾಗ ಸ್ವತಃ ಧನ್ವೀರ್ ಕಾರು ಚಲಾಯಿಸಿಕೊಂಡು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು. ವಿಜಯಲಕ್ಷ್ಮಿ ಜೊತೆ ದೇವಸ್ಥಾನ, ಕೋರ್ಟು ಕಚೇರಿ ಸುತ್ತಾಡಿದ್ದರು. ಧನ್ವೀರ್ ನಟನೆಯ ವಾಮನ ಚಿತ್ರಕ್ಕೂ ವಿಜಯಲಕ್ಷ್ಮಿ ಬೆಂಬಲವಾಗಿ ನಿಂತಿದ್ದರು. ಅಷ್ಟು ಆಪ್ತರಾಗಿದ್ದವರ ನಡುವೆಯೇ ಈಗ ಭಿನ್ನಾಭಿಪ್ರಾಯ ಮೂಡಿದೆ. ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸಿ ಎಲ್ಲರ ಮುಖವಾಡ ಕಳಚುತ್ತೀನಿ ಎಂದು ಧನ್ವೀರ್ ಎಚ್ಚರಿಕೆ ಕೊಟ್ಟಿದ್ದಾರೆ.