ಒಂದ್ಕಡೆ ದರ್ಶನ್ ಜೈಲಿನಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಇತ್ತ ನಂಬಿದವರೇ ತಿರುಗಿ ಬಿದ್ದಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ಹಾಗೂ ಧನ್ವೀರ್ ಗೌಡ ಕಿರಿಕ್ ಗೊತ್ತೇಯಿದೆ. ಒಂದ್ಕಾಲದಲ್ಲಿ ತಮ್ಮನಂದೆ ಇದ್ದ ಧನ್ವೀರ್ ಈಗ ವಿಜಯಲಕ್ಷ್ಮಿ ಬಗ್ಗೆ ಏನೇನೊ ಆರೋಪ ಮಾಡುತ್ತಿದ್ದಾರೆ. ಪತ್ನಿ ಹಾಗೂ ಕುಟುಂಬದದ ಬಗ್ಗೆ ಧನ್ವೀರ್ ಅವಹೇಳನಕಾರಿ ಹೇಳಿಕೆ ನೀಡದಂತೆ ತಡೆ ನೀಡಬೇಕೆಂದು ದರ್ಶನ್ ಕೋರ್ಟ್‌ಗೆ ಅರ್ಜಿ ಹಾಕಿದ್ದರು. ಕೋರ್ಟ್ ನಿರ್ಬಂಧಕಾಜ್ಞೆ ಜಾರಿ ಮಾಡಿತ್ತು. ಇದೀಗ ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಜಯಲಕ್ಷ್ಮಿ ದೂರ ದಾಖಲಿಸಿದ್ದು ಧನ್ವೀರ್ ತಮ್ಮ ವಿರುದ್ಧ ಮಾನನಷ್ಟ ಆಗುವಂತಹ ಹೇಳಿಕೆ ನೀಡಿದ್ದಾರೆ. ಹೇಳಿಕೆಗಳನ್ನು ಮಾಧ್ಯಮ ಹಾಗೂ ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 356(2) ರ ಅಡಿಯಲ್ಲಿ ಮಾನನಷ್ಟ ಆರೋಪ ಹೊರಿಸಲಾಗಿದ್ದು, ಆರೋಪಕ್ಕೆ ಸಂಬಂಧಿಸಿದ ಸಾಕ್ಷ್ಯವನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಹೇಳಿದ್ದಾರೆ. ಈ ಸಂಬಂಧ ಸಾಕ್ಷಿಗಳ ವಿಚಾರಣೆಗೆ ಅವಕಾಶ ನೀಡಬೇಕು, ಆರೋಪಿ ಧನ್ವೀರ್ ವಿರುದ್ಧ ಸೆಕ್ಷನ್ 227 ರ ಅಡಿಯಲ್ಲಿ ಸಮನ್ಸ್ ಜಾರಿಗೊಳಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ದರ್ಶನ್ ಹಾಗೂ ಧನ್ವೀರ್ ನಡುವೆ ಆತ್ಮೀಯ ಒಡನಾಟ ಇತ್ತು. ಸಹೋದರನಂತೆ ಧನ್ವೀರ್ ಬೆಂಬಲಕ್ಕೆ ನಿಂತಿದ್ದರು. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ ಬಳಿಕ ವಿಜಯಲಕ್ಷ್ಮಿ ಅವರೊಟ್ಟಿಗೆ ಧನ್ವೀರ್ ಕಾಣಿಸಿಕೊಳ್ಳುತ್ತಿದ್ದರು. ದರ್ಶನ್ ಮಧ್ಯಂತರ ಜಾಮೀನು ಪಡೆದಾಗ ಬಳ್ಳಾರಿ ಜೈಲಿನಿಂದ ಬೆಂಗಳೂರಿನವರೆಗೆ ಧನ್ವೀರ್ ಕಾರು ಚಾಲಾಯಿಸಿಕೊಂಡು ಕರೆತಂದಿದ್ದರು. ಆ ಬಳಿಕ ಕೂಡ ಕೋರ್ಟ್ ಕಚೇರಿ ಅಂತ ವಿಜಯಲಕ್ಷ್ಮಿ ಜೊತೆ ಧನ್ವೀರ್ ಇದ್ದರು. ಅತ್ತಿಗೆ, ಮೈದುನ ರೀತಿ ಇದ್ದವರು ದೂರಾಗಿದ್ದಾರೆ.
ಹಣಕಾಸಿನ ವಿಚಾರಕ್ಕೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗ್ತಿದೆ. ಭಾರೀ ಮೊತ್ತದ ಹಣವನ್ನು ಧನ್ವೀರ್ ಹಣ ವಾಪಸ್ ಕೊಟ್ಟಿಲ್ಲ, ಇದೇ ಕಾರಣಕ್ಕೆ ಇಬ್ಬರ ನಡುವೆ ಕಿರಿಕ್ ಆಗಿದೆ ಎಂದು ವರದಿಯಾಗಿದೆ. ವಿಜಯಲಕ್ಷ್ಮಿ ದೇವಸ್ಥಾನಕ್ಕೆ ಹೋಗುವುದು ಫೇಕ್, ದರ್ಶನ್ ಅಣ್ಣ ಜೈಲಿನಿಂದ ಹೊರಬರುವುದು ಆಕೆಗೆ ಇಷ್ಟವಿಲ್ಲ. ಮುಂದೆ ಆಕೆ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ. ಆಕೆಯ ನಡೆಯೇ ಅರ್ಥವಾಗ್ತಿಲ್ಲ ಎನ್ನುವ ಅರ್ಥದಲ್ಲಿ ಧನ್ವೀರ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಇದೇ ಕಾರಣಕ್ಕೆ ವಿಜಯಲಕ್ಷ್ಮಿ ಈಗ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.