ನಟ ಧನ್ವೀರ್ ಹಾಗೂ ವಿಜಯಲಕ್ಷ್ಮಿ ದರ್ಶನ್ ಜಟಾಪಟಿ ದಿನದಿಂದ ದಿನಕ್ಕೆ ಬೇರೆ ಬೇರೆ ತಿರುವು ಪಡೆಯುತ್ತಿದೆ. ಆರೋಪ ಪ್ರತ್ಯಾರೋಪಗಳು ನಾನಾ ಅನುಮಾನಗಳಿಗೆ ಕಾರಣವಾಗಿದೆ. ದರ್ಶನ್ ಅವರನ್ನು ಜೈಲಿನಿಂದ ಹೊರಗೆ ಕರೆದುಕೊಂಡು ಬರಲು ಪತ್ನಿ ವಿಜಯಲಕ್ಷ್ಮಿ ನಾನಾ ಕಸರತ್ತು ನಡೆಸುತ್ತಿರುವುದು ಗೊತ್ತೇಯಿದೆ. ಆದರೆ ಅದೆಲ್ಲಾ ಸುಳ್ಳು ಎಂದು ಸ್ವತಃ ಧನ್ವೀರ್ ಈಗ ಆರೋಪ ಮಾಡಿದ್ದಾರೆ.
ಧನ್ವೀರ್ಗೆ ವಿಜಯಲಕ್ಷ್ಮಿ 10 ಕೋಟಿ ರೂ. ಕೊಟ್ಟಿದ್ದಾರೆ. ಅದರಲ್ಲಿ ಉಳಿದ ಹಣ ಕೊಡುವಂತೆ ಕೇಳುತ್ತಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎನ್ನುವ ವಾದ ಒಂದು ಕಡೆ. ಆದರೆ ಅದೆಲ್ಲಾ ಸುಳ್ಳು ಎಂದು ಧನ್ವೀರ್ ಆರೋಪಿಸುತ್ತಿದ್ದಾರೆ. ಯಾವುದೇ ಹಣ ನಾನು ಪಡೆದಿಲ್ಲ. ಅವರ(ವಿಜಯಲಕ್ಷ್ಮಿ) ಷಡ್ಯಂತ್ರವನ್ನು ನಾನು ಬಯಲು ಮಾಡ್ತೀನಿ ಎನ್ನುವ ಕಾರಣಕ್ಕೆ ನನ್ನನ್ನು ತುಳಿಯುವ ಪ್ರಯತ್ನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲರ ಮುಖವಾಡ ಕಳಚುವ ಸಮಯ ಬಂದಿದೆ ಎಂದು ಸವಾಲು ಹಾಕಿದ್ದಾರೆ.
ತಮ್ಮ ವಿರುದ್ಧ ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ಮಾಡಿರುವ ಆರೋಪಗಳಿಗೆ ನ್ಯೂಸ್ ಫಸ್ಟ್ ವಾಹಿನಿಗೆ ಧನ್ವೀರ್ ಗೌಡ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ವಿಜಯಲಕ್ಷ್ಮಿ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿರುವುದೆಲ್ಲಾ ಫೇಕ್. ಇನ್ನು ನಾಲ್ಕೈದು ವರ್ಷ ದರ್ಶನ್ ಜೈಲಿನಿಂದ ಹೊರಗೆ ಬರುವುದು ಪತ್ನಿಗೆ ಇಷ್ಟವಿಲ್ಲ ಎಂದು ಧನ್ವೀರ್ ಆರೋಪ ಮಾಡಿರುವುದು ವೈರಲ್ ಆಗ್ತಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲಿಗೆ ಸೇರಿದ ದಿನದಿಂದ ಪತ್ನಿ ವಿಜಯಲಕ್ಷ್ಮಿ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತಲೇ ಬರ್ತಿದ್ದಾರೆ. ಮತ್ತೊಂದು ಸಾಕಷ್ಟು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟ, ಬೆಂಗಳೂರಿನ ಬನಶಂಕರಿ, ಬಂಡೆ ಮಹಾಕಾಳಿ ದೇವಸ್ಥಾನಗಳಿಂದ ಹಿಡಿದು ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಕ್ಯಾ ದೇವಾಲಯದವರೆಗೆ ನಾನಾ ದೇವಸ್ಥಾನಗಳಿಗೆ ಭೇಟಿ ನೀಡುತ್ತಲೇ ಇದ್ದಾರೆ. ಇದೆಲ್ಲಾ ಸುಳ್ಳು ಎಂದು ಧನ್ವೀರ್ ಹೇಳಿರುವುದು ಅಚ್ಚರಿ ಮೂಡಿಸಿದೆ.
