ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಮೊದಲ ಭಾಗ ಬಿಡುಗಡೆ ಅಣಿಯಾಗಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಸಹ ಆರಂಭವಾಗಿದೆ. ಕರ್ನಾಟಕದಲ್ಲಿ ಸ್ವತಃ ಯಶ್ ತಮ್ಮ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ವಿತರಣೆಗೆ ಮುಂದಾಗಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಹೊಸ ಬೇಡಿಕೆ ಇಟ್ಟಿದ್ದಾರೆ.
ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ 'ರಾಮಾಯಣ' ಸಿನಿಮಾ ನಿರ್ಮಾಣವಾಗಿದೆ. ಈಗಾಗಲೇ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಬೇರೆ ಬೇರೆ ಕಡೆಗಳಲ್ಲಿ ಭಾರೀ ಮೊತ್ತಕ್ಕೆ ಚಿತ್ರದ ವಿತರಣೆ ಹಕ್ಕು ಮಾರಾಟವಾಗಿದೆ. ಆಂಧ್ರ, ತೆಲಂಗಾಣದಲ್ಲಿ ದಿಲ್ರಾಜು ಒಡೆತನದ SVC ಸಂಸ್ಥೆ ಸಿನಿಮಾ ಬಿಡುಗಡೆ ಮಾಡ್ತಿದೆ. ಧರ್ಮ ಪ್ರೊಡಕ್ಷನ್ಸ್ ಮೂಲಕ ಕರಣ್ ಜೋಹರ್ ಉತ್ತರ ಭಾರತದಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತೆಗೆದುಕೊಂಡು ಹೋಗ್ತಿದ್ದಾರೆ.
'ಟಾಕ್ಸಿಕ್' ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಕರ್ನಾಟಕದಲ್ಲಿ ಯಶ್ ರಿಲೀಸ್ ಮಾಡಿದ್ದರು. ಆದರೆ 'ರಾಮಾಯಣ' ಚಿತ್ರವನ್ನು ಏಕಾಂಗಿಯಾಗಿ ತೆರೆಗೆ ತರಲು ಮುಂದಾಗಿದ್ದಾರೆ. ಇದೆಲ್ಲದ ನಡುವೆ ಅಭಿಮಾನಿಗಳು ನಿಮ್ಮದೇ ಮಲ್ಟಿಪ್ಲೆಕ್ಸ್ ಚೈನ್ ಆರಂಭಿಸಿ ಬಾಸ್ ಎಂದು ಮನವಿ ಮಾಡುತ್ತಿದ್ದಾರೆ. ಯಶ್ ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಾರೆ. ಗೆದ್ದರೂ ಸೋತರೂ ತಮ್ಮ ನಿರ್ಧಾರಗಳಿಂದ ಹಿಂದೆ ಸರಿಯುವವರಲ್ಲ. ಈಗ ಕೋಟಿ ಕೋಟಿ ಸುರಿದು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಹಾಗಾಗಿ ಯಾಕೆ ತಮ್ಮದೇ ಮಾನ್ಸ್ಟರ್ ಮೈಂಡ್ ಹೆಸರಿನಲ್ಲಿ ಥಿಯೇಟರ್ ಆರಂಭಿಸಬಾರದು ಎಂದು ಕೆಲವರು ಕೇಳುತ್ತಿದ್ದಾರೆ.
ಮಹೇಶ್ ಬಾಬು, ಅಲ್ಲು ಅರ್ಜುನ್ ರೀತಿಯ ತೆಲುಗಿನ ಸ್ಟಾರ್ ನಟರು ಮಲ್ಟಿಪ್ಲೆಕ್ಸ್ಗಳನ್ನು ಆರಂಭಿಸಿದ್ದಾರೆ. ಮಹೇಶ್ ಬಾಬು ಹೈದರಾಬಾದ್ ಮಾತ್ರವಲ್ಲದೇ ಬೆಂಗಳೂರಿನಲ್ಲಿ AMB ಕಪಾಲಿ ಮಲ್ಟಿಪ್ಲೆಕ್ಸ್ ಕಾಂಪ್ಲೆಕ್ಸ್ ಹೊಂದಿದ್ದಾರೆ. ಚಿರಂಜೀವಿ ಕೂಡ ಹೈದರಾಬಾದ್ನಲ್ಲಿ ದೊಡ್ಡ ಸ್ಕ್ರೀನ್ ಇರುವ ಮಲ್ಟಿಪ್ಲೆಕ್ಸ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕನ್ನಡದ ಕಲಾವಿದರು ಯಾರು ಕೂಡ ಇಂತಹ ಸಾಹಸ ಮಾಡುತ್ತಿಲ್ಲ. ಯಶ್ ಮಾತ್ರ ಈ ಪ್ರಯತ್ನ ಮಾಡಲು ಸಾಧ್ಯ ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ.
ಯಶ್ ಹೆಸರು ದೇಶಾದ್ಯಂತ ಸದ್ದು ಮಾಡ್ತಿದೆ. ಹೊರ ರಾಜ್ಯಗಳಲ್ಲಿ ರಾಕಿಂಗ್ ಸ್ಟಾರ್ ಕ್ರೇಜ್ ಹೇಗಿದೆ ಎಂದು ಬಿಡಿಸಿ ಹೇಳಬೇಕಿಲ್ಲ. ಕರ್ನಾಟಕ ಮಾತ್ರವಲ್ಲ ದೇಶದ ವಿವಿಧ ನಗರಗಳಲ್ಲಿ ಯಶ್ ಮಲ್ಟಿಪ್ಲೆಕ್ಸ್ಗಳನ್ನು ನಿರ್ಮಿಸಬಹುದು ಎಂದು ಅಭಿಮಾನಿಗಳು ಸಲಹೆ ನೀಡುತ್ತಿದ್ದಾರೆ. ಏಕಾಂಗಿ ಆಗಿ ಮಾಡಲು ಸಾಧ್ಯವಾಗದಿದ್ದರೂ ಅವರೊಟ್ಟಿಗೆ ಕೈಜೋಡಿಸಲು ಸಾಕಷ್ಟು ಉದ್ಯಮಿಗಳು ಸಿದ್ಧರಿದ್ದಾರೆ. ಹಾಗಾಗಿ ಇದು ಕಷ್ಟವಾಗುವುದಿಲ್ಲ ಎಂದು ಸಲಹೆ ನೀಡುತ್ತಿದ್ದಾರೆ.
ಕನ್ನಡದಲ್ಲಿ ನಿಯಮಿತವಾಗಿ ಒಳ್ಳೆ ಸಿನಿಮಾಗಳು ಬರಲ್ಲ. ಬೇರೆ ಭಾಷೆಯ ಸಿನಿಮಾಗಳನ್ನು ಯಶ್ ತಮ್ಮ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡಿದರೆ ಅದಕ್ಕೂ ಕನ್ನಡಿಗರ ಆಕ್ರೋಶ ಎದುರಿಸಬೇಕಾಗುತ್ತದೆ. ಹಾಗಾಗಿ ಯಶ್ ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡುವುದು ಬೇಡ ಎಂದು ಕೆಲವರು ಸಲಹೆ ನೀಡುತ್ತಿದ್ದಾರೆ. ಒಟ್ಟಾರೆ ಮಲ್ಟಿಪ್ಲೆಕ್ಸ್ ನಿರ್ಮಾಣದ ದಿಶೆಯಲ್ಲಿ ರಾಕಿಂಗ್ ಸ್ಟಾರ್ ಮನಸ್ಸು ಮಾಡಿದ್ರೆ ಅದು ನಿಜಕ್ಕೂ ಒಳ್ಳೆ ಬೆಳವಣೆಗೆ ಎನ್ನುವುದರಲ್ಲಿ ಎರಡು ಮಾತಿಲ್ಲ.