ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಎರಡು ಭಾಗಗಳಾಗಿ ಪ್ರೇಕ್ಷಕರ ಮುಂದೆ ಬರ್ತಿದೆ. ರಾವಣನಾಗಿ ನಟಿಸುವುದರ ಜೊತೆಗೆ ಯಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಮಿತ್ ಮಲ್ಹೋತ್ರಾ ಜೊತೆ ಸೇರಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. 'ಟಾಕ್ಸಿಕ್' ಚಿತ್ರಕ್ಕೂ ಯಶ್ ಸಹ ನಿರ್ಮಾಪಕರಾಗಿದ್ದರು. ಚಿತ್ರಕ್ಕೆ DNEG ಸಂಸ್ಥೆ ಗ್ರಾಫಿಕ್ಸ್ ಮಾಡಿತ್ತು. ಈ ಬಗ್ಗೆ ನಮಿತ್ ಮಲ್ಹೋತ್ರಾ ಜೊತೆ ಚರ್ಚಿಸುವ ವೇಳೆ 'ರಾಮಾಯಣ' ಚಿತ್ರದ ಪ್ರಸ್ತಾಪವಾಗಿತ್ತು.
ಹೀಗೆ ಯಶ್ 'ರಾಮಾಯಣ' ಚಿತ್ರದ ಭಾಗವಾಗುವಂತಾಯಿತು. ಆದರೆ 'ರಾಮಾಯಣ' ಕಥೆಯನ್ನು ದೊಡ್ಡಮಟ್ಟದಲ್ಲಿ ತೆರೆಮೇಲೆ ತರುವ ಪ್ರಯತ್ನ ಬಹಳ ದಿನಗಳಿಂದ ಬಾಲಿವುಡ್ ಅಂಗಳದಲ್ಲಿ ನಡೀತಿತ್ತು. ಪ್ರಭಾಸ್ ಜೊತೆ ಓಂ ರಾವುತ್ 'ಆದಿಪುರುಷ್' ಸಿನಿಮಾ ಮಾಡುವ ಮುನ್ನ ಇಂತಹ ಪ್ರಯತ್ನಗಳು ನಡೆದಿತ್ತು. ದಶಕದ ಹಿಂದೆ 'ದಿ ಲೆಜೆಂಡ್ ರಾಮ್' ಹೆಸರಿನಲ್ಲಿ ಸಂಜಯ್ ಖಾನ್ 'ರಾಮಾಯಣ' ಕಾವ್ಯಾ ತೆರೆಗೆ ತರುವ ಪ್ರಯತ್ನ ಮಾಡಿದ್ದರು. ಆಗ ರಾವಣ ಪಾತ್ರಕ್ಕೆ ಹೃತಿಕ್ ರೋಷನ್ ಸೂಕ್ತ ಆಯ್ಕೆ ಎಂದುಕೊಂಡಿದ್ದರು.
ನಿತೇಶ್ ತಿವಾರಿ ನಿರ್ದೇಶನದಲ್ಲಿ 'ರಾಮಾಯಣ' ಪ್ರಾಜೆಕ್ಟ್ ಶುರುವಾದಾಗ ಶ್ರೀರಾಮನ ಪಾತ್ರಕ್ಕೆ ರಣ್ಬೀರ್ ಕಪೂರ್ ಸೂಕ್ತ ಎಂದುಕೊಂಡಿದ್ದರು. ಆದರೆ ಸೀತೆ ಹಾಗೂ ರಾವಣನ ಪಾತ್ರ ಯಾರು ಮಾಡಬೇಕು ಎನ್ನುವುದು ಖಚಿತವಾಗಿರಲಿಲ್ಲ. ರಾವಣ ಪಾತ್ರ ಹೃತಿಕ್ ಮಾಡಿದ್ರೆ, ಚೆನ್ನಾಗಿರುತ್ತೆ ಎಂದು ಭಾವಿಸಲಾಗಿತ್ತು. ಆದರೆ ವಿಕ್ರಂ ವೇದ ಹಾಗೂ ವಾರ್ ಸರಣಿ ಸಿನಿಮಾಗಳಲ್ಲಿ ನೆಗೆಟಿವ್ ಶೇಡ್ ಪಾತ್ರಗಳಲ್ಲಿ ಅವ್ರು ನಟಿಸಿದ್ದರು. ಹೀರೊ ಆಗಿ ನಟಿಸುತತ್ತಿರುವಾಗಲೇ ಸಂಪೂರ್ಣ ನೆಗೆಟಿವ್ ಪಾತ್ರ ಬೇಡ ಎಂದುಕೊಂಡರು ಎನ್ನಲಾಗ್ತಿದೆ. ಅಷ್ಟರಲ್ಲೇ ನಮಿತ್ ಹಾಗೂ ಯಶ್ ಪರಿಚಯವಾಗಿತ್ತು.
ಸದ್ಯ ರಾವಣನಾಗಿ ಯಶ್ ಅಬ್ಬರಿಸಿದ್ದು ಚಿತ್ರದ ಪೋಸ್ಟರ್, ಟೀಸರ್ ಹಾಗೂ ಟ್ರೈಲರ್ಗಳಲ್ಲಿ ಗಮನ ಸೆಳೆದಿದ್ದಾರೆ. ಚಿತ್ರದ ಪ್ರಚಾರ ಜೋರಾಗಿ ನಡೀತಿದೆ. ದೊಡ್ಡಮಟ್ಟದಲ್ಲಿ ಸಿನಿಮಾ ಸದ್ದು ಮಾಡುವ ನಿರೀಕ್ಷೆಯಿದೆ.