ವಿಜಯಲಕ್ಷ್ಮಿಗೆ ಇಷ್ಟ ಇಲ್ಲ!
ವಿಜಯಲಕ್ಷ್ಮಿ ಫೇಕ್ ಪರ್ಸನಾಲಿಟಿ.. ಜನರ ಮುಂದೆ ಒಂದು ತರ, ಹಿಂದೆ ಒಂದು ತರ ಇರ್ತಾರೆ. ಅದು ನಮಗೆ ಗೊತ್ತಿಲ್ಲ.. ಮೇ 15ರಂದು ದರ್ಶನ್ ಸರ್ ಕೇಸ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆರ್ಡರ್ ಒಂದು ಆಯ್ತು.. ಅದಾಗಿ 15 ದಿನಗಳಲ್ಲಿ ಮತ್ತೊಂದು ಬೇಲ್ ಅರ್ಜಿಗೆ ತಯಾರಿ ನಡೀತಿತ್ತು. ಆದ್ರೆ ದರ್ಶನ್ ಸರ್ ಹೊರಗೆ ಬರೋದು ವಿಜಯಲಕ್ಷ್ಮಿ ಅವರಿಗೆ ಇಷ್ಟವಿರಲಿಲ್ಲ. ಅದು ಯಾಕೆ ಎನ್ನುವುದನ್ನು ವಿಜಯಲಕ್ಷ್ಮಿ ಅವರನ್ನ ಕೇಳಿ" ಎಂದು ಧನ್ವೀರ್ ಹೇಳಿದ್ದಾರೆ.
ಚುನಾವಣೆಗೆ ವಿಜಿ ಸ್ಪರ್ಧೆ ?
ದರ್ಶನ್ ಜೈಲಿನಿಂದ ಹೊರಗೆ ಬರದೇ ಇರುವುದರಿಂದ ವಿಜಯಲಕ್ಷ್ಮಿ ಅವರಿಗೆ ಏಉ ಲಾಭ ಎನ್ನುವ ಪ್ರಶ್ನೆಗೆ ಧನ್ವೀರ್ "ಯಾಕೆ ದರ್ಶನ್ ಅವರನ್ನ ಇನ್ನು ಜೈಲಿನಲ್ಲಿ ಕೂರಿಸಿದ್ದಾರೆ. ಯಾರ ಜೊತೆ ಕೈಜೋಡಿಸಿದ್ದಾರೆ. 2028ಕ್ಕೆ ಏನೆಲ್ಲಾ ತಯಾರಿ ನಡೆಸ್ತಿದ್ದಾರೆ ಅವ್ರನ್ನೇ ಕೇಳಿ ಎಂದಿದ್ದಾರೆ. 2028ರಲ್ಲಿ ವಿಜಯಲಕ್ಷ್ಮಿ ಚುನಾವಣೆಗೆ ಸ್ಪರ್ಧಿಸ್ತಾರಾ ಎನ್ನುವ ಪ್ರಶ್ನೆಗೆ "ಅವ್ರನ್ನೇ ಕೇಳಿ" ಎಂದು ನಕ್ಕಿದ್ದಾರೆ. ಆ ವಾಟ್ಸಪ್ ಚಾಟ್ ಹೊರಗೆ ಬಂದ್ರೆ ಎಲ್ಲರ ಬಣ್ಣ ಬಯಲಾಗುತ್ತದೆ" ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